ಶ್ರೀನಗರ: ಆರು ವರ್ಷಗಳ ನಂತರ ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದಲ್ಲಿ ಇಂದಿನಿಂದ ವಿಧಾನಸಭೆ ಅಧಿವೇಶನ ನಡೆಯಲಿದೆ. ಅಧಿವೇಶನಕ್ಕೂ ಮುನ್ನ ಸ್ಪೀಕರ್ ಆಯ್ಕೆ ನಡೆಯುತ್ತದೆ. ನೂತನ ಸ್ಪೀಕರ್ ಆಗಿ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಮತ್ತು ಶಾಸಕ ಅಬ್ದುಲ್ ರಹೀಮ್ ರಾಥರ್ ಅವರನ್ನು ನೇಮಿಸುವ ಸಾಧ್ಯತೆ ಇದೆ. ಸ್ಪೀಕರ್ ಆಯ್ಕೆಯಾದ ನಂತರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಸದನವನ್ನು ಉದ್ದೇಶಿಸಿ ಉದ್ಘಾಟನಾ ಭಾಷಣ ಮಾಡುವರು.
ಅಧಿವೇಶನದ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ಶ್ರೀನಗರದಲ್ಲಿ ಮೈತ್ರಿಪಕ್ಷಗಳ ಪ್ರತ್ಯೇಕ ಸಭೆ ನಡೆಯಿತು. ಎನ್‌ಸಿ (ನ್ಯಾಷನಲ್ ಕಾನ್ಫರೆನ್ಸ್) ಸಭೆ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅಧ್ಯಕ್ಷತೆಯಲ್ಲಿ ನಡೆದರೆ, ಕಾಂಗ್ರೆಸ್ ಸಭೆ ಪಕ್ಷದ ರಾಜ್ಯಾಧ್ಯಕ್ಷ ತಾರಿಕ್ ಹಮೀದ್ ಕರ್ರಾ ನೇತೃತ್ವದಲ್ಲಿ ನಡೆಯಿತು.
ಈ ಸಭೆಯ ಬಳಿಕ ಮಾತನಾಡಿದ ಹಮೀದ್ ಕರ್ರಾ, "ಅಧಿವೇಶನಕ್ಕೆ ಸಂಬಂಧಪಟ್ಟ ಕೆಲವು ವಿಷಯಗಳ ಕುರಿತು ಚರ್ಚಿಸಿದ್ದೇವೆ" ಎಂದರು.
ಹಿರಿಯ ಎನ್‌ಸಿ ನಾಯಕ ಹಾಗೂ ಶಾಸಕ ಅಬ್ದುಲ್ ರಹೀಮ್ ರಾಥರ್ ಅವರ ಹೆಸರನ್ನು ಸ್ಪೀಕರ್ ಸ್ಥಾನಕ್ಕೆ ಪ್ರಸ್ತಾಪಿಸಲಾಗಿದೆ. 28 ಶಾಸಕರನ್ನು ಹೊಂದಿರುವ ಬಿಜೆಪಿ ಉಪ ಸ್ಪೀಕರ್ ಸ್ಥಾನಕ್ಕೆ ಶಾಸಕ ನರೇಂದರ್ ಸಿಂಗ್ ಹೆಸರನ್ನು ಈಗಾಗಲೇ ಪ್ರಸ್ತಾಪಿಸಿದೆ.
ಉಗ್ರರ ದಾಳಿ: ನಿನ್ನೆ (ಭಾನುವಾರ) ಶ್ರೀನಗರದ ವಾರದ ಬಜಾರ್‌ನಲ್ಲಿ ಸಾರ್ವಜನಿಕರ ಮೇಲೆ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದಾರೆ. ಈ ಘಟನೆಯನ್ನು ಸಿಎಂ ಒಮರ್ ಅಬ್ದುಲ್ಲಾ ಖಂಡಿಸಿದ್ದು, "ಉಗ್ರರ ದಾಳಿಯನ್ನು ತಡೆಯಲು ಭದ್ರತಾ ಪಡೆಗಳು ಸಿದ್ಧತೆ ಮಾಡಿಕೊಳ್ಳಬೇಕು" ಎಂದು ಹೇಳಿದ್ದಾರೆ.
The last few days have been dominated by headlines of attacks & encounters in parts of the valley. Today’s news of a grenade attack on innocent shoppers at the ‘Sunday market’ in Srinagar is deeply disturbing. There can be no justification for targeting innocent civilians. The…
— Omar Abdullah (@OmarAbdullah) November 3, 2024
"ಜಮ್ಮು ಮತ್ತು ಕಾಶ್ಮೀರದಲ್ಲಿ ಗೊಂದಲ ಸೃಷ್ಟಿಸಿಲು ಈ ರೀತಿ ಮಾಡಲಾಗುತ್ತಿದೆ. ಸಾಮಾನ್ಯ ಜನರನ್ನು ಗುರಿ ಮಾಡಿಕೊಂಡು ದಾಳಿ ನಡೆಸುವುದನ್ನು ಸಹಿಸಲು ಸಾಧ್ಯವಿಲ್ಲ. ಕಳೆದ ಕೆಲವು ದಿನಗಳಿಂದ ಉಗ್ರರ ಅಟ್ಟಹಾಸ ಮೇರೆ ಮೀರಿದೆ. ಜನ ನಿರ್ಭಯವಾಗಿ ಜೀವನ ಸಾಗಿಸಲು ಅಗತ್ಯವಿರುವ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಶಾಂತಿ ಕದಡುವ ದುಷ್ಟಶಕ್ತಿಗಳನ್ನು ಮಟ್ಟ ಹಾಕಲಾಗುವುದು" ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಭಾನುವಾರ ನಡೆದ ದಾಳಿಯಲ್ಲಿ 10ಕ್ಕೂ ಹೆಚ್ಚು ನಾಗರಿಕರು ಗಾಯಗೊಂಡಿದ್ದು, ಓರ್ವ ಭಯೋತ್ಪಾದಕನನ್ನು ಸೇನೆ ಹೊಡೆದುರುಳಿಸಿದೆ. ಅಕ್ಟೋಬರ್ ತಿಂಗಳೊಂದರಲ್ಲೇ ಉಗ್ರರ ದಾಳಿಗೆ 18 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ನವೆಂಬರ್ 2ರ ಶನಿವಾರದಂದು ಶ್ರೀನಗರ ನಗರ ಮತ್ತು ಅನಂತನಾಗ್ ಜಿಲ್ಲೆಯಲ್ಲಿ ನಡೆದ ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಮೂವರು ಉಗ್ರರು ಹತರಾಗಿದ್ದರು. ಇದಕ್ಕೂ ಮುನ್ನ ಕೇಂದ್ರ ಕಾಶ್ಮೀರದ ಬುದ್ಗಾಮ್‌ನಲ್ಲಿ ಉಗ್ರರು ನಡೆಸಿದ ಉದ್ದೇಶಿತ ದಾಳಿಯಲ್ಲಿ ಇಬ್ಬರು ಸ್ಥಳೀಯೇತರ ಕಾರ್ಮಿಕರು ಗಾಯಗೊಂಡಿದ್ದರು.
ಪಾಕ್ ನುಸುಳುಕೋರ ಸೆರೆ: ರಾಜಸ್ಥಾನದ ಸರ್ಹಾದಿ ಜಿಲ್ಲೆಯ ಶ್ರೀಕರನ್‌ಪುರ ಗಡಿ ಬಳಿ ಪಾಕಿಸ್ತಾನಿ ಪ್ರಜೆಯೊಬ್ಬ ಭಾರತದ ಗಡಿ ಪ್ರವೇಶಿಸುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾನೆ. ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಆತನನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದೆ.
ಇದನ್ನೂ ಓದಿ: ಹಳ್ಳಿಗರಂತೆ ವೇಷ ಧರಿಸಿ ಬಂದು ದಾಳಿ ಮಾಡಿದ ನಕ್ಸಲರು: ಇಬ್ಬರು ಯೋಧರಿಗೆ ಗಂಭೀರ ಗಾಯ