Army Dog Martyred: ಜಮ್ಮು ಮತ್ತು ಕಾಶ್ಮೀರದ ಅಖ್ನೂರ್‌ನಲ್ಲಿ ಸೋಮವಾರ ನಡೆದ ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆಗಳು ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ. ಸುಂದರ್‌ಬನಿ ಸೆಕ್ಟರ್‌ನ ಅಸಾನ್ ಬಳಿ ಸೇನಾ ಬೆಂಗಾವಲು ಪಡೆಯ ಮೇಲೆ ಉಗ್ರರು ಬೆಳಗ್ಗೆ ಗುಂಡಿನ ದಾಳಿ ನಡೆಸಿದ ಪರಿಣಾಮ ಭಾರತೀಯ ಸೇನೆಯ ಶ್ವಾನ ಫ್ಯಾಂಟಮ್ ಪ್ರಾಣ ಕಳೆದುಕೊಂಡಿದೆ.
ಫ್ಯಾಂಟಮ್ ಬೆಲ್ಜಿಯನ್ ಮಾಲಿನೋಯಿಸ್ ತಳಿಯ ಶ್ವಾನ. ಅದು 25 ಮೇ 2020 ರಂದು ಜನಿಸಿತ್ತು. "ಸೇನಾ ಶ್ವಾನ ಆಗಿರುವ ಫ್ಯಾಂಟಮ್ ರಾಷ್ಟ್ರಕ್ಕೆ ಸೇವೆ ಸಲ್ಲಿಸುವಾಗ ಪ್ರಾಣ ತ್ಯಾಗ ಮಾಡಿದೆ. ಸಿಕ್ಕಿಬಿದ್ದ ಭಯೋತ್ಪಾದಕರ ಮೇಲೆ ಪಡೆಗಳು ಗುಂಡಿನ ದಾಳಿ ನಡೆಸುತ್ತಿರುವಾಗ ಫ್ಯಾಂಟಮ್ ಶತ್ರುಗಳ ಗುಂಡಿಗೆ ಗಾಯಗೊಂಡಿತ್ತು. ಮಾರಣಾಂತಿಕ ಗಾಯದಿಂದ ಬಳಲುತ್ತಿದ್ದ ಫ್ಯಾಂಟಮ್ಗೆ ಚಿಕಿತ್ಸೆ ನೀಡಲಾಗಿತ್ತು. ಆದ್ರೆ ಫ್ಯಾಂಟಮ್ ಕೊನೆಗೂ ಹುತಾತ್ಮವಾಯಿತು. ಅದರ ಧೈರ್ಯ, ನಿಷ್ಠೆ ಮತ್ತು ಸಮರ್ಪಣೆಯನ್ನು ಎಂದಿಗೂ ಮರೆಯಲಾಗದು. ಉಗ್ರಗಾಮಿಗಳನ್ನು ಪತ್ತೆಹಚ್ಚುವ ಸಂದರ್ಭದ ಕಾರ್ಯಾಚರಣೆಯಲ್ಲಿ ಹುತಾತ್ಮವಾದ ಫ್ಯಾಂಟಮ್ ವಿಶೇಷ ಪ್ಯಾರಾ ಪಡೆಗಳ ಭಾಗವಾಗಿತ್ತು" ಎಂದು ವೈಟ್ ನೈಟ್ ಕಾರ್ಪ್ಸ್ ಎಕ್ಸ್ ಮೂಲಕ ತಿಳಿಸಿದೆ.
Update
— White Knight Corps (@Whiteknight_IA) October 28, 2024
We salute the supreme sacrifice of our true hero—a valiant #IndianArmy Dog, #Phantom.
As our troops were closing in on the trapped terrorists, #Phantom drew enemy fire, sustaining fatal injuries. His courage, loyalty, and dedication will never be forgotten.
In the… pic.twitter.com/XhTQtFQFJg
ಹುತಾತ್ಮ ಶ್ವಾನಕ್ಕೆ ಶ್ರದ್ಧಾಂಜಲಿ: ಭಾರತೀಯ ಸೇನೆಯು ಹುತಾತ್ಮ ಶ್ವಾನಕ್ಕೆ ಶ್ರದ್ಧಾಂಜಲಿ ಸಲ್ಲಿಸಿದ್ದು, ಅದರ ಅಸಾಧಾರಣ ಶೌರ್ಯ ಮತ್ತು ಸಮರ್ಪಣೆಯನ್ನು ಗುರುತಿಸಿದೆ. ಗುಂಡಿನ ದಾಳಿ ಬಳಿಕ ಉಗ್ರರು ಅರಣ್ಯದತ್ತ ಪರಾರಿಯಾಗಿದ್ದಾರೆ. ಸೇನೆಯು ಪ್ರದೇಶವನ್ನು ಸುತ್ತುವರಿದು ಶೋಧ ಕಾರ್ಯಾಚರಣೆ ನಡೆಸಿತು. ಈ ಸಮಯದಲ್ಲಿ ಫ್ಯಾಂಟಮ್ ಶತ್ರುಗಳ ಗುಂಡೇಟಿಗೆ ಬಲಿಯಾಯಿತು. ಸುಮಾರು 5 ಗಂಟೆಗಳ ಹೋರಾಟದ ಬಳಿಕ ಸೇನೆ ಮೂವರು ಉಗ್ರರನ್ನು ಹೊಡೆದುರುಳಿಸಿತು.
ಇದೇ ವೇಳೆ ಜಮ್ಮುವಿನ ರಕ್ಷಣಾ ಪಿಆರ್‌ಒ ಎಕ್ಸ್ನಲ್ಲಿ ಪೋಸ್ಟ್ ಮಾಡಿ, "ನಮ್ಮ ಶ್ವಾನ ಫ್ಯಾಂಟಮ್‌ನ ಸರ್ವೋಚ್ಚ ತ್ಯಾಗಕ್ಕೆ ನಮನ ಸಲ್ಲಿಸುತ್ತೇವೆ. ನಮ್ಮ ಸೈನಿಕರು ಸಿಕ್ಕಿಬಿದ್ದ ಭಯೋತ್ಪಾದಕರ ಬಳಿಗೆ ತೆರಳುತ್ತಿದ್ದಾಗ ಫ್ಯಾಂಟಮ್ ಶತ್ರುಗಳ ಗುಂಡಿಗೆ ಬಲಿಯಾಯಿತು. ಅವರ ಧೈರ್ಯ, ನಿಷ್ಠೆ ಮತ್ತು ಸಮರ್ಪಣೆ ಎಂದಿಗೂ ಮರೆಯಲು ಸಾಧ್ಯವಿಲ್ಲ" ಎಂದು ಹೇಳಿದರು. "ಒಬ್ಬ ಭಯೋತ್ಪಾದಕನ ದೇಹ ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಗಳು ಪ್ರಗತಿಯಲ್ಲಿವೆ," ಎಂದು ಸೇನಾ ವಕ್ತಾರರು ಮತ್ತೊಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಫ್ಯಾಂಟಮ್ K9 ಘಟಕದ ಸದಸ್ಯ: ಫ್ಯಾಂಟಮ್ K9 ಘಟಕದ ಆಕ್ರಮಣಕಾರಿ ಶ್ವಾನಗಳ ಭಾಗವಾಗಿತ್ತು. ಇದು ತರಬೇತಿ ಪಡೆದ ಶ್ವಾನಗಳ ಘಟಕವಾಗಿದ್ದು, ಇದು ಭಯೋತ್ಪಾದನೆ ವಿರೋಧಿ ಸೇರಿದಂತೆ ಅನೇಕ ವಿರೋಧಿ ಕಾರ್ಯಾಚರಣೆಗಳಲ್ಲಿ ಭಾಗವಹಿಸುತ್ತದೆ. ಮೀರತ್‌ನ ರಿಮೌಂಟ್ ವೆಟರ್ನರಿ ಕಾರ್ಪ್ಸ್‌ನಿಂದ ಗಂಡು ಶ್ವಾನವನ್ನು ತರಲಾಗಿದೆ. ಇದನ್ನು ಆಗಸ್ಟ್ 12, 2022 ರಂದು ಅಸಾಲ್ಟ್ ಡಾಗ್ ಯುನಿಟ್‌ನಲ್ಲಿ ಪೋಸ್ಟ್ ಮಾಡಲಾಗಿತ್ತು.
ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಯೋಧನ ಜೀವ ಉಳಿಸುವ ವೇಳೆ ಸೇನಾ ಶ್ವಾನ ಕೆಂಟ್ ಸಾವನ್ನಪ್ಪಿತ್ತು. ಅದರ ವಯಸ್ಸು 6 ವರ್ಷ ಆಗಿತ್ತು. ಇದಕ್ಕೂ ಮೊದಲು ಶ್ವಾನ ಕೆಂಟ್ ಕೆ9 ಕಾರ್ಯಾಚರಣೆಗಳ ಭಾಗವಾಗಿತ್ತು. ಕೆಂಟ್ನ ದೇಹವನ್ನು ತ್ರಿವರ್ಣ ಧ್ವಜದಲ್ಲಿ ಸುತ್ತಲಾಗಿತ್ತು. ಸೇನಾ ಯೋಧರು ಕೂಡ ಅವರಿಗೆ ಅಂತಿಮ ನಮನ ಸಲ್ಲಿಸಿದರು. ಇತ್ತೀಚೆಗೆ 21 ನೇ ಕಾರ್ಪ್ಸ್ ಶ್ವಾನ ಘಟಕದ ಹೆಣ್ಣು ಲ್ಯಾಬ್ರಡಾರ್ ಕೂಡ ರಾಜೌರಿ ಜಿಲ್ಲೆಯಲ್ಲಿ ತನ್ನ ಹ್ಯಾಂಡ್ಲರ್ ಅನ್ನು ಉಳಿಸುವ ಪ್ರಯತ್ನದಲ್ಲಿ ಸಾವನ್ನಪ್ಪಿತ್ತು.
ಓದಿ: ಜಮ್ಮುವಿನಲ್ಲಿ ಸೇನಾ ಟ್ರಕ್ ಮೇಲೆ ದಾಳಿ: ಮೂವರು ಉಗ್ರರ ಸದೆಬಡಿದ ಸೇನೆ