ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮುಖ್ಯಸ್ಥ ಸೋಮನಾಥ್ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಇದನ್ನು ಅವರೇ ಬಹಿರಂಗಪಡಿಸಿದ್ದಾರೆ. ಸೂರ್ಯನನ್ನು ಅಧ್ಯಯನ ಮಾಡಲು ರೂಪಿಸಿದ ‘ಆದಿತ್ಯ ಎಲ್ 1’ ಪ್ರಯೋಗದ ದಿನವೇ ಈ ರೋಗ ಪತ್ತೆಯಾಗಿದೆ ಎಂದು ತಿಳಿಸಿದರು. ಮಲಯಾಳಂ ವೆಬ್ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿರುವುದಾಗಿ ತಿಳಿಸಿದರು.
ಚಂದ್ರಯಾನ-3 ಉಡಾವಣೆ ವೇಳೆ ಆರೋಗ್ಯ ಸಮಸ್ಯೆ ಎದುರಾಗಿತ್ತು. ಆ ಸಮಯದಲ್ಲಿ ನನಗೆ ಅದರ ಬಗ್ಗೆ ಸ್ಪಷ್ಟ ತಿಳುವಳಿಕೆ ಇರಲಿಲ್ಲ. ಆದರೂ ಆದಿತ್ಯ-ಎಲ್1 ಮಿಷನ್ ತನ್ನ ಉಡಾವಣೆಯಾದ ಬೆಳಗ್ಗೆ ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾದೆ. ಸ್ವಲ್ಪ ಸಮಸ್ಯೆ ಇರುವುದು ಕಂಡು ಬಂತು. ಪ್ರಯೋಗದ ನಂತರ ನಾನು ಚೆನ್ನೈಗೆ ಹೋಗಿ ಹೆಚ್ಚಿನ ಸ್ಕ್ಯಾನ್ ಮಾಡಿಸಿಕೊಂಡಿದ್ದೆ. ಆಗ ನನಗೆ ಅರ್ಥವಾಯಿತು. ನನ್ನ ಹೊಟ್ಟೆಯಲ್ಲಿ ಗಡ್ಡೆ ಬೆಳೆದಿರುವುದು ತಿಳಿಯಿತು. ಇದು ಆನುವಂಶಿಕ ಕಾಯಿಲೆ ಎಂದು ಇಸ್ರೋ ಅಧ್ಯಕ್ಷ ಸೋಮನಾಥ್ ಬಹಿರಂಗಪಡಿಸಿದ್ದಾರೆ. ಈ ವಿಚಾರ ತಿಳಿದ ತಕ್ಷಣ ಕುಟುಂಬಸ್ಥರು ಹಾಗೂ ಸಹೋದ್ಯೋಗಿಗಳು ಬೆಚ್ಚಿಬಿದ್ದರು.
ಸೆಪ್ಟೆಂಬರ್ 2, 2023 ರಂದು ಆದಿತ್ಯ L1 ಉಡಾವಣೆ ನಂತರ ವೈದ್ಯರು ಸೋಮನಾಥ್ ಅವರಿಗೆ ಆಪರೇಷನ್ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು. ಶಸ್ತ್ರಚಿಕಿತ್ಸೆಯ ನಂತರ ಕೀಮೋಥೆರಪಿ ಕೂಡ ಮಾಡಲಾಯಿತು. ಆ ಅವಧಿಯಲ್ಲಿ ಒಟ್ಟು ನಾಲ್ಕು ದಿನಗಳ ಕಾಲ ಅವರು ಆಸ್ಪತ್ರೆಯಲ್ಲಿದ್ದರು. ಐದನೇ ದಿನದಿಂದ ಇಸ್ರೋದಲ್ಲಿ ದೈನಂದಿನ ಜವಾಬ್ದಾರಿಯಲ್ಲಿ ತೊಡಗಿದ್ದೆ. ಮೊದಮೊದಲು ಕೊಂಚ ಹೆದರಿದ್ದರೂ ಈಗ ಕ್ಯಾನ್ಸರ್ ಚಿಕಿತ್ಸೆಗೆ ಪರಿಹಾರ ಇದೆ ಎಂಬ ಬಗ್ಗೆ ಸಂಪೂರ್ಣ ತಿಳುವಳಿಕೆ ಬಂದಿದೆ ಅಂತಾ ಇಸ್ರೋ ಮುಖ್ಯಸ್ಥರು ಹೇಳಿದ್ದಾರೆ.
ಓದಿ: 'ಚೆನ್ನಾಗಿ ಹೇಳಿದ್ರಿ ಸರ್': ನೆರೆದೇಶಗಳೊಂದಿಗೆ ಭಾರತದ ಸಂಬಂಧಗಳ ಕುರಿತು ಜೈಶಂಕರ್ ಹೇಳಿಕೆ ಶ್ಲಾಘಿಸಿದ ಬಿಗ್ ಬಿ