ಹೈದರಾಬಾದ್: ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ (ISB) ಶಿಕ್ಷಣ ಸಂಸ್ಥೆಯ ಹೈದರಾಬಾದ್ ಕ್ಯಾಂಪಸ್‌ನಲ್ಲಿ ಮೂಲಸೌಕರ್ಯ ಅಭಿವೃದ್ಧಿಗಾಗಿ ರಾಮೋಜಿ ಫೌಂಡೇಶನ್ 30 ಕೋಟಿ ರೂ. ಸಿಎಸ್‌ಆರ್ ನಿಧಿಯನ್ನು ಇಂದು ಸಂಸ್ಥೆಗೆ ನೀಡಿದೆ ಎಂದು ISB ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ರಾಮೋಜಿ ಪೌಂಡೇಶನ್ನಿಂದ ಉಡುಗೊರೆಯಾಗಿ ಪಡೆದ ಈ ನಿಧಿಯನ್ನು ಅತ್ಯಾಧುನಿಕ ಕಾರ್ಯನಿರ್ವಾಹಕ ಕೇಂದ್ರದ ಅಭಿವೃದ್ಧಿ ಭಾಗವಾಗಿ 430 ಆಸನಗಳ ಸಭಾಂಗಣ ನಿರ್ಮಾಣಕ್ಕೆ ಬಳಕೆ ಮಾಡಲಾಗುವುದು. ಅಂತಾರಾಷ್ಟ್ರೀಯ ಸಮ್ಮೇಳನಗಳು, ಸಂಶೋಧನಾ ಸೆಮಿನಾರ್‌ಗಳು, ವಿಶಿಷ್ಟ ಉಪನ್ಯಾಸಗಳು ಮತ್ತು ಇತರ ಪ್ರಮುಖ ಶೈಕ್ಷಣಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶದಿಂದ ಈ ಸಭಾಂಗಣ ನಿರ್ಮಾಣ ಮಾಡಲಾಗುತ್ತಿದ್ದು, ಇದು IBSನ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಐಎಸ್‌ಬಿ ಮಂಡಳಿಯ ಅಧ್ಯಕ್ಷ ಹರೀಶ್ ಮನ್ವಾನಿ, ರಾಮೋಜಿ ಫೌಂಡೇಶನ್ ಸಿಎಸ್ಆರ್ ನಿಧಿಗೆ ನೆರವು ನೀಡಿರುವುದಕ್ಕೆ ಕೃತಜ್ಞತೆ ಸಲ್ಲಿಸಿದ್ದು, "ದಾನಿಗಳ ಹೃದಯ ವೈಶಾಲ್ಯತೆ ನಮ್ಮ ಶಿಕ್ಷಣ ಸಂಸ್ಥೆಯ ಕಲಿಕೆ ಹಾಗೂ ಸಂಶೋಧನೆ ಮತ್ತು ವಿಶ್ವದರ್ಜೆಯ ಸಂಸ್ಥೆಯಾಗುವ ತನ್ನ ದೃಷ್ಟಿಕೋನ ನಿಜವಾಗಿಸುವಲ್ಲಿ ಬದ್ಧವಾಗಿರಲು ಪ್ರಮುಖ ಪಾತ್ರ ವಹಿಸಿದೆ. ಉನ್ನತ ದರ್ಜೆಯ ಮೂಲಸೌಕರ್ಯ ಉಳಿಸಿಕೊಳ್ಳುವಲ್ಲಿ ಐಎಸ್‌ಬಿ ಸಂಸ್ಥೆಯನ್ನು ಬಹು ಎತ್ತರಕ್ಕೆ ಕೊಂಡೊಯ್ಯುವ ರಾಮೋಜಿ ಫೌಂಡೇಶನ್ನ ಈ ಕೊಡುಗೆಗಾಗಿ ನಾವು ಕೃತಜ್ಞರಾಗಿರುತ್ತೇವೆ." ಎಂದು ತಿಳಿಸಿದ್ದಾರೆ.
ಸಂಸ್ಥೆಯ ಡೀನ್ ಮದನ್ ಪಿಲ್ಲುಟ್ಲಾ ಮಾತನಾಡಿ, "ಐಎಸ್‌ಬಿ ಸಂಸ್ಥೆಗೆ ಈ ಹಿಂದೆ ಹಲವು ಸಹಾಯ, ಬೆಂಬಲ ದೊರೆತಿದ್ದು, ಅವುಗಳು ಶಿಕ್ಷಣ ಸಂಸ್ಥೆಯ ಬೆಳವಣಿಗೆಗೆ ಸಹಾಯ ಮಾಡಿವೆ. ಈಗ ರಾಮೋಜಿ ಫೌಂಡೇಶನ್ನ ಉದಾರ ಕೊಡುಗೆ ಸಂಸ್ಥೆಯ ಬೆಳವಣಿಗೆಗೆ ಗಮನಾರ್ಹವಾಗಿ ಉಪಯೋಗವಾಗಿದೆ. ಇದರ ಜೊತೆಗೆ ನಾವು ವಿಶ್ವ ದರ್ಜೆಯ ಕಲಿಕೆಯನ್ನು ವಿದ್ಯಾರ್ಥಿಗಳಿಗೆ ನೀಡುವುದನ್ನು ಮುಂದುವರಿಸುತ್ತೇವೆ ಎನ್ನುವುದನ್ನು ಖಚಿತಪಡಿಸುತ್ತೇವೆ" ಎಂದು ತಿಳಿಸಿದ್ದಾರೆ.
ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುವ ಮತ್ತು ಪೋಷಿಸುವ ರಾಮೋಜಿ ರಾವ್ ಅವರ ಬದ್ಧತೆಯನ್ನು ಒತ್ತಿ ಹೇಳಿರುವ ರಾಮೋಜಿ ಫೌಂಡೇಶನ್ ಟ್ರಸ್ಟಿ ಕಿರಣ್ ಸಿಎಚ್, "ಈ ಸಿಎಸ್ಆರ್ ನಿಧಿ ಶೈಕ್ಷಣಿಕ ಚರ್ಚೆಗಳು ಮತ್ತು ಜ್ಞಾನದ ವಿನಿಮಯಕ್ಕೆ ಕೇಂದ್ರಬಿಂದುವಾಗಿರುವ ಸಭಾಂಗಣ ಸೇರಿದಂತೆ ವಿಶ್ವದರ್ಜೆಯ ಸೌಲಭ್ಯಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸುವಲ್ಲಿ ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ ಸಂಸ್ಥೆಗೆ ಸಹಾಯ ಮಾಡಲಿದೆ. ಈ ಮೂಲಕ ರಾಮೋಜಿ ರಾವ್ ಅವರ ಸ್ಮರಣೆಯನ್ನು ಗೌರವಿಸಲು ನಮಗೆ ಸಹಾಯ ಮಾಡುತ್ತದೆ. ISB ಜಾಗತಿಕ ಬಿಸಿನೆಸ್ ಸ್ಕೂಲ್ ಆಗಿ ನಿಲ್ಲುವ ಮೂಲಕ ಇದು ಬಲವಾದ ಆರ್ಥಿಕತೆ ಮತ್ತು ವಿಶ್ವ ದರ್ಜೆಯ ಭಾರತವನ್ನು ಸುಗಮಗೊಳಿಸಲು ಸಹಾಯ ಮಾಡುತ್ತದೆ ಎಂದು ನಾವು ನಂಬುತ್ತೇವೆ. ಎಂದು ಹೇಳಿದ್ದಾರೆ.
ಐಎಸ್‌ಬಿ ಕುರಿತು ಒಂದಿಷ್ಟು ಮಾಹಿತಿ: ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ (ISB) ಹೈದರಾಬಾದ್ ಮತ್ತು ಮೊಹಾಲಿಯಲ್ಲಿ ಕ್ಯಾಂಪಸ್‌ಗಳನ್ನು ಹೊಂದಿದೆ. ನವೀನ ನಿರ್ವಹಣಾ ಶಿಕ್ಷಣವನ್ನು ನೀಡುವ ಬ್ಯುಸಿನೆಸ್ ಶಿಕ್ಷಣ ಸಂಸ್ಥೆಯಾಗಿ ಜಾಗತಿಕವಾಗಿ ಗುರುತಿಸಲ್ಪಟ್ಟಿದೆ. ಉನ್ನತ ಜಾಗತಿಕ ಬ್ಯುಸಿನೆಸ್ ಶಿಕ್ಷಣ ಸಂಸ್ಥೆಗಳಲ್ಲಿ ಐಎಸ್‌ಬಿ ಸ್ಥಾನ ಪಡೆದಿದೆ. ಐಎಸ್‌ಬಿ ಸಂಸ್ಥೆಯು ಪೋಸ್ಟ್ ಗ್ರಾಜುಯೇಟ್ ಪ್ರೋಗ್ರಾಂ ಇನ್ ಮ್ಯಾನೇಜ್‌ಮೆಂಟ್ (PGP), ಕಾರ್ಯನಿರ್ವಾಹಕ ಶಿಕ್ಷಣ ಮತ್ತು ಡಾಕ್ಟೋರಲ್ ಪ್ರೋಗ್ರಾಮ್ಸ್ಗಳನ್ನು ಒಳಗೊಂಡಂತೆ ವಿವಿಧ ಕೋರ್ಸ್ಗಳನ್ನು ನೀಡುತ್ತದೆ. ತನ್ನ ವಿಶ್ವ ದರ್ಜೆಯ ಅಧ್ಯಾಪಕರು ಮತ್ತು ಆಲೋಚನಾ ನಾಯಕತ್ವದ ಮೂಲಕ, ಜಾಗತಿಕ ಬ್ಯುಸಿನೆಸ್ಗೆ ಮಹತ್ವದ ಕೊಡುಗೆಗಳನ್ನು ನೀಡುವ ನಾಯಕರನ್ನು ರಚಿಸಲು ಐಎಸ್‌ಬಿ ಶ್ರಮಿಸುತ್ತಿದೆ.
ರಾಮೋಜಿ ಫೌಂಡೇಶನ್ ಹಿನ್ನೆಲೆ: ರಾಮೋಜಿ ಫೌಂಡೇಶನ್, ರಾಮೋಜಿ ಗ್ರೂಪ್ ನಡೆಸುತ್ತಿರುವ ಒಂದು ನೋಂದಾಯಿತ ಟ್ರಸ್ಟ್. 2012ರಲ್ಲಿ ಸ್ಥಾಪನೆಯಾದ ಫೌಂಡೇಶನ್, ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ಅನಾಥಾಶ್ರಮಗಳು, ಗ್ರಾಮೀಣಾಭಿವೃದ್ಧಿ, ಆರೋಗ್ಯ ಮತ್ತು ಕ್ರೀಡಾ ತರಬೇತಿ ಮತ್ತು ಅಭಿವೃದ್ಧಿಯನ್ನು ಬೆಂಬಲಿಸುವ ಕ್ಷೇತ್ರಗಳಲ್ಲಿ ಸಮೂಹದ ಪರವಾಗಿ ಲೋಕೋಪಕಾರಿ ಚಟುವಟಿಕೆಗಳು ಮತ್ತು ಸಿಎಸ್ಆರ್ ಉಪಕ್ರಮಗಳನ್ನು ಸಕ್ರಿಯವಾಗಿ ನಡೆಸುತ್ತಿದೆ. ಪ್ರತಿಷ್ಠಾನವು ಎಲ್‌ವಿ ಪ್ರಸಾದ್ ನೇತ್ರ ಸಂಸ್ಥೆ, ಜಿನೋಮ್ ಫೌಂಡೇಶನ್, ಅಕ್ಷಯಪಾತ್ರ ಮತ್ತು ಬಸವತಾರಕಂ ಕ್ಯಾನ್ಸರ್ ಫೌಂಡೇಶನ್‌ಗೆ ಗಮನಾರ್ಹ ಕೊಡುಗೆಗಳನ್ನು ನೀಡಿದೆ.