ಪ್ರತೀ ವರ್ಷ ಏಪ್ರಿಲ್ 5 ರಂದು ಜಗತ್ತಿನಾದ್ಯಂತ ಅಂತಾರಾಷ್ಟ್ರೀಯ ಆತ್ಮಸಾಕ್ಷಿ ದಿನವನ್ನು (International Day of Conscience) ಆಚರಿಸಲಾಗುತ್ತದೆ. 'ಪ್ರೀತಿ ಮತ್ತು ಆತ್ಮಸಾಕ್ಷಿಯೊಂದಿಗೆ ಶಾಂತಿಯನ್ನು ಉತ್ತೇಜಿಸುವ' ಥೀಮ್ನೊಂದಿಗೆ ಈ ಸಾಲಿನ ಆತ್ಮಸಾಕ್ಷಿ ದಿನವನ್ನು ಸೆಲೆಬ್ರೇಟ್ ಮಾಡಲಾಗುತ್ತಿದೆ.
ಈ ಅಂತಾರಾಷ್ಟ್ರೀಯ ಆತ್ಮಸಾಕ್ಷಿಯ ದಿನವು ಮಾನವನ ಆತ್ಮಸಾಕ್ಷಿಯ ಪ್ರಾಮುಖ್ಯತೆ ಸ್ಮರಿಸುವುದಕ್ಕಾಗಿ ಆಚರಿಸಲಾಗುವ ಜಾಗೃತಿಯ ದಿನ ಕೂಡ ಹೌದು. ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಜುಲೈ 2019ರ 25ರಂದು ಪ್ರೀತಿ ಮತ್ತು ಆತ್ಮಸಾಕ್ಷಿಯೊಂದಿಗೆ ಶಾಂತಿಯ ಸಂಸ್ಕೃತಿ ಉತ್ತೇಜಿಸುವ ನಿರ್ಣಯವನ್ನು ಅಂಗೀಕರಿಸುವುದರೊಂದಿಗೆ ಈ ದಿನವನ್ನು ಘೋಷಿಸಿತು.
ಹಿನ್ನೆಲೆ: ಶಾಂತಿಯ ಸಂಸ್ಕೃತಿಯ ಪರಿಕಲ್ಪನೆಯು ಜುಲೈ 1989ರಲ್ಲಿ ಯುನೆಸ್ಕೋ ಆಯೋಜಿಸಿದ್ದ 'ಇಂಟರ್ನ್ಯಾಷನಲ್ ಕಾಂಗ್ರೆಸ್ ಆನ್ ಪೀಸ್ ಇನ್ ದಿ ಮೈಂಡ್ಸ್ ಆಫ್ ಮೆನ್'ನಿಂದ ಹೊರಹೊಮ್ಮಿತು. ನಂತರ, 2019ರ ಫೆಬ್ರವರಿ 5ರಂದು ವಿಶ್ವಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಆತ್ಮಸಾಕ್ಷಿ ದಿನದ ಘೋಷಣೆಗಾಗಿ ಜಾಗತಿಕ ಅಭಿಯಾನವನ್ನು ಫೆಡರೇಶನ್ ಆಫ್ ವರ್ಲ್ಡ್ ಪೀಸ್ ಅಂಡ್ ಲವ್ (FOWPAL) ಪ್ರಾರಂಭಿಸಿತು.
ಫೆಡರೇಶನ್ ಆಫ್ ವರ್ಲ್ಡ್ ಪೀಸ್ ಅಂಡ್ ಲವ್ ಒಂದು ಸರ್ಕಾರೇತರ ಸಂಸ್ಥೆ. ಪ್ರೀತಿ ಮತ್ತು ಶಾಂತಿಯ ಕಲ್ಪನೆಯನ್ನು ಹರಡುವುದೇ ಇದರ ಉದ್ದೇಶ. ವಿಶ್ವಸಂಸ್ಥೆಯ ಸಾಮಾನ್ಯ ಸಭೆ 2019ರಲ್ಲಿ ನಡೆದ ತನ್ನ 73ನೇ ಅಧಿವೇಶನದಲ್ಲಿ ಆತ್ಮಸಾಕ್ಷಿ ಪರಿಕಲ್ಪನೆ ಅಂಗೀಕರಿಸಿ, ಏಪ್ರಿಲ್ 5 ಅನ್ನು ಆತ್ಮಸಾಕ್ಷಿಯ ಅಂತಾರಾಷ್ಟ್ರೀಯ ದಿನ ಎಂದು ಘೋಷಿಸಿತು.
ಧ್ಯೇಯ: ಸ್ಥಳೀಯ, ರಾಷ್ಟ್ರೀಯ ಮತ್ತು ಪ್ರಾದೇಶಿಕ ಸಮುದಾಯಗಳ ಪದ್ಧತಿಗಳಿಗೆ ಅನುಗುಣವಾಗಿ ಪ್ರೀತಿ ಮತ್ತು ಜಾಗೃತಿಯೊಂದಿಗೆ ಶಾಂತಿಯನ್ನು ನಿರ್ಮಿಸುವ ಮಹತ್ವದ ಬಗ್ಗೆ ಈ ದಿನವು ಜಾಗೃತಿ ಮೂಡಿಸುತ್ತದೆ. ಅಲ್ಲದೇ ಪ್ರೀತಿ ಮತ್ತು ಶಾಂತಿ, ಜಾಗೃತಿ ಮತ್ತು ಸುಸ್ಥಿರ ಅಭಿವೃದ್ಧಿ ನಡುವಿನ ಸಂಬಂಧವನ್ನೂ ಈ ದಿನ ಎತ್ತಿ ತೋರಿಸುತ್ತದೆ.
ಸಹೋದರತ್ವ ಬೆಳೆಸಿ, ಕ್ರೌರ್ಯ ತಡೆಯಿರಿ: ಮಾನವರು ಪರಸ್ಪರ ಸಹಾನುಭೂತಿಯಿಂದ ನಡೆದುಕೊಳ್ಳಬೇಕು ಮತ್ತು ಕ್ರೌರ್ಯ ತಡೆಯಲು ಸಹೋದರತ್ವ ಭಾವನೆ ಬೆಳೆಸಿಕೊಳ್ಳಬೇಕು ಎಂದು ವಿಶ್ವಸಂಸ್ಥೆ ನಿರ್ಣಯ ಒತ್ತಾಯಿಸಿದೆ. ಧರ್ಮ, ಭಾಷೆ, ಜನಾಂಗ ಅಥವಾ ಲಿಂಗವನ್ನು ಲೆಕ್ಕಿಸದೇ ಶಾಂತಿಯುತ ಸಂಬಂಧಗಳನ್ನು ಕಾಪಾಡಿಕೊಳ್ಳುವುದು ಮತ್ತು ಭವಿಷ್ಯವನ್ನು ಹಿಂಸಾಚಾರದಿಂದ ರಕ್ಷಿಸುವ ಅಗತ್ಯವನ್ನು ಇದು ತಿಳಿಸಿದೆ.
ಇದನ್ನೂ ಓದಿ: ಅಂತಾರಾಷ್ಟೀಯ ಗಣಿ ಜಾಗೃತಿ ದಿನ: ಏನಿದರ ಧ್ಯೇಯ? - Mine Awareness
ಪ್ರಸ್ತುತ ದಿನಗಳಲ್ಲಿ ಆತ್ಮಸಾಕ್ಷಿ ದಿನದ ಮಹತ್ವ: ಇದು ಮಾನವ ಹಕ್ಕುಗಳು ಮತ್ತು ಗೌರವವನ್ನು ಆಧರಿಸಿದ ಆತ್ಮಸಾಕ್ಷಿಯ ಬಗ್ಗೆ ಅರಿವು ಮೂಡಿಸುವ ಪ್ರಮುಖ ಹೆಜ್ಜೆಯಾಗಿದೆ. ಮಾನವ ಹಕ್ಕುಗಳು ಮತ್ತು ಘನತೆಯ ಮೌಲ್ಯಗಳನ್ನು ಬಲಪಡಿಸುವ ಮತ್ತೊಂದು ಮಾರ್ಗ ಕೂಡ ಹೌದು. ದ್ವೇಷ, ಯುದ್ಧಗಳು ನಡೆಯುತ್ತಿರುವ ಈ ಯುಗದಲ್ಲಿ ಇದು ಅಗತ್ಯವಿದೆ ಎಂದು ರೈಟ್ಸ್ ಅಂಡ್ ರಿಸ್ಕ್ ಅನಾಲಿಸಿಸ್ ತಂಡದ ನಿರ್ದೇಶಕರಾದ ಸುಹಾಸ್ ಚಕ್ಮಾ ತಿಳಿಸಿದ್ದಾರೆ.