ಗಣಿಗಾರಿಕೆ ಹಾಗೂ ಗಣಿಗಾರಿಕೆಯಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತೀ ವರ್ಷ ಏಪ್ರಿಲ್ ಮೊದಲ ವಾರ ಅಂತಾರಾಷ್ಟೀಯ ಗಣಿ ಜಾಗೃತಿ ದಿನ ಆಚರಿಸುತ್ತೇವೆ. ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ದಿನವನ್ನು ಆಚರಿಸುತ್ತಿವೆ. ಈ ದಿನದ ಮಹತ್ವ ಸಾರುವ ಕೆಲಸಗಳು ಮುಂದುವರಿದಿದೆ.
ಜಗತ್ತಿನ ಹೆಚ್ಚಿನ ರಾಷ್ಟ್ರಗಳಲ್ಲಿ ಪ್ರತೀ ವರ್ಷ ಏಪ್ರಿಲ್ 4ನ್ನು ಅಂತಾರಾಷ್ಟ್ರೀಯ ಗಣಿ ಜಾಗೃತಿ ದಿನವನ್ನಾಗಿ ಆಚರಿಸಲಾಗುತ್ತದೆ. ಸ್ಫೋಟಕ ಗಣಿಗಳು ಮತ್ತು ಅವುಗಳ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸೋ ನಿಟ್ಟಿನಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. ಈ ಗಣಿ ಜಾಗೃತಿ ದಿನವು ವಿಶೇಷವಾಗಿ ಸಂಘರ್ಷ ವಲಯಗಳಲ್ಲಿ ಸಾವು ನೋವಿಗೆ ಕಾರಣವಾಗುವ ಲ್ಯಾಂಡ್‌ಮೈನ್‌ಗಳು, ಯುದ್ಧದ ಸ್ಫೋಟಕ ಅವಶೇಷಗಳು ಮತ್ತು ಸುಧಾರಿತ ಸ್ಫೋಟಕ ಸಾಧನಗಳ ಬಗ್ಗೆ ಹೇಳುತ್ತದೆ. ಈ ಅಪಾಯಕಾರಿ ಅವಶೇಷಗಳ ಪರಿಣಾಮಗಳೊಳಗಾಗುವ ಜನಸಾಮಾನ್ಯರು, ವಿಶೇಷವಾಗಿ ವಿಕಲಚೇತನರ ಅಗತ್ಯತೆಗಳು ಮತ್ತು ಹಕ್ಕುಗಳನ್ನು ಸೂಕ್ತವಾಗಿ ತಿಳಿಸುವ ಮಹತ್ವವನ್ನು ಈ ದಿನ ಒತ್ತಿ ಹೇಳುತ್ತದೆ.
2024ರಲ್ಲಿ, ಯುನೈಟೆಡ್ ನೇಷನ್ಸ್ ಮೈನ್ ಆ್ಯಕ್ಷನ್ ಸರ್ವೀಸ್ (UNMAS) ವಿಕಲಾಂಗ ವ್ಯಕ್ತಿಗಳ ಅಗತ್ಯತೆಗಳು ಮತ್ತು ಹಕ್ಕುಗಳ ಬಗ್ಗೆ ಹೆಚ್ಚಿನ ಜಾಗೃತಿಗಾಗಿ ಸಲಹೆ ನೀಡುತ್ತಿದೆ. ಇದು ಭದ್ರತಾ ಮಂಡಳಿಯ ನಿರ್ಣಯ 2475ರ ಐದನೇ ವಾರ್ಷಿಕೋತ್ಸವದೊಂದಿಗೆ ಸೇರಿದೆ. ವಿಕಲಚೇತನ ವ್ಯಕ್ತಿಗಳನ್ನು ರಕ್ಷಿಸಲು ಮತ್ತು ಸಂಘರ್ಷ ತಡೆಗಟ್ಟುವಿಕೆ - ಶಾಂತಿ ನಿರ್ಮಾಣ ಪ್ರಯತ್ನಗಳಲ್ಲಿ ಅವರ ಸೇರ್ಪಡೆಯನ್ನು ಖಚಿತಪಡಿಸಿಕೊಳ್ಳಲು ಸದಸ್ಯ ರಾಷ್ಟ್ರಗಳಿಗೆ ಕರೆ ನೀಡುತ್ತದೆ.
ಹಿನ್ನೆಲೆ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 2005ರಲ್ಲಿ ಗಣಿ ಜಾಗೃತಿ ಅಂತಾರಾಷ್ಟ್ರೀಯ ದಿನವೆಂದು (International Day for Mine Awareness and Assistance in Mine Action) ಏಪ್ರಿಲ್ 4 ಅನ್ನು ಘೋಷಿಸಿತು. ನೆಲಬಾಂಬ್ ಬೆದರಿಕೆ ಮತ್ತು ಯುದ್ಧದ ಸ್ಫೋಟಕ ಅವಶೇಷಗಳ ಬೆದರಿಕೆಯಂತಹ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯಗಳು ಮತ್ತು ಸಂಬಂಧಿತ ಸಂಸ್ಥೆಗಳ ನಿರಂತರ ಪ್ರಯತ್ನಗಳ ಪ್ರಾಮುಖ್ಯತೆಯನ್ನು ಇದು ಒತ್ತಿಹೇಳುತ್ತದೆ. ಎರಡು ದಶಕಗಳಿಂದ, ಯುನೈಟೆಡ್ ನೇಷನ್ಸ್ ಮೈನ್ ಆ್ಯಕ್ಷನ್ ಸರ್ವಿಸ್ (UNMAS) ಜೀವಗಳನ್ನು ಉಳಿಸಲು, ಮಾನವೀಯ ಸಹಾಯವನ್ನು ಸುಗಮಗೊಳಿಸಲು, ನಾಗರಿಕರನ್ನು ರಕ್ಷಿಸಲು ಮತ್ತು ಅಂತಾರಾಷ್ಟ್ರೀಯ ಮಾನವೀಯ ಮತ್ತು ಮಾನವ ಹಕ್ಕುಗಳ ಕಾನೂನನ್ನು ಪ್ರತಿಪಾದಿಸಲು ಮೀಸಲಾಗಿದೆ.
ಭೂಮಿಯೊಳಗಿನ ಸಂಪನ್ಮೂಲಗಳನ್ನು ಹೊರತೆಗೆಯುವ ಪ್ರಕ್ರಿಯೆಗೆ ಗಣಿಗಾರಿಕೆ ಎನ್ನುತ್ತೇವೆ. ಇಲ್ಲಿ ಭೂಮಿ ಕೊರೆದು ಲೋಹಗಳನ್ನು ಹೊರತೆಗೆಯಲಾಗುತ್ತದೆ. ಇದೊಂದು ಅಪಾಯಕಾರಿ ಉದ್ಯಮ. ಸುತ್ತಮುತ್ತಲ ಪರಿಸರ ಸೇರಿ ಜನಸಾಮಾನ್ಯರ ಮೇಲೆ ಪರಿಣಾಮ ಬೀರುತ್ತದೆ. ಭೂಮಿ, ಗುಡ್ಡ ಕೊರೆಯಲು ಸ್ಫೋಟಕ ವಸ್ತು ಬಳಸುವುದರಿಂದ ಶಬ್ಧಮಾಲಿನ್ಯ, ಪರಿಸರ ಮಾಲಿನ್ಯದಂತಹ ಸಮಸ್ಯೆಗಳು ಉದ್ಭವಿಸುತ್ತದೆ. ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ಪರಿಸರ ಮತ್ತು ಜನರ ರಕ್ಷಣೆ, ಅವರಿಗೆ ಮೂಲಭೂತ ಸೌಕರ್ಯ ಒದಗಿಸುವುದು, ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವುದು ಈ ದಿನದ ಪ್ರಮುಖ ಉದ್ದೇಶ.
ಇದನ್ನೂ ಓದಿ: 5ನೇ ತರಗತಿಗೆ ಶಿಕ್ಷಣ ನಿಲ್ಲಿಸಿದ್ದ ಬಾಲಕ ಈಗ ಗ್ರಾಮದ ಇತರ ಮಕ್ಕಳ ಶಿಕ್ಷಣಕ್ಕೆ ಸ್ಫೂರ್ತಿ - Inspirational Boy