ಇಂದೋರ್ (ಮಧ್ಯಪ್ರದೇಶ): ನೀವು ಸಾಕಷ್ಟು ದಹಿ ವಡಾ ತಿಂದಿರ್ತೀರಾ. ವಿಶೇಷವಾಗಿ ಮಧ್ಯಪ್ರದೇಶದಲ್ಲಿ ನೀವು ಪ್ರತಿ ಹೋಟೆಲ್, ರೆಸ್ಟೋರೆಂಟ್ ಮತ್ತು ಡಾಬಾಗಳಿಗೆ ಹೋದರೂ ಅಲ್ಲಿ ದಹಿ ವಡಾ ಖಾಯಂ. ಅದರಲ್ಲೂ ಬೇಸಿಗೆ ಕಾಲದಲ್ಲಿ ಅವುಗಳ ಬೇಡಿಕೆ ಮತ್ತಷ್ಟು ಹೆಚ್ಚಾಗುತ್ತದೆ. ಅಂತಹುದರಲ್ಲಿ ನೀವು ಯಾವಾಗಾದರೂ ಹಪುಸ್ (Alphonso mango) ಮಾವಿನ ದಹಿ ವಡಾ ತಿಂದಿದ್ದೀರಾ? ಇಲ್ಲವಾದರೆ ಇಲ್ಲಿದೆ ನೋಡಿ ವಿಶೇಷ ಖಾದ್ಯ. ಮಧ್ಯಪ್ರದೇಶದ ಇಂದೋರ್‌ನ ವ್ಯಕ್ತಿಯೊಬ್ಬರು ಸರಾಫಾ ಚೌಪಾಟಿಯಲ್ಲಿ ವಿವಿಧ ಬಗೆಯ ಖಾದ್ಯಗಳ ನಡುವೆ ಹೊಸ ಪ್ರಯೋಗವೊಂದನ್ನು ಮಾಡಿದ್ದಾರೆ.
ಇತ್ತೀಚೆಗೆ ಇಂದೋರ್‌ನ ದಹಿ ವಡಾ ಸಾಮಾಜಿಕ ಜಾಲತಾಣಗಳ ರೀಲ್ಸ್ಗಳಲ್ಲಿ ಎರಡು ಕಾರಣಗಳಿಂದ ಬಹಳ ಸದ್ದು ಮಾಡುತ್ತಿದೆ. ಮೊದಲನೇಯದಾಗಿ ಮಾವಿನ ಹಣ್ಣಿನ ದಹಿ ವಡಾ. ಈ ವಿಶೇಷ ದಹೀ ವಡಾದಲ್ಲಿ ವಡಾದ ಜೊತೆಗೆ ಮೊಸರು ಹಾಕುವ ಬದಲು ಮಾವಿನ ಹಣ್ಣಿನ ರಸವನ್ನು ತುಂಬಿಸಿ ಸರ್ವ್ ಮಾಡಲಾಗುತ್ತದೆ. ರುಚಿಯಂತೂ ಅದ್ಭುತವಾಗಿರುತ್ತದೆ. ಇನ್ನೊಂದು ದಹಿ ವಡಾ ಮಾಡುವ ವ್ಯಕ್ತಿಯಿಂದ. ಈ ದಹಿ ವಡಾವನ್ನು ಮಾರಾಟ ಮಾಡುವ ವ್ಯಕ್ತಿ ರಾಜನಂತೆ ಮೈಯೆಲ್ಲಾ ಚಿನ್ನಾಭರಣಗಳನ್ನು ಹಾಕಿಕೊಂಡು, ದಹಿ ವಡಾ ಮಾಡಿ ಮಾರಾಟ ಮಾಡುತ್ತಾರೆ. ಈಗ ಈ ದಹಿ ವಡಾ ಮನುಷ್ಯ ಗೋಲ್ಡ್ ಮ್ಯಾನ್ ಎಂತಲೇ ಫೇಮಸ್ ಆಗಿದ್ದಾರೆ.
ಅದ್ಭುತ ರುಚಿ ಕೊಟ್ಟ ಗೋಲ್ಡ್ ಮ್ಯಾನ್: ಮಧ್ಯಪ್ರದೇಶದ ಅತ್ಯಂತ ಸ್ವಚ್ಛ ನಗರವಾಗಿರುವ ಇಂದೋರ್ ತನ್ನ ವೈವಿಧ್ಯಮಯ ರುಚಿಕರವಾದ ಭಕ್ಷ್ಯಗಳಿಗೆ ಹೆಸರುವಾಸಿಯಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಇಂದೋರ್‌ನ ಸರಾಫಾ ಚೌಪಾಟಿಯಲ್ಲಿ ದಹಿ ವಡಾದ ಪರಿಮಳದೊಂದಿಗೆ ಹಪುಸ್ ಮಾವಿನ ಪರಿಮಳವೂ ಹರಡುತ್ತಿದೆ. ಬೇಸಿಗೆಯಲ್ಲಿ ಹಣ್ಣುಗಳ ರಾಜ ಮಾವಿನ ಹಣ್ಣನ್ನು ಇಷ್ಟಪಡುವ ರುಚಿ ಪ್ರಿಯರಿಗಾಗಿ, ಸುದರ್ಶನ್ ಚಾಟ್ ಮಾಲೀಕ ಬಂಟಿ ಯಾದವ್ ಹಪುಸ್ ಮಾವಿನ ಹಣ್ಣಿನ ಜೊತೆಗೆ ದಹಿ ವಡಾ ಖಾದ್ಯವನ್ನು ತಯಾರಿಸಿದ್ದಾರೆ. ಇದು ಪ್ರವಾಸಿಗರನ್ನೂ ಹೆಚ್ಚು ಆಕರ್ಷಿಸುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಮಾವಿನ ದಹಿ ವಡಾ: ವಾಸ್ತವವಾಗಿ, ಈ ವಿಶೇಷ ಖಾದ್ಯವನ್ನು ಬೇಸಿಗೆ ಮತ್ತು ಮಾವಿನ ಋತುವಿನಲ್ಲಿ ಇಂದೋರ್‌ನಲ್ಲಿ ತಯಾರಿಸಲಾಗುತ್ತದೆ. ವಡಾವನ್ನು ಮಾವಿನ ರಸ ಮತ್ತು ಮೊಸರಿನ ಜೊತೆ ನಿಮಗೆ ಸರ್ವ್ ಮಾಡಲಾಗುತ್ತದೆ. ಖಾದ್ಯ ಆಹಾರ ಪ್ರಿಯರ ನಡುವೆ ಚರ್ಚೆಯಲ್ಲಲ್ಲದೇ, ಸಾಮಾಜಿಕ ಜಾಲತಾಣಗಳಲ್ಲೂ ಹೆಚ್ಚು ಜನಪ್ರಿಯವಾಗುತ್ತಿದೆ ಎನ್ನುತ್ತಾರೆ ಇದನ್ನು ಸಿದ್ಧಪಡಿಸಿರುವ ಬಂಟಿ ಯಾದವ್. ವಿಶೇಷವೆಂದರೆ ದಹಿ ವಡಾಗೆ ಹಪುಸ್ ಮಾವಿನ ಹಣ್ಣಿನ ರಸದ ಜೊತೆಗೆ, ಚಟ್ನಿ, ಮಸಾಲೆ ಮತ್ತು ಡ್ರೈ ಫ್ರುಟ್ಸ್ ಸೇರಿಸಿ ನೀಡಿದಾಗ, ದಹಿ ವಡಾದೊಂದಿಗೆ ಹಪೂಸ್ ಮಾವಿನ ಹೊಸ ಫ್ಲೇವರ್ ವಾಹ್!
ಹಪಸ್ ಮಾವಿನ ದಹಿ ವಡಾ ತಯಾರಿ: ಮೊದಲು ಮಾವಿನ ಹಣ್ಣನ್ನು ಶೇಕ್‌ನಂತೆ ತಯಾರಿಸಲಾಗುತ್ತದೆ ನಂತರ ಅದಕ್ಕೆ ಮೊಸರು ಸೇರಿಸಲಾಗುತ್ತದೆ. ನಂತರ, ಏಲಕ್ಕಿ ಮತ್ತು ಇತರ ರುಚಿಗಳನ್ನು ಸೇರಿಸಲಾಗುತ್ತದೆ. ಬಳಿಕ, ವಡಾದ ಮೇಲೆ ಹಪುಸ್ ಮಾವಿನಿಂದ ತಯಾರಿಸಿದ ಶೇಕ್ ಸೇರಿಸಿ, ಅದರ ಮೇಲೆ ಜೇನುತುಪ್ಪ, ಜೀರಿಗೆ ಮತ್ತು ಮಸಾಲೆಗಳಿಂದ ತಯಾರಿಸಿದ ಚಟ್ನಿಯನ್ನು ಹಾಕಲಾಗುತ್ತದೆ. ನಂತರ ಡ್ರೈಫ್ರುಟ್ಸ್ ಉದುರಿಸಿ, ಸರ್ವ್ ಮಾಡಲಾಗುತ್ತದೆ.
ದೇಹಕ್ಕೆ ಆರೋಗ್ಯಕರ ಮಾವಿನ ದಹಿ ವಡಾ: ದಹಿ ವಡಾದ ಜೊತೆಗೆ ಹಪುಸ್ ಮಾವಿನ ರಸ ದಹಿ ವಡಾದ ರುಚಿಯನ್ನು ದ್ವಿಗುಣಗೊಳಿಸುತ್ತದೆ. ಜನ ದೂರದೂರುಗಳಿಂದ ಬಂದು ತಿನ್ನುತ್ತಾರೆ. ಇದನ್ನು ಆರೋಗ್ಯದ ದೃಷ್ಟಿಯಿಂದ ಸಂಪೂರ್ಣವಾಗಿ ಶುದ್ಧ ಮತ್ತು ನೈರ್ಮಲ್ಯದಿಂದ ಮಾಡಲಾಗಿದೆ. ಬೇಸಿಗೆ ಕಾಲದಲ್ಲಿ ಇದನ್ನು ಸೇವಿಸುವುದರಿಂದ ಹೊಟ್ಟೆ ತಂಪಾಗುವುದು ಮಾತ್ರವಲ್ಲದೇ ಆರೋಗ್ಯಕ್ಕೂ ಒಳ್ಳೆಯದು. ಹಾಗಾಗಿ ಈ ರುಚಿ ರುಚಿಯಾದ ದಹಿ ವಡಾ ಸವಿಯಲು ಇವರ ಅಂಗಡಿ ಮುಂದೆ ಬೆಳಗ್ಗಿನಿಂದ ಸಂಜೆವರೆಗೂ ಜನರು ಸರತಿ ಸಾಲಿನಲ್ಲಿ ನಿಂತಿರುತ್ತಾರೆ.
ಇದನ್ನೂ ಓದಿ: ಹೈದರಾಬಾದಿ ಹಲೀಮ್: ಈ ಖಾದ್ಯದ ವಿಶೇಷತೆ ಏನು? ಇದನ್ನು ಹೇಗೆ ತಯಾರಿಸುತ್ತಾರೆ? - Hyderabadi Haleem