ಭುವನೇಶ್ವರ: ಭಾರತದ ಮೊದಲ 24X7 ಧಾನ್ಯಗಳ ಎಟಿಎಂ ಅನ್ನು ಒಡಿಶಾದ ಭುವನೇಶ್ವರದಲ್ಲಿರುವ ಮಂಚೇಶ್ವರದಲ್ಲಿ ಗುರುವಾರ ಉದ್ಘಾಟನೆ ಮಾಡಲಾಗಿದೆ. ಅನ್ನಪೂರ್ತಿ ಧಾನ್ಯ ಎಟಿಎಂ ಹೆಸರಿನ ಹೊಸ ಎಟಿಎಂ ಯಂತ್ರವನ್ನು ಒಡಿಶಾದ ಆಹಾರ ಸರಬರಾಜು ಮತ್ತು ಗ್ರಾಹಕ ಕಲ್ಯಾಣ ಇಲಾಖೆಯ ಸಚಿವ ಕೃಷ್ಣ ಚಂದ್ರ ಪಾತ್ರಾ ಅನಾವರಣಗೊಳಿಸಿದ್ದಾರೆ. ಸಮಾರಂಭದಲ್ಲಿ ಭಾರತದ ವಿಶ್ವ ಆಹಾರ ಕಾರ್ಯಕ್ರಮದ ಉಪ ನಿರ್ದೇಶಕ ನೊಜೊಮಿ ಹಶಿಮೊಟೊ ಉಪಸ್ಥಿತರಿದ್ದರು.
ಪೌಷ್ಟಿಕಾಂಶ ಭದ್ರತೆ ಹೆಚ್ಚಿಸುವ ಗುರಿ: "ಈ ಉಪಕ್ರಮದ ಮೂಲಕ ರಾಜ್ಯದಲ್ಲಿ ಪೌಷ್ಟಿಕಾಂಶ ಭದ್ರತೆಯನ್ನು ಹೆಚ್ಚಿಸುವ ಗುರಿಯನ್ನು ಒಡಿಶಾ ಸರ್ಕಾರ ಹೊಂದಿದೆ. ಇಂದು ಐತಿಹಾಸಿಕ ದಿನ. ಜನರು ಯಂತ್ರದಿಂದ ಅಕ್ಕಿಯನ್ನು ಪಡೆದು ಸುಲಭವಾಗಿ ತೆಗೆದುಕೊಂಡು ಹೋಗಬಹುದು. ಇದು ತುಂಬಾ ಸುಲಭದ ಹೆಜ್ಜೆಯಾಗಿದೆ ಇದನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರಾರಂಭಿಸಲಾಗುವುದು" ಎಂದು ಪಾತ್ರಾ ತಿಳಿಸಿದರು.
"ಸಾರ್ವಜನಿಕ ವಿತರಣ ಆವ್ಯವಸ್ಥೆ (ಪಿಡಿಎಸ್) ಮೂಲಕ ಆಹಾರ ಧಾನ್ಯಗಳ ವಿತರಣೆಯಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಈ 24X7 ಧಾನ್ಯ ಎಟಿಎಂ ಅನ್ನು ವಿನ್ಯಾಸಗೊಳಿಸಲಾಗಿದೆ. ಈ ಹೊಸ ವ್ಯವಸ್ಥೆಯು ವಿತರಕರಿಂದ ಉಂಟಾಗುವ ವಿಳಂಬವನ್ನು ತಡೆಯುತ್ತದೆ ಮತ್ತು ಫಲಾನುಭವಿಗಳು ತಮ್ಮ ಅರ್ಹ ಆಹಾರ ಧಾನ್ಯಗಳನ್ನು ತ್ವರಿತವಾಗಿ ಪಡೆಯಬಹುದು" ಎಂದು ಪಾತ್ರಾ ಒತ್ತಿ ಹೇಳಿದರು.
ಧಾನ್ಯ ಪಡೆಯಲು ಹೀಗೆ ಮಾಡಿ: ಅನ್ನಪೂರ್ತಿ ಧಾನ್ಯ ಎಟಿಎಂ ಅನ್ನು ಬಳಕೆದಾರ ಸ್ನೇಹಿಯಾಗಿ ವಿನ್ಯಾಸಗೊಳಿಲಾಗಿದೆ. ಎಟಿಎಂನಿಂದ ಧಾನ್ಯಗಳನ್ನು ಪಡೆಯುವ ಪ್ರಕ್ರಿಯೆ ನೇರವಾಗಿರುತ್ತದೆ. ಫಲಾನುಭವಿಗಳು ತಮ್ಮ ಆಧಾರ್ ಕಾರ್ಡ್ ಅಥವಾ ಪಡಿತರ ಚೀಟಿ ಸಂಖ್ಯೆಯನ್ನು ಅದರಲ್ಲಿ ನಮೂದಿಸಬೇಕು. ಬಯೋಮೆಟ್ರಿಕ್ಗೆ ಒಳಗಾಗಬೇಕು. ದೃಢೀಕರಿಸಿದ ನಂತರ ಯಂತ್ರವು ಐದು ನಿಮಿಷಗಳಲ್ಲಿ ಅರ್ಹ ಧಾನ್ಯಗಳನ್ನು ವಿತರಿಸುತ್ತದೆ. ಎಟಿಎಂ ಕೇವಲ 0.01 ಶೇಕಡಾ ದೋಷದ ದರದೊಂದಿಗೆ ಕೇವಲ ಐದು ನಿಮಿಷಗಳಲ್ಲಿ 50 ಕೆಜಿಯಷ್ಟು ಧಾನ್ಯಗಳನ್ನು ವಿತರಿಸಬಹುದು ಎಂದು ಭಾರತದಲ್ಲಿನ ವಿಶ್ವ ಆಹಾರ ಕಾರ್ಯಕ್ರಮ ಹೈಲೈಟ್ ಮಾಡಿದೆ.
ವಿಶ್ವ ಆಹಾರ ಕಾರ್ಯಕ್ರಮದ ಸಹಭಾಗಿತ್ವದಲ್ಲಿ ಈ ಕ್ರಮ: ಒಡಿಶಾ ಸರ್ಕಾರವು ರಾಜ್ಯದಲ್ಲಿ ಪೌಷ್ಟಿಕಾಂಶದ ಭದ್ರತೆಯನ್ನು ಸಾಧಿಸಲು ವಿಶ್ವ ಆಹಾರ ಕಾರ್ಯಕ್ರಮದ ಸಹಭಾಗಿತ್ವದಲ್ಲಿ ಈ ಉಪಕ್ರಮವನ್ನು ಪ್ರಾರಂಭಿಸಿದೆ. ಒಂದು ಬಾರಿ ಬಯೋಮೆಟ್ರಿಕ್ ದೃಢೀಕರಣ ಪೂರ್ಣಗೊಂಡ ನಂತರ, ಒಬ್ಬ ವ್ಯಕ್ತಿಯ ಸಂಪೂರ್ಣ ಆಹಾರ ಪಡಿತರವನ್ನು ಪಡೆಯಬಹುದು ಎಂದು ಭಾರತದಲ್ಲಿನ ವಿಶ್ವ ಆಹಾರ ಕಾರ್ಯಕ್ರಮ ತಿಳಿಸಿದೆ.
ಇದನ್ನೂ ಓದಿ: ಪಡಿತರ ಚೀಟಿದಾರರಿಗೆ ಹಣದ ಬದಲಾಗಿ ಆಹಾರ ಪದಾರ್ಥ ಕೊಡಬೇಕು: ಟಿ ಕೃಷ್ಣಪ್ಪ - T Krishnappa