ಹೈದರಾಬಾದ್: ಹಮಾಸ್ ಉಗ್ರರನ್ನು ಸಂಪೂರ್ಣವಾಗಿ ಸದೆಬಡಿಯುವ ಪ್ರತೀಕಾರ ಮಾಡಿರುವ ಇಸ್ರೇಲ್ ನಾಡಿಗೆ ಉದ್ಯೋಗ ಅರಸಿ ಭಾರತದ ಸಾವಿರಾರು ಕಾರ್ಮಿಕರು ಪ್ರಯಾಣಿಸಲು ಅಣಿಯಾಗಿದ್ದಾರೆ. ಇದಕ್ಕಾಗಿ ನಾ ಮುಂದು, ತಾ ಮುಂದು ಎಂದು ಮುಗಿಬಿದ್ದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇಸ್ರೇಲ್ ಸದ್ಯಕ್ಕೆ ಕಾರ್ಮಿಕರ ಬಿಕ್ಕಟ್ಟು ಎದುರಿಸುತ್ತಿದೆ. ಯುದ್ದದ ಹಿನ್ನೆಲೆಯಲ್ಲಿ ಇಸ್ರೇಲ್ ಗಡಿ ದಾಟಿ ಪ್ಯಾಲೇಸ್ತೀನಿಯರು ಕೆಲಸಕ್ಕೆ ಬಾರದಂತೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಕಾರ್ಮಿಕರು ಸಿಗುತ್ತಿಲ್ಲ. ಇದೀಗ ಇಸ್ರೇಲ್ ಅಧಿಕಾರಿಗಳು ಭಾರತದ ಕಾರ್ಮಿಕರನ್ನು ನೇಮಿಸಿಕೊಳ್ಳಲು ಮುಂದಾಗಿದ್ದಾರೆ.
ಭಾರತದಲ್ಲಿ ಕಟ್ಟಡ ಕಾರ್ಮಿಕರು, ಗಾರೆ ಕೆಲಸದವರು, ಮರಗೆಲಸ, ಪ್ಲಂಬಿಂಗ್ನಂತಹ ಕೌಶಲ್ಯ ಹೊಂದಿರುವವರ ನೇಮಕಕ್ಕೆ ಇಸ್ರೇಲ್ ಮುಂದಾಗಿದೆ. ಇದಕ್ಕಾಗಿ ಹರಿಯಾಣ ಮತ್ತು ಉತ್ತರ ಪ್ರದೇಶದಲ್ಲಿ ವಿಶೇಷ ನೇಮಕಾತಿ ಕೇಂದ್ರಗಳನ್ನು ತೆರೆಯಲಾಗಿದೆ. ಬಿಹಾರ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಪಂಜಾಬ್ನ ಜನರು ನೋಂದಣಿ ಕೇಂದ್ರಗಳಿಗೆ ಬರುತ್ತಿದ್ದಾರೆ.
ಉದ್ಯೋಗಕ್ಕಾಗಿ ಸರತಿ ಸಾಲು: ವಿವಿಧ ಉದ್ಯೋಗಗಳಿಗಾಗಿ ಸದ್ಯ 3,080 ಮಂದಿ ಇಸ್ರೇಲ್‌ಗೆ ತೆರಳಲು ಆಯ್ಕೆಯಾಗಿದ್ದಾರೆ. ಲಕ್ನೋದ ಸರ್ಕಾರಿ ಐಟಿಐಯಲ್ಲಿ ಇಸ್ರೇಲ್‌ಗೆ ಕಳುಹಿಸುವ ಕಾರ್ಮಿಕರ ನೋಂದಣಿ ಕಾರ್ಯ ಮುಗಿದಿದ್ದು, ಜನವರಿ 30ರಂದು ಕೌಶಲ್ಯ ಪರೀಕ್ಷೆ ನಡೆಯಲಿದೆ.
ಈ ಕುರಿತು ಮಾತನಾಡಿರುವ ಲಕ್ನೋ ಐಟಿಐ ಪ್ರಿನ್ಸಿಪಲ್ ರಾಜ್ ಕುಮಾರ್ ಯಾದವ್, "ಇಸ್ರೇಲ್ನಲ್ಲಿ 10 ಸಾವಿರ ಕಟ್ಟಡ ಕಾರ್ಮಿಕ ಹುದ್ದೆಗಳಿವೆ. ಇದಕ್ಕಾಗಿ ಸಾವಿರಾರು ಮಂದಿ ಐಟಿಐ ಕಚೇರಿ ಎದುರು ನೋಂದಣಿಗೆ ನಿಂತಿದ್ದಾರೆ. ಕಾರ್ಮಿಕ ಇಲಾಖೆಯಿಂದ ನೋಂದಣಿಗೊಂಡ ಮತ್ತು ಸಂಸ್ಥೆ ಸಹಿ ಮಾಡಿದ ಅರ್ಜಿಗಳನ್ನು ಆರಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಜನವರಿ 30ರಂದ ಕೌಶಲ್ಯ ಪರೀಕ್ಷೆ ನಡೆಯಲಿದೆ" ಎಂದರು.
ಆಕರ್ಷಕ ವೇತನ: ಇಸ್ರೇಲ್ನಲ್ಲಿ ಯುದ್ದದ ಪರಿಸ್ಥಿತಿಯ ನಡುವೆಯೂ ಭಾರತದ ಕಾರ್ಮಿಕರು ಅಲ್ಲಿಗೆ ತೆರಳಲು ಮುಂದಾಗಿರುವುದಕ್ಕೆ ಪ್ರಮುಖ ಕಾರಣ ಕೈ ತುಂಬಾ ಸಿಗಲಿರುವ ವೇತನ. ಇಸ್ರೇಲ್ನಲ್ಲಿ ಉದ್ಯೋಗಕ್ಕೆ ಆಯ್ಕೆಯಾದ ಜನರಿಗೆ ಅಲ್ಲಿನ ಸರ್ಕಾರ ಅನೇಕ ಭತ್ಯೆಗಳೊಂದಿಗೆ ಮಾಸಿಕ 1,37,250 ರೂ ಜೊತೆಗೆ, 15 ಸಾವಿರ ರೂ ಬೋನಸ್ ನೀಡುತ್ತಿದೆ.
ಈ ವೇತನವನ್ನು ಭಾರತದಲ್ಲಿ ದುಡಿಯಲು ಸರಾಸರಿ ಆರು ತಿಂಗಳು ಬೇಕಾಗುತ್ತದೆ. ಹೀಗಾಗಿ, ಅನೇಕ ಕಾರ್ಮಿಕರು ಅಲ್ಲಿಗೆ ತೆರಳಲು ಸಜ್ಜಾಗಿದ್ದಾರೆ. ಕಾರ್ಮಿಕ ಇಲಾಖೆಯಿಂದ ನೋಂದಣಿ ನಡೆಸಿದವರಿಗೆ ಮಾತ್ರ ಸಂದರ್ಶನಕ್ಕೆ ಆಹ್ವಾನ ನೀಡಲಾಗಿದೆ.
ಒಪ್ಪಂದ: ನರ್ಸಿಂಗ್ ಮತ್ತು ಕಟ್ಟಡ ನಿರ್ಮಾಣ ವಲಯದಲ್ಲಿ 40 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ಕಳುಹಿಸುವ ಒಡಂಬಡಿಕೆಗೆ ಕಳೆದ ವರ್ಷ ಭಾರತ ಮತ್ತು ಇಸ್ರೇಲ್ ಸರ್ಕಾರಗಳು ಸಹಿ ಹಾಕಿವೆ. ಇದೇ ರೀತಿಯ ನೇಮಕಾತಿ ಪ್ರಕ್ರಿಯೆಯೂ ಚೀನಾ, ಶ್ರೀಲಂಕಾ ಮತ್ತು ಮಾಲ್ಡೊವಾ ನಡುವೆಯೂ ಆಗಿದೆ.
ಜನವರಿ 23ರಿಂದ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು, ಇಸ್ರೇಲ್ನ 15 ಸದಸ್ಯರ ತಂಡ ಲಕ್ನೋದ ಉದ್ಯಮ ತರಬೇತಿ ಸಂಸ್ಥೆ (ಐಟಿಐ)ನಲ್ಲಿ ಕೌಶಲ್ಯ ಪರೀಕ್ಷೆ ಮತ್ತು ನೇಮಕಾತಿಗೆ ಚಾಲನೆ ನೀಡಿದೆ. ಸುಮಾರು 5 ಸಾವಿರ ಉದ್ಯೋಗಿಗಳ ಭರ್ತಿ ನಡೆಯಲಿದೆ. ಹರಿಯಾಣದಲ್ಲೂ ಕಳೆದ ವಾರದಿಂದ ಈ ನೇಮಕಾತಿ ನಡೆಸಲಾಗುತ್ತಿದೆ. ಭಾರತದ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಮಂಡಳಿಯ ಸಹಕಾರದೊಂದಿಗೆ ನೇಮಕಾತಿ ಪ್ರಕ್ರಿಯೆ ಸಾಗಿದೆ.(ಐಎಎನ್ಎಸ್)
ಇದನ್ನೂ ಓದಿ: ದಕ್ಷಿಣ ಸುಡಾನ್‌ನಲ್ಲಿ ಗುಂಡಿನ ದಾಳಿ: ವಿಶ್ವಸಂಸ್ಥೆ ಶಾಂತಿಪಾಲಕ ಸೇರಿ 52 ಜನ ಸಾವು