ನವದೆಹಲಿ: ಆಕಾಶದಿಂದ ಭೂಮಿ ಮೇಲೆ ಮಿಂಚಿನ ದಾಳಿ ನಡೆಸಬಲ್ಲ ಸ್ವದೇಶಿ ನಿರ್ಮಿತ ರುದ್ರಂ-2 ಕ್ಷಿಪಣಿಯನ್ನು ಭಾರತ ಬುಧವಾರ ಯಶಸ್ವಿಯಾಗಿ ಪರೀಕ್ಷಾರ್ಥ ಪ್ರಯೋಗ ನಡೆಸಿದೆ. ಈ ಪ್ರಯೋಗಕ್ಕೆ ವಾಯುಪಡೆಯ ಎಸ್‌ಯು-30 ಫೈಟರ್ ಜೆಟ್ ಬಳಸಲಾಗಿತ್ತು. ಒಡಿಶಾ ಕರಾವಳಿ ಪ್ರದೇಶದಲ್ಲಿ ನಡೆದ ಈ ಪರೀಕ್ಷೆ ಎಲ್ಲ ಗುರಿಗಳನ್ನು ಈಡೇರಿಸಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
'ರುದ್ರಂ 2' ಕ್ಷಿಪಣಿ ಕುರಿತು ಸಂಕ್ಷಿಪ್ತ ಮಾಹಿತಿ: ಇದು ಸ್ವದೇಶಿ ನಿರ್ಮಿತ ಕ್ಷಿಪಣಿ. ಘನ ಇಂಧನದ ಮೂಲಕ ಹಾರಾಟ ನಡೆಸುತ್ತದೆ. ಆಕಾಶದಿಂದ ಭೂಮಿ ಮೇಲೆ ದಾಳಿ ಮಾಡುವ ವ್ಯವಸ್ಥೆ ಹೊಂದಿದೆ. ಇದರಲ್ಲಿ ಡಿಆರ್‌ಡಿಒ ಪ್ರಯೋಗಾಲಯಗಳಲ್ಲಿ ತಯಾರಿಸಿದ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ. ವಿರೋಧಿಗಳ ವ್ಯವಸ್ಥೆಗಳನ್ನು ಕ್ಷಣಾರ್ಧದಲ್ಲಿ ಪುಡಿಗಟ್ಟುವ ಶಕ್ತಿಯೇ 'ರುದ್ರಂ'.
ಯಶಸ್ವಿ ಪರೀಕ್ಷಾರ್ಥ ಹಾರಾಟದ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಡಿಆರ್‌ಡಿಒ, ವಾಯುಪಡೆ ಮತ್ತು ಇದಕ್ಕೆ ಸಹಕರಿಸಿದ ಕೈಗಾರಿಕೆಗಳ ಕೆಲಸಗಳನ್ನು ಶ್ಲಾಘಿಸಿದ್ದಾರೆ.
"ಇದು ದೇಶದ ರಕ್ಷಣಾ ಪಡೆಗಳ ಶಕ್ತಿಯನ್ನು ಇಮ್ಮಡಿಗೊಳಿಸಿದೆ" ಎಂದು ಸಚಿವ ಸಿಂಗ್ ಬಣ್ಣಿಸಿದ್ದಾರೆ.