ನವದೆಹಲಿ: "ಯುದ್ಧ, ಆರ್ಥಿಕ ಬಿಕ್ಕಟ್ಟು, ಆತಂಕ ಹಾಗೂ ಉದ್ವಿಗ್ನತೆಯಿಂದ ಜಗತ್ತಿನ ಹಲವು ರಾಷ್ಟ್ರಗಳು ಹಗ್ಗದ ಮೇಲಿನ ನಡಿಗೆಯಂತೆ ಅನಿಶ್ಚಿತತೆಗಳೊಂದಿಗೆ ಹೋರಾಡುತ್ತಿವೆ. ಇಂಥ ಯುಗದಲ್ಲಿ ಭಾರತ ಇಡೀ ಜಗತ್ತಿಗೆ ಭರವಸೆಯ ಕಿರಣವಾಗಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.
ಇಂದು ದೆಹಲಿಯಲ್ಲಿ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, "ಜಾಗತಿಕ ಭವಿಷ್ಯ ರೂಪಿಸುವಲ್ಲಿ ಭಾರತ ಮುಂದಾಳತ್ವ ವಹಿಸುತ್ತಿದೆ. ಕಷ್ಟದ ಸಮಯದಲ್ಲಿ ಭಾರತ ಸಹವರ್ತಿ ಎಂಬುದನ್ನು ಜಗತ್ತು ಅರ್ಥಮಾಡಿಕೊಳ್ಳುತ್ತಿದೆ" ಎಂದರು.
"ಕಳೆದ ನಾಲ್ಕೈದು ವರ್ಷಗಳಿಂದ ಭವಿಷ್ಯದ ಬಗೆಗಿನ ಚರ್ಚೆ ಹಾಗೂ ಚಿಂತನೆ ಹೆಚ್ಚಾಗಿದೆ. ಕೋವಿಡ್ ರೋಗವನ್ನು ಹೇಗೆ ಎದುರಿಸುವುದು ಎಂಬ ಚಿಂತೆಯಿತ್ತು. ಆದರೆ ನಾವು ಹೋರಾಡಿದೆವು. ಅಲ್ಲದೇ ಹವಾಮಾನ ಬದಲಾವಣೆ, ನಿರುದ್ಯೋಗದಂತಹ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಎಲ್ಲ ಸಮಸ್ಯೆಗಳು ಮತ್ತು ಸವಾಲುಗಳ ಹೊರತಾಗಿಯೂ ನಾವಿಂದು ಭಾರತೀಯ ಶತಮಾನದ ಬಗ್ಗೆ ಚರ್ಚಿಸುತ್ತಿದ್ದೇವೆ" ಎಂದು ಅವರು ಹೇಳಿದರು.
"ನಮ್ಮ ಸರ್ಕಾರಕ್ಕೆ ಸತತ ಮೂರನೇ ಬಾರಿ ಅಧಿಕಾರ ನೀಡುವ ಮೂಲಕ ದೇಶದ ಜನತೆ ಸ್ಥಿರತೆಯ ಸಂದೇಶ ನೀಡಿದ್ದಾರೆ. ಇತ್ತೀಚೆಗೆ ನಡೆದ ಹರಿಯಾಣ ಚುನಾವಣೆಯಲ್ಲೂ ಇದು ಸಾಬೀತಾಗಿದೆ. ದೇಶ ಎಲ್ಲ ಕ್ಷೇತ್ರಗಳಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಹಾಗಾಗಿ ಪ್ರಪಂಚದ ಕಣ್ಣುಗಳು ಭಾರತದತ್ತ ನೆಟ್ಟಿವೆ" ಎಂದು ತಿಳಿಸಿದರು.
"ಮೂರನೇ ಬಾರಿಗೆ ಅಧಿಕಾರಕ್ಕೆ ಬಂದ ನಮ್ಮ ಸರ್ಕಾರ ಈಗಾಗಲೇ 125 ದಿನಗಳನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ ಬಡವರಿಗೆ 3 ಕೋಟಿ ಮನೆಗಳನ್ನು ನೀಡಲಾಗುತ್ತಿದೆ. 9 ಲಕ್ಷ ಕೋಟಿ ರೂ.ಗಳ ಮೂಲಸೌಕರ್ಯ ಯೋಜನೆಗಳು ಆರಂಭಗೊಂಡಿವೆ. 15 ಹೊಸ ವಂದೇ ಭಾರತ್ ರೈಲುಗಳನ್ನು ಪ್ರಾರಂಭಿಸಲಾಗಿದೆ. ಎಂಟು ಹೊಸ ವಿಮಾನ ನಿಲ್ದಾಣಗಳ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ. ರೈತರ ಖಾತೆಗೆ 21 ಸಾವಿರ ಕೋಟಿ ರೂ. ಹಣ ವರ್ಗಾವಣೆಯಾಗಿದ್ದು, 70 ವರ್ಷ ಮೇಲ್ಪಟ್ಟ ವೃದ್ಧರಿಗೆ ಉಚಿತ ವೈದ್ಯಕೀಯ ಚಿಕಿತ್ಸೆಗೆ ವ್ಯವಸ್ಥೆ ಮಾಡಿರುವುದು ಹೆಮ್ಮೆಯ ಸಂಗತಿ. ಭವಿಷ್ಯದ ಚಿಂತನೆಯೊಂದಿಗೆ ತಮ್ಮ ಸರ್ಕಾರ ಮುನ್ನಡೆಯುತ್ತಿದ್ದು, 2047ರ ವೇಳೆಗೆ ವಿಕಸಿತ ಭಾರತ್ ನಮ್ಮ ಗುರಿ" ಎಂದರು.
ಇದನ್ನೂ ಓದಿ: ಕಾಂಗ್ರೆಸ್ ಹಿಂದುಗಳನ್ನು ಇಬ್ಭಾಗಿಸುವ, ಜಾತಿಗಳ ಮಧ್ಯೆ ದ್ವೇಷ ಹರಡುವ ಪಕ್ಷ: ಮೋದಿ