ನವದೆಹಲಿ: ಮಹಾರಾಷ್ಟ್ರದ ಮುಂಬೈನಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ 'ಇಂಡಿಯಾ' ಮೈತ್ರಿಕೂಟವು ಮೇ 17ರಂದು ಮೆಗಾ ರ್‍ಯಾಲಿ ಆಯೋಜಿಸಿದೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಶಿವಸೇನೆ (ಯುಬಿಟಿ) ಅಧ್ಯಕ್ಷ ಉದ್ಧವ್ ಠಾಕ್ರೆ ಮತ್ತು ಎನ್‌ಸಿಪಿ (ಎಸ್‌ಪಿ) ಅಧ್ಯಕ್ಷ ಶರದ್ ಪವಾರ್ ತಮ್ಮ ಮೈತ್ರಿ ಪಕ್ಷಗಳ ಅಭ್ಯರ್ಥಿಗಳ ಪರ ಬೆಂಬಲ ಕೋರಲಿದ್ದಾರೆ. ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನೂ ರ್‍ಯಾಲಿಗೆ ಆಹ್ವಾನಿಸುವ ಪ್ರಯತ್ನಗಳು ನಡೆಯುತ್ತಿವೆ.
ಮುಂಬೈ ಮಹಾರಾಷ್ಟ್ರದ ಹೃದಯ ಭಾಗ ಮತ್ತು ಯುದ್ಧ ಭೂಮಿಯಾಗಿದೆ. ಮೇ 17ರಂದು 'ಇಂಡಿಯಾ' ಮೈತ್ರಿಕೂಟವು ಬೃಹತ್ ಸಭೆಯನ್ನು ನಡೆಸಲಿವೆ. ಕಳೆದ ನಾಲ್ಕು ಹಂತಗಳ ಚುನಾವಣೆಯಲ್ಲಿ ರಾಜ್ಯದ ಉಳಿದ ಭಾಗಗಳಲ್ಲಿ ಉತ್ತಮ ಸಾಧನೆ ಮಾಡಿರುವುದರಿಂದ ಮುಂಬೈನ ಎಲ್ಲ ಆರು ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷಗಳು ಗೆಲ್ಲುವ ವಿಶ್ವಾಸ ಇದೆ ಎಂದು ಮಹಾರಾಷ್ಟ್ರದ ಎಐಸಿಸಿ ಉಸ್ತುವಾರಿ ಕಾರ್ಯದರ್ಶಿ ಆಶಿಶ್ ದುವಾ 'ಈಟಿವಿ ಭಾರತ್'ಗೆ ತಿಳಿಸಿದರು.
2022ರಿಂದ ಮುಂಬೈ ಶಿವಸೇನೆಯ ಎರಡು ಬಣಗಳ ನಡುವಿನ ಜಿದ್ದಾಜಿದ್ದಿಗೆ ಸಾಕ್ಷಿಯಾಗಿದೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉದ್ಧವ್ ಠಾಕ್ರೆ ನೇತೃತ್ವದ ಬಣಗಳು ತೀವ್ರ ಪೈಪೋಟಿಗೆ ಬಿದ್ದಿವೆ. ಮತ್ತೊಂದೆಡೆ, ಶಿವಸೇನೆ ಮಾದರಿಯಲ್ಲೇ ಎನ್‌ಸಿಪಿ 2023ರಲ್ಲಿ ಇಬ್ಭಾಗವಾಗಿದೆ. ಬಿಜೆಪಿ, ಶಿಂಧೆ ಬಣದ ಶಿವಸೇನೆಯ ಸಮ್ಮಿಶ್ರ ಸರ್ಕಾರದಲ್ಲಿ ಅಜಿತ್ ಪವಾರ್ ಉಪಮುಖ್ಯಮಂತ್ರಿ ಆಗಿದ್ದಾರೆ. ಮುಂಬೈನ ಒಟ್ಟು ಆರು ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಮುಂಬೈ ಉತ್ತರ-ಕೇಂದ್ರ ಮತ್ತು ಉತ್ತರದ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದೆ. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯು ಮುಂಬೈ ದಕ್ಷಿಣ, ಮುಂಬೈ ದಕ್ಷಿಣ-ಕೇಂದ್ರ, ಮುಂಬೈ ಈಶಾನ್ಯ ಮತ್ತು ಮುಂಬೈ-ವಾಯುವ್ಯ ಕ್ಷೇತ್ರಗಳಲ್ಲಿ ಕಣಕ್ಕಿಳಿದಿದೆ.
ಮೂರು ಕ್ಷೇತ್ರಗಳಲ್ಲಿ ಶಿವಸೇನೆಯ ಎರಡು ಬಣಗಳ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಮುಂಬೈ ದಕ್ಷಿಣದಲ್ಲಿ ಶಿವಸೇನೆ (ಯುಬಿಟಿ)ಯ ಹಾಲಿ ಸಂಸದ ಅರವಿಂದ್ ಸಾವಂತ್ ವಿರುದ್ಧ ಶಿಂಧೆ ಬಣದ ಬೈಕುಲ್ಲಾ ಶಾಸಕಿ ಯಾಮಿನಿ ಜಾಧವ್ ವಿರುದ್ಧ ಸ್ಪರ್ಧೆ ಮಾಡಿದ್ದಾರೆ. ಮುಂಬೈ ದಕ್ಷಿಣ-ಕೇಂದ್ರದಲ್ಲಿ ಶಿವಸೇನೆಯ (ಯುಬಿಟಿ)ಯ ಅನಿಲ್ ದೇಸಾಯಿ, ಶಿಂಧೆ ಬಣದ ಹಾಲಿ ಸಂಸದ ರಾಹುಲ್ ಶೆವಾಲೆ ವಿರುದ್ಧ ಸ್ಪರ್ಧಿಸಿದ್ದಾರೆ. ಮುಂಬೈ ವಾಯುವ್ಯದಲ್ಲಿ ಶಿವಸೇನೆ (ಯುಬಿಟಿ)ಯ ಅಮೋಲ್ ಕೀರ್ತಿಕರ್ ಹಾಗೂ ಶಿಂಧೆ ಬಣದ ರವೀಂದ್ರ ವೈಕರ್ ನಡುವೆ ಪೈಪೋಟಿ ಇದೆ.
ಮುಂಬೈ ಈಶಾನ್ಯದಲ್ಲಿ ಶಿವಸೇನೆ (ಯುಬಿಟಿ)ಯ ಸಂಜಯ್ ದಿನಾ ಪಾಟೀಲ್, ಬಿಜೆಪಿಯ ಮಿಹಿರ್ ಕೋಟೆಚಾ ವಿರುದ್ಧ ಕಣಕ್ಕಿಳಿದಿದ್ದಾರೆ. ಮುಂಬೈ ಉತ್ತರ-ಕೇಂದ್ರದಲ್ಲಿ ಮುಂಬೈ ಕಾಂಗ್ರೆಸ್ ಮುಖ್ಯಸ್ಥೆ ವರ್ಷಾ ಗಾಯಕ್ವಾಡ್ ಹಾಗೂ ಬಿಜೆಪಿ ಅಭ್ಯರ್ಥಿ, ಖ್ಯಾತ ವಕೀಲ ಉಜ್ವಲ್ ನಿಕಮ್ ಮಧ್ಯೆ ಹಣಾಹಣಿ ಇದೆ. ಈ ಕ್ಷೇತ್ರದಲ್ಲಿ ಬಿಜೆಪಿ ನಾಯಕ ದಿವಂಗತ ಪ್ರಮೋದ್ ಮಹಾಜನ್ ಅವರ ಪುತ್ರಿ ಪೂನಂ ಮಹಾಜನ್ ಎರಡು ಬಾರಿ ಗೆದ್ದಿದ್ದರು. ಆದರೆ, ಈ ಬಾರಿ ಪೂನಂ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಲಾಗಿದೆ.
ಮುಂಬೈ ಉತ್ತರದಲ್ಲಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಭೂಷಣ್ ಪಾಟೀಲ್ ಸ್ಪರ್ಧಿಸಿದ್ದಾರೆ. ಪಿಯೂಷ್ ಇದೇ ಮೊದಲ ಬಾರಿಗೆ ಲೋಕಸಭೆಗೆ ಅಖಾಡಕ್ಕೆ ಇಳಿದಿದ್ದಾರೆ. ಕಾಂಗ್ರೆಸ್ ಮುಂಬೈ ದಕ್ಷಿಣ ಕೇಂದ್ರ ಕ್ಷೇತ್ರದ ಮೇಲೆ ಕಣ್ಣಿಟ್ಟಿತ್ತು. ಆದರೆ, ಶಿವಸೇನೆ (ಯುಬಿಟಿ) ಈ ಕ್ಷೇತ್ರವನ್ನು ಬಿಟ್ಟುಕೊಟ್ಟಿಲ್ಲ. ಇದು ಮಾಜಿ ಸಂಸದ ಸಂಜಯ್ ನಿರುಪಮ್ ಕಾಂಗ್ರೆಸ್ ಪಕ್ಷವನ್ನು ತ್ಯಜಿಸಲು ಕಾರಣವೂ ಆಗಿದೆ. ರಾಜಧಾನಿ ಮುಂಬೈನಲ್ಲಿ ತಮ್ಮ ಪ್ರಾಬಲ್ಯ ಸಾಧಿಸಲು ಶಿವಸೇನೆಯ ಎರಡು ಬಣಗಳು ಹಲವಾರು ಆರೋಪಗಳು ಮತ್ತು ಪ್ರತ್ಯಾರೋಪಗಳಲ್ಲಿ ತೊಡಗಿವೆ.
ಬಿಜೆಪಿ ಅನ್ಯಾಯದ ಮಾರ್ಗದಲ್ಲಿ ಸರ್ಕಾರ ರಚಿಸಿದೆ. ಶಿವಸೇನೆ ಮತ್ತು ಎನ್‌ಸಿಪಿಯ ಪಕ್ಷಾಂತರಿಗಳ ಮೂಲಕ ಉದ್ಧವ್ ಠಾಕ್ರೆ ಮತ್ತು ಶರದ್ ಪವಾರ್ ಅವರ ಬೆನ್ನಿಗೆ ಚೂರಿ ಹಾಕಲಾಗಿದೆ. ಇದನ್ನು ಅರಿತಿರುವ ಜನರು ಉದ್ಧವ್, ಶರದ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ಈ ಬಾರಿ ಕಾಂಗ್ರೆಸ್, ಶಿವಸೇನೆ (ಯುಬಿಟಿ) ಮತ್ತು ಎನ್‌ಸಿಪಿ (ಎಸ್‌ಪಿ) ಒಳಗೊಂಡಿರುವ ಮಹಾವಿಕಾಸ್ ಆಘಾಡಿ (ಎಂವಿಎ) ಮೈತ್ರಿಕೂಟವು ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಲಿದೆ ಎಂದು ಮುಂಬೈ ಕಾಂಗ್ರೆಸ್ ನಾಯಕ ಚರಣ್ ಸಿಂಗ್ ಸಪ್ರಾ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಹಾಲಿ ಸಂಸದೆ ಪೂನಂ ಮಹಾಜನ್ಗೆ ಬಿಜೆಪಿ ಟಿಕೆಟ್ ನಿರಾಕರಣೆ; ಖ್ಯಾತ ವಕೀಲ ಉಜ್ವಲ್ ನಿಕಮ್ ಗೆ ಮಣೆ