ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗೆ ಪ್ರತಿಪಕ್ಷಗಳ 'ಇಂಡಿಯಾ' ಮೈತ್ರಿಕೂಟವು ರಣಕಹಳೆ ಮೊಳಗಿಸಿದೆ. ಭಾನುವಾರ ಬಿಹಾರ ರಾಜಧಾನಿ ಪಾಟ್ನಾದಿಂದ ತನ್ನ ಚುನಾವಣಾ ಪ್ರಚಾರ ಕಾರ್ಯ ಆರಂಭಿಸಿದೆ. 543 ಸದಸ್ಯ ಬಲದ ಸಂಸತ್ತಿಗೆ 120 ಸಂಸದರನ್ನು ರವಾನಿಸುವ ಎರಡು ದೊಡ್ಡ ರಾಜ್ಯಗಳಾದ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಬಿಜೆಪಿಯನ್ನು ಸೋಲಿಸುವುದಾಗಿ 'ಇಂಡಿಯಾ' ಮೈತ್ರಿಕೂಟ ಶಪಥ ಮಾಡಿದೆ.
ಇಲ್ಲಿನ ಐತಿಹಾಸಿಕ ಗಾಂಧಿ ಮೈದಾನದಲ್ಲಿ 'ಜನ ವಿಶ್ವಾಸ್' ಬಹಿರಂಗ ಸಮಾವೇಶದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಆರ್‌ಜೆಡಿ ಪಕ್ಷದ ವರಿಷ್ಠ ಲಾಲು ಪ್ರಸಾದ್, ತೇಜಸ್ವಿ ಯಾದವ್, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಸಿಪಿಐ-ಎಂ ಪಕ್ಷದ ನಾಯಕ ಸೀತಾರಾಮ್ ಯೆಚೂರಿ, ಸಿಪಿಐ ಪಕ್ಷದ ಡಿ.ರಾಜಾ, ಸಿಪಿಐ-ಎಂಎಲ್ ಪಕ್ಷದ ದೀಪಂಕರ್ ಭಟ್ಟಾಚಾರ್ಯ ಅವರಂತಹ ಹಲವು ನಾಯಕರು ಪಾಲ್ಗೊಂಡು ತಮ್ಮ ಶಕ್ತಿ ಪ್ರದರ್ಶನ ತೋರಿಸಿದರು. ಇಡೀ ಮೈದಾನವು ಲಕ್ಷಾಂತರ ಜನರಿಂದ ತುಂಬಿ ಹೋಗಿತ್ತು. ಇದು ನಾಯಕರ ಹುಮ್ಮಸ್ಸನ್ನು ಇಮ್ಮಡಿಗೊಳಿಸುವಂತೆ ಮಾಡಿತು.
'ಇಂಡಿಯಾ' ಮೈತ್ರಿಕೂಟವು ಸಾಮಾಜಿಕ ನ್ಯಾಯದ ಪರವಾಗಿದ್ದರೆ, ಬಿಜೆಪಿಯ ಸಮಾಜದ ವಿಭಜನೆ ಮತ್ತು ಶ್ರೀಮಂತ ಪರ ನೀತಿಗಳನ್ನು ಹೊಂದಿದೆ ಎನ್ನುವ ಮೂಲಕ ನಾಯಕರು ಜನರನ್ನು ಸೆಳೆಯುವ ಪ್ರಯತ್ನ ಮಾಡಿದರು. ಬಹುತೇಕ ನಾಯಕರು ಯುಪಿ ಮತ್ತು ಬಿಹಾರದಲ್ಲಿ ಜಾತಿ ಸಮೀಕರಣ, ಯುವಕರಿಗೆ ಉದ್ಯೋಗ ಮತ್ತು ಮಹಿಳೆಯರ ಭದ್ರತೆ ಬಗ್ಗೆ ಉಲ್ಲೇಖಿಸಿದರು. ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಪ್ರಧಾನಿ ಮೋದಿ ದೇಶವನ್ನು ನಾಶ ಮಾಡುತ್ತಿದ್ದಾರೆ. ಸುಳ್ಳನ್ನು ಹರಡುವುದರಲ್ಲಿ ನಿಪುಣರಾಗಿದ್ದಾರೆ. ಕಳೆದ 10 ವರ್ಷಗಳಲ್ಲಿ ಕೇಂದ್ರದ ನೀತಿಗಳಿಂದ ದೇಶದಲ್ಲಿ ಯಾರಿಗೂ ಪ್ರಯೋಜನವಾಗಿಲ್ಲ. ಮೋದಿ ಸುಳ್ಳಿನ ಸರ್ದಾರ್ ಎಂದು ಟೀಕಾಪ್ರಹಾರ ನಡೆಸಿದರು.
ಇದನ್ನೂ ಓದಿ: ಕೇಂದ್ರ ಸರ್ಕಾರ ಆಮದು, ರಫ್ತು ನೀತಿ ಬದಲಿಸಿ ಕೃಷಿ ಉತ್ಪನ್ನಗಳ ಬೆಲೆ ಕುಗ್ಗಿಸುತ್ತಿದೆ: ರಾಹುಲ್ ಗಾಂಧಿ
ತಮ್ಮ ಭಾರತ್ ಜೋಡೋ ನ್ಯಾಯ್ ಯಾತ್ರೆಯಿಂದ ವಿರಾಮ ಪಡೆದು ಮೈತ್ರಿಕೂಟದ ಈ ಮಹತ್ವದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ರಾಹುಲ್ ಗಾಂಧಿ, ಬಿಹಾರವು ದೇಶದ ರಾಜಕೀಯ ನಾಡಿ ಕೇಂದ್ರವಾಗಿದೆ. ದೇಶದಲ್ಲಿ ಬದಲಾವಣೆ ಆರಂಭವಾಗುವುದೇ ಬಿಹಾರದಿಂದ. ಬಿಜೆಪಿ ಕೆಲವು ದೊಡ್ಡ ಸಂಸ್ಥೆಗಳಿಗಾಗಿ ಮಾತ್ರ ಕೆಲಸ ಮಾಡುತ್ತದೆ. ಬಡವರನ್ನು ಕಡೆಗಣಿಸುತ್ತದೆ ಎಂದು ವಾಗ್ದಾಳಿ ಮಾಡಿದರು.
ಉತ್ತರ ಪ್ರದೇಶ, ಬಿಹಾರದ 120 ಕ್ಷೇತ್ರಗಳ ಮೇಲೆ ಕೇಂದ್ರೀಕರಿಸುವ ಅಗತ್ಯವನ್ನು ಒತ್ತಿಹೇಳಿದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, ನಾವು 120 ಕ್ಷೇತ್ರಗಳಲ್ಲೂ ಬಿಜೆಪಿಯನ್ನು ಸೋಲಿಸಬೇಕು. ದೇಶ ಮತ್ತು ಸಂವಿಧಾನವನ್ನು ಉಳಿಸಬೇಕೆಂದು ಕರೆ ನೀಡಿದರು. ಹಿರಿಯ ನಾಯಕ ಲಾಲು ಪ್ರಸಾದ್ ಮಾತನಾಡಿ, ನಾವು ಒಟ್ಟಾಗಿ ಬಿಜೆಪಿಯನ್ನು ಹೊರಹಾಕುತ್ತೇವೆ. ಮತದಾನಕ್ಕೆ ತಯಾರಿ ಆರಂಭಿಸಿ, ಅತ್ಯಂತ ಹಿಂದುಳಿದವರ ಬೆಂಬಲವನ್ನು ಕ್ರೋಢೀಕರಿಸಿ. ನಾವು ದೆಹಲಿಯನ್ನು ವಶಪಡಿಸಿಕೊಳ್ಳಬೇಕು ಎಂದು ಗುಡುಗಿದರು.
ಮಾಜಿ ಡಿಸಿಎಂ ತೇಜಸ್ವಿ ಯಾದವ್ ಮಾತನಾಡಿ, ಬಿಜೆಪಿಯು ಚುನಾಯಿತ ಸರ್ಕಾರಗಳನ್ನು ಉರುಳಿಸಲು ಪ್ರಯತ್ನಿಸುತ್ತಿದೆ. ಸುಳ್ಳು ಭ್ರಷ್ಟಾಚಾರ ಪ್ರಕರಣಗಳ ಮೂಲಕ ವಿಪಕ್ಷಗಳನ್ನು ಗುರಿಯಾಗಿಸುತ್ತದೆ. ಅವರು (ಬಿಜೆಪಿಯವರು) ಶಾಸಕರನ್ನು ಖರೀದಿಸಬಹುದು. ಆದರೆ ಮತದಾರರನ್ನಲ್ಲ. ಇದೊಂದು ಸೈದ್ಧಾಂತಿಕ ಹೋರಾಟವಾಗಿದೆ. ನಾವು ಯಾವುದಕ್ಕೂ ಹೆದರುವುದಿಲ್ಲ ಎಂದರು.
ನಾವು ನಮ್ಮ ಮಿತ್ರರಾಷ್ಟ್ರಗಳಿಗೆ ಕೃತಜ್ಞರಾಗಿರುತ್ತೇವೆ. ಕಷ್ಟದ ಸಮಯದಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳು ನಮ್ಮ ಬೆಂಬಲಕ್ಕೆ ನಿಂತಿವೆ. ರಾಹುಲ್ ಗಾಂಧಿ ಅವರಿಗೆ ಸಮನ್ಸ್ ಜಾರಿ ಮಾಡಲಾಗಿತ್ತು. ಇದೀಗ ಅಖಿಲೇಶ್ ಯಾದವ್ ಅವರನ್ನು ಟಾರ್ಗೆಟ್ ಮಾಡಲಾಗಿದೆ. ಆದರೆ, ನಾವು ಹಿಂದೆ ಸರಿಯುವುದಿಲ್ಲ ಮತ್ತು ಜನರ ಹಕ್ಕುಗಳಿಗಾಗಿ ಹೋರಾಟವನ್ನು ಮುಂದುವರಿಸುತ್ತೇವೆ. 2019ರಲ್ಲಿ ನೀವು (ಮತದಾರರು) ಬಿಹಾರದಲ್ಲಿ 40 ಲೋಕಸಭಾ ಕ್ಷೇತ್ರಗಳ 39 ಸ್ಥಾನಗಳನ್ನು ಎನ್‌ಡಿಎಗೆ ನೀಡಿದ್ದೀರಿ. ಎನ್‌ಡಿಎದವರು ನಿಮಗಾಗಿ ಏನು ಮಾಡಿದ್ದಾರೆಂದು, ಅವರಿಗೆ ಪ್ರಶ್ನಿಸಿ ಎಂದು ತೇಜಸ್ವಿ ಮತದಾರರಿಗೆ ಕರೆ ನೀಡಿದರು.
ಇನ್ನು, 80 ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ನಡುವೆ ಸೀಟು ಹಂಚಿಕೆ ಒಪ್ಪಂದವನ್ನು ಅಂತಿಮಗೊಳಿಸಲಾಗಿದೆ. ಆದರೆ, ಬಿಹಾರದಲ್ಲಿ ಇನ್ನೂ ಸೀಟು ಹಂಚಿಕೆ ಒಪ್ಪಂದವು ಅಂತಿಮವಾಗಿಲ್ಲ.
ಇದನ್ನೂ ಓದಿ: ಮುಂದೆ ನಾನು ಎಲ್ಲಿಯೂ ಹೋಗಲ್ಲ.. ಎನ್‌ಡಿಎ 400ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ: ಪ್ರಧಾನಿ ಮೋದಿಗೆ ನಿತೀಶ್ ಭರವಸೆ