ನವದೆಹಲಿ : ಶುಕ್ರವಾರ ಪ್ರಕಟವಾದ ಬಿಜೆಪಿಯ 195 ಕ್ಷೇತ್ರಗಳ ಲೋಕಸಭಾ ಚುನಾವಣಾ ಪಟ್ಟಿಯಿಂದ ಪಕ್ಷದ ಫೈರ್ ಬ್ರ್ಯಾಂಡ್ ನಾಯಕಿ ಎಂದೇ ಹೆಸರಾಗಿರುವ ಹಾಲಿ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ಹಾಗೂ ಹಾಲಿ ಸಂಸದರಾದ ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ, ರಮೇಶ ಬಿಧುರಿ ಅವರ ಹೆಸರನ್ನು ಕೈಬಿಟ್ಟಿರುವುದು ಗಮನಾರ್ಹ. ಆಗಾಗ ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಭಾಷಣ ಮಾಡುವ ಮೂಲಕ ವಿವಾದ ಸೃಷ್ಟಿಸುತ್ತಿದ್ದ ಇವರಿಗೆ ಬಿಜೆಪಿ ಈ ಬಾರಿ ಮಣೆ ಹಾಕದಿರುವುದು ಪಕ್ಷದ ನಿಲುವು ಬದಲಾಗಿರುವುದು ಎದ್ದು ಕಾಣಿಸುತ್ತದೆ.
ಈ ನಾಯಕರು ಸಂಸತ್ತಿನ ಒಳಗೆ ಮತ್ತು ಹೊರಗೆ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಾಗಿ ವಿವಾದಗಳಿಗೆ ಸಿಲುಕಿದ್ದಾರೆ. ಹೀಗಾಗಿ ಬಿಜೆಪಿಯು ಈ ಬಾರಿ 'ಆಪರೇಷನ್ ಕ್ಲೀನ್-ಅಪ್' ಮಾಡಿದಂತೆ ಕಾಣಿಸುತ್ತಿದೆ. ಈ ಮೂಲಕ 31 ರಾಜಕೀಯ ಪಕ್ಷಗಳ ಒಕ್ಕೂಟವಾದ ಇಂಡಿಯಾ ಮೈತ್ರಿಕೂಟವನ್ನು ಸಮರ್ಥವಾಗಿ ಎದುರಿಸಲು ಬಿಜೆಪಿ ಸಿದ್ಧತೆ ಮಾಡಿಕೊಳ್ಳುತ್ತಿದೆ.
2008 ರ ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿರುವ ಪ್ರಗ್ಯಾ ಠಾಕೂರ್ ಅವರಿಗೆ ಟಿಕೆಟ್ ತಪ್ಪಿಸಲಾಗಿದ್ದು, ಅವರ ಬದಲಿಗೆ ಅಲೋಕ್ ಶರ್ಮಾ ಅವರರಿಗೆ ಟಿಕೆಟ್ ನೀಡಲಾಗಿದೆ. ಅನಾರೋಗ್ಯದ ಆಧಾರದ ಮೇಲೆ ಜಾಮೀನಿನ ಮೇಲೆ ಹೊರಬಂದಿದ್ದ ಠಾಕೂರ್, ವಿವಾದದಿಂದ ದೂರವಿರಲು ಸಾಕಷ್ಟು ಕಸರತ್ತು ನಡೆಸುತ್ತಿದ್ದಾರೆ.
ಗಾಂಧೀಜಿಯವರ ಹಂತಕ ನಾಥೂರಾಮ್ ಗೋಡ್ಸೆ 'ದೇಶಭಕ್ತ' ಎಂದು ಕರೆದ ಪ್ರಗ್ಯಾ ಸಿಂಗ್ ಠಾಕೂರ್ ಹೇಳಿಕೆ ಬಿಜೆಪಿಗೆ ತೀವ್ರ ಮುಜುಗರ ಉಂಟು ಮಾಡಿತ್ತು. ಅಲ್ಲದೆ ಈ ಹೇಳಿಕೆಯಿಂದಾಗಿ ಪ್ರಗ್ಯಾ ಸಿಂಗ್ರನ್ನು ಪ್ರಧಾನಿ ಮೋದಿ ತಮ್ಮಿಂದ ದೂರ ಇಟ್ಟಿದ್ದಾರೆ.
2008 ರ ಭಯೋತ್ಪಾದಕ ದಾಳಿಯ ಸಮಯದಲ್ಲಿ ಸಾವನ್ನಪ್ಪಿದ ಮುಂಬೈ ಎಟಿಎಸ್ ಮಾಜಿ ಮುಖ್ಯಸ್ಥ ಹೇಮಂತ್ ಕರ್ಕರೆ ಅವರ ಬಗ್ಗೆ ಠಾಕೂರ್ ನೀಡಿದ ಹೇಳಿಕೆಗಳು ದೊಡ್ಡ ಮಟ್ಟದ ವಿವಾದ ಸೃಷ್ಟಿಸಿದ್ದವು. ತಾವು ನೀಡಿದ ಶಾಪದ ಕಾರಣದಿಂದಲೇ ಕರ್ಕರೆ ಕೊಲ್ಲಲ್ಪಟ್ಟರು ಎಂದು ಪ್ರಗ್ಯಾ ಠಾಕೂರ್ ಹೇಳಿಕೊಂಡಿದ್ದರು.
ಇನ್ನು ಬಿಜೆಪಿಯ ಮೊದಲ ಪಟ್ಟಿಯಲ್ಲಿ ಎರಡು ಬಾರಿ ಸಂಸದ ಮತ್ತು ಮಾಜಿ ಮುಖ್ಯಮಂತ್ರಿ ದಿವಂಗತ ಸಾಹಿಬ್ ಸಿಂಗ್ ವರ್ಮಾ ಅವರ ಪುತ್ರ ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ ಅವರನ್ನು ಕೈಬಿಡಲಾಗಿದೆ. 2020 ರ ದೆಹಲಿ ಚುನಾವಣೆಗೆ ಮೊದಲು, ವರ್ಮಾ ಶಾಹೀನ್ ಬಾಗ್ ಪ್ರತಿಭಟನೆಯ ಸಮಯದಲ್ಲಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದರು ಮತ್ತು ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರತಿಭಟನಾಕಾರರನ್ನು ಒಂದು ಗಂಟೆಯಲ್ಲಿ ತೆರವುಗೊಳಿಸಲಾಗುವುದು ಎಂದು ಹೇಳಿದ್ದರು. ಮುಸ್ಲಿಮರಿಗೆ ಸಾರ್ವಜನಿಕ ಬಹಿಷ್ಕಾರ ಹಾಕಬೇಕೆಂದು 2022 ರಲ್ಲಿ ಅವರು ಕರೆ ನೀಡಿದ್ದರು.
ಹಾಗೆಯೇ ದಕ್ಷಿಣ ದೆಹಲಿ ಸಂಸದ ರಮೇಶ್ ಬಿಧುರಿ ಇತ್ತೀಚೆಗೆ ಸಂಸತ್ತಿನಲ್ಲಿ ದ್ವೇಷದ ಹೇಳಿಕೆಗಳಿಗಾಗಿ ವಿವಾದಕ್ಕೀಡಾಗಿದ್ದರು. ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಲೋಕಸಭೆಯಲ್ಲಿ ನಡೆದ ಚರ್ಚೆಯ ಸಮಯದಲ್ಲಿ, ಅವರು ಅಮ್ರೋಹಾ ಸಂಸದ ಡ್ಯಾನಿಶ್ ಅಲಿ ವಿರುದ್ಧ ಇಸ್ಲಾಂ ದ್ವೇಷಿ ಮಾತುಗಳನ್ನು ಆಡಿದ್ದರು. ಒಟ್ಟಾರೆಯಾಗಿ ಬಿಜೆಪಿ ಈ ಬಾರಿ ದ್ವೇಷ ಭಾಷಣಕ್ಕೆ ಹೆಸರಾದ ತನ್ನ ನಾಯಕರಿಗೆ ಮಣೆ ಹಾಕುತ್ತಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ.
ಇದನ್ನೂ ಓದಿ : ಲೋಕಸಭೆ ಚುನಾವಣೆ: ಬಿಜೆಪಿ ಮೊದಲ ಪಟ್ಟಿಯಲ್ಲಿ 33 ಹಾಲಿ ಸಂಸದರಿಗೆ ಶಾಕ್!