ಗುವಾಹಟಿ(ಅಸ್ಸಾಂ): ಭಯೋತ್ಪಾದಕ ಸಂಘಟನೆ ಐಎಸ್‌ಐಎಸ್‌ಗೆ ಸೇರಲು ಇಚ್ಛೆ ವ್ಯಕ್ತಪಡಿಸಿ ಹೊರಟ ಐಐಟಿ-ಗುವಾಹಟಿಯ ವಿದ್ಯಾರ್ಥಿಯೊಬ್ಬನನ್ನು ಶನಿವಾರ ಸಂಜೆ ಹಜೋ ಎಂಲ್ಲಿ ವಶಕ್ಕೆ ಪಡೆದಿರುವುದಾಗಿ ಅಸ್ಸಾಂ ಪೊಲೀಸರು ತಿಳಿಸಿದ್ದಾರೆ. ತೌಸಿಫ್ ಅಲಿ ಫಾರೂಕ್ ಎಂಬಾತ ಪ್ರಯಾಣಿಸುತ್ತಿರುವ ಮಾಹಿತಿ ಪಡೆದ ಪೊಲೀಸರು, ತಡೆದು ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸ್ ಮಹಾನಿರ್ದೇಶಕ ಜಿ.ಪಿ.ಸಿಂಗ್ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಟಿಎಫ್) ಕಲ್ಯಾಣ್ ಕುಮಾರ್ ಪಾಠಕ್ ಈ ಕುರಿತು ವಿವರವಾದ ಮಾಹಿತಿ ನೀಡಿದ್ದು, ಈ ವಿದ್ಯಾರ್ಥಿ ಮೊದಲು ತಾನು ಐಸಿಸ್ ಸೇರುವ ಹಾದಿಯಲ್ಲಿರುವುದಾಗಿ ಲಿಂಕ್ಡ್‌ಇನ್ ಪುಟದಲ್ಲಿ ಪೋಸ್ಟ್ ಹಾಕಿದ್ದ. ಇದನ್ನು ಗಮನಿಸಿದ ನಾವು ಮೊದಲು ಉಲ್ಲೇಖಿಸಿರುವ ಹೇಳಿಕೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಿ ತನಿಖೆ ಆರಂಭಿಸಿದೆವು. ತಕ್ಷಣವೇ ಐಐಟಿ-ಗುವಾಹಟಿ ಸಂಸ್ಥೆಯ ಅಧಿಕಾರಿಗಳನ್ನು ಸಂಪರ್ಕಿಸಿದೆವು. ಆಗ ವಿದ್ಯಾರ್ಥಿ ನಾಪತ್ತೆಯಾಗಿರುವುದು ಬೆಳಕಿಗೆ ಬಂತು. ಆತನ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿರುವುದು ತಿಳಿದು ಬಂತು ಎಂದರು.
ಆರೋಪಿ ವಿದ್ಯಾರ್ಥಿ ನಾಲ್ಕನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ದೆಹಲಿಯ ಓಖ್ಲಾ ನಿವಾಸಿ ಎಂಬ ಮಾಹಿತಿ ಪಡೆದು ಕೂಡಲೇ ಕಾರ್ಯಪ್ರವೃತ್ತರಾದೆವು. ಕಾರ್ಯಾಚರಣೆಯ ವೇಳೆ ಗುವಾಹಟಿಯಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ಹಜೋ ಪ್ರದೇಶದಿಂದ ಶನಿವಾರ ಸಂಜೆ ಸ್ಥಳೀಯರ ನೆರವಿನಿಂದ ಆತನನ್ನು ವಶಕ್ಕೆ ಪಡೆಯಲಾಯಿತು. ಪ್ರಾಥಮಿಕ ವಿಚಾರಣೆಯ ನಂತರ ಎಸ್‌ಟಿಎಫ್ ಕಚೇರಿಗೆ ಕರೆತರಲಾಗಿದೆ ಎಂದು ಅವರು ತಿಳಿಸಿದರು.
ವಿದ್ಯಾರ್ಥಿಯ ಹಾಸ್ಟೆಲ್ ಕೊಠಡಿಯನ್ನು ಪರಿಶೀಲಿಸಿದಾಗ ಉಗ್ರ ಸಂಘಟನೆಯನ್ನು ಹೋಲುವ ಕಪ್ಪು ಬಾವುಟ ಪತ್ತೆಯಾಗಿದೆ. ಇದನ್ನು ವಿಶೇಷ ಏಜೆನ್ಸಿಗಳಿಗೆ ಪರಿಶೀಲನೆಗಾಗಿ ಕಳುಹಿಸಲಾಗಿದೆ. ಸದ್ಯ ವಿದ್ಯಾರ್ಥಿಗೆ ಸಂಬಂಧಿಸಿದ ಇ-ಮೇಲ್, ವಶಪಡಿಸಿಕೊಂಡ ವಸ್ತುಗಳ ಮೂಲಕ ತನಿಖೆ ನಡೆಸುತ್ತಿದ್ದೇವೆ. ಆರೋಪಿ ಕೆಲವು ವಿವರಗಳನ್ನು ನೀಡಿದ್ದಾನೆ. ಸದ್ಯಕ್ಕೆ ಪ್ರಕರಣದ ಕುರಿತು ಹೆಚ್ಚೇನೂ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದರು.