ಮುಂಬೈ: ಶೈಕ್ಷಣಿಕ ಒತ್ತಡ ತಾಳಲಾರದೇ ಹಿರಿಯ IAS ಅಧಿಕಾರಿಯೊಬ್ಬರ ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ಮುಂಬೈನಲ್ಲಿ ಇಂದು ನಡೆದಿದೆ. ಲಿಪಿ ರಸ್ತೋಗಿ (26) ಸಾವನ್ನಪ್ಪಿದವರು. ಇವರು ರಾಜ್ಯ ಸೆಕ್ರೆಟರಿಯಟ್ ಎದುರಿಗಿನ ಕಟ್ಟಡದ 10ನೇ ಮಹಡಿಯಿಂದ ಜಿಗಿದಿದ್ದಾರೆ. ತಕ್ಷಣ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆಯಿತಾದರೂ ಆಕೆ ಮಾರ್ಗಮಧ್ಯೆಯೇ ಸಾವನ್ನಪ್ಪಿದ್ದಾರೆ.
ಲಿಪಿ ರಸ್ತೋಗಿ ಅವರ ತಂದೆ ಐಎಎಸ್ ಅಧಿಕಾರಿ ವಿಕಾಸ್ ಸಿ.ರಸ್ತೋಗಿ. ಇವರು ಉನ್ನತ ಮತ್ತು ತಾಂತ್ರಿಕ ಶಿಕ್ಷಣ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಾಯಿ ರಾಧಿಕಾ ವಿ.ರಸ್ತೋಗಿ ಗೃಹ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಲಿಪಿ ಅವರು ಹರಿಯಾಣದ ಸೋನ್ಪಾತ್ನಲ್ಲಿ ಕಾನೂನು ಪದವಿ ಅಭ್ಯಾಸ ಮಾಡುತ್ತಿದ್ದರು. ತೀವ್ರ ಶೈಕ್ಷಣಿಕ ಒತ್ತಡದಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಘಟನಾ ಸ್ಥಳದಲ್ಲಿ ಡೆತ್ ನೋಟ್ ಲಭ್ಯವಾಗಿದೆ. ಒತ್ತಡದಿಂದಾಗಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಲು ಸಾಧ್ಯವಾಗಲಿಲ್ಲ ಎಂದು ಲಿಪಿ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಪೊಲೀಸರು 'ಅಸಹಜ ಸಾವು' ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ. ಗೋಕುಲ್ದಾಸ್ ತೇಜ್ಪಾಲ್ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಆತ್ಮಹತ್ಯೆ ಪರಿಹಾರವಲ್ಲ: ಆತ್ಮಹತ್ಯೆಯಂತಹ ಯೋಚನೆ ಮಾಡಲೇಬೇಡಿ. ಬದುಕಿನಲ್ಲಿ ಎದುರಾಗುವ ಕಟು ಸವಾಲುಗಳನ್ನು ಎದುರಿಸಲು ಸಾಧ್ಯವಾಗದೇ ಇದ್ದಲ್ಲಿ ಭಾವನಾತ್ಮಕ ಬೆಂಬಲ ಬೇಕೆಂದೆನಿಸಿದರೆ ಆರೋಗ್ಯ ಇಲಾಖೆಯ ಟೆಲಿ ಮಾನಸ್ ಟೋಲ್ ಫ್ರಿ ಸಂಖ್ಯೆ 14416 ಅಥವಾ 1-800-891-4416 ಕರೆ ಮಾಡಿ. ಇಲ್ಲಿನ ಸಿಬ್ಬಂದಿ ನಿಮ್ಮದೇ ಭಾಷೆಯಲ್ಲಿ ವ್ಯವಹರಿಸುತ್ತಾರೆ.
ಇದನ್ನೂ ಓದಿ: ಮಾನಸಿಕ ಆರೋಗ್ಯ ಸವಾಲುಗಳಿಗೆ ಸಂಜೀವಿನಿ Tele MANASಗೆ ಪ್ರತಿನಿತ್ಯ 3,500 ಕರೆ