ಶ್ರೀನಗರ: ಅತ್ಯಾಚಾರ ಮತ್ತು ಕಿರುಕುಳದ ಆರೋಪಗಳನ್ನು ಎದುರಿಸುತ್ತಿರುವ ಭಾರತೀಯ ವಾಯುಪಡೆಯ (ಐಎಎಫ್) ವಿಂಗ್ ಕಮಾಂಡರ್‌ಗೆ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ. ನ್ಯಾಯಮೂರ್ತಿ ರಜನೇಶ್ ಓಸ್ವಾಲ್ ನೇತೃತ್ವದ ಹೈಕೋರ್ಟ್‌ನ ಏಕ ಪೀಠ ಈ ಆದೇಶ ನೀಡಿದೆ.
ಶ್ರೀನಗರದ ಏರ್ ಫೋರ್ಸ್ ಸ್ಟೇಷನ್‌ನಲ್ಲಿ ವಿಂಗ್ ಕಮಾಂಡರ್ ಆಗಿರುವ ಪ್ರಮುಖ ಆರೋಪಿ ಸೇವೆ ಸಲ್ಲಿಸುತ್ತಿದ್ದು, ಆತನ ಬಂಧನವೂ ಅವರ ಖ್ಯಾತಿ ಮತ್ತು ಸೇವೆಗೆ ಧಕ್ಕೆ ಉಂಟು ಮಾಡಲಿದೆ ಎಂದು ತಿಳಿಸಿದ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಆದಾಗ್ಯೂ ಕೋರ್ಟ್ ಕೆಲವು ಷರತ್ತುಗಳನ್ನು ಆರೋಪಿ ಅಧಿಕಾರಿಗೆ ವಿಧಿಸಿದೆ.
ವಿಂಗ್ ಕಮಾಂಡರ್ 50 ಸಾವಿರ ಮೊತ್ತದ ಎರಡು ಶ್ಯೂರಿಟಿಗಳನ್ನು ಮತ್ತು ಅದೇ ಮೊತ್ತದ ವೈಯಕ್ತಿಕ ಬಾಂಡ್ ಗಳನ್ನು ನೀಡಬೇಕು ಎಂಬ ಷರತ್ತಿನ ಮೇಲೆ ಜಾಮೀನು ನೀಡಲಾಗಿದೆ. ಜೊತೆಗೆ, ಕಮಾಂಡಿಂಗ್ ಅಧಿಕಾರಿಯ ಅನುಮತಿಯಿಲ್ಲದೆ ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶ ತೊರೆಯುವದಿಲ್ಲ. ಯಾವುದೇ ಪ್ರಾಸಿಕ್ಯೂಷನ್ ಸಾಕ್ಷಿಗಳನ್ನು ಸಂಪರ್ಕಿಸಬಾರದು ಎಂಬ ಷರತ್ತನ್ನು ವಿಧಿಸಲಾಗಿದೆ.
ಪ್ರಾಸಿಕ್ಯೂಷನ್ ತನಿಖೆಯನ್ನು ಮುಂದುವರೆಸಲಿದೆ. ನ್ಯಾಯಾಲಯದ ಅನುಮತಿಯಿಲ್ಲದೆ ಚಾರ್ಜ್ ಶೀಟ್ ಸಲ್ಲಿಸುವುದನ್ನು ನಿಷೇಧಿಸಿದೆ ಎಂದಿರುವ ಹೈಕೋರ್ಟ್, ಮುಂದಿನ ವಿಚಾರಣೆಯನ್ನು 2024ರ ಅಕ್ಟೋಬರ್ 11ಕ್ಕೆ ನಿಗದಿಪಡಿಸಲಾಗಿದೆ.
ಬುಡ್ಗಾಮ್ ಪೊಲೀಸ್ ಠಾಣೆಯಲ್ಲಿ ವಿಂಗ್ ಕಮಾಂಡರ್ ವಿರುದ್ಧ ಮಹಿಳಾ ಫ್ಲೈಯಿಂಗ್ ಆಫೀಸರ್ ಅತ್ಯಾಚಾರ, ಮಾನಸಿಕ ಕಿರುಕುಳ, ಹಿಂಬಾಲಿಸುವಿಕೆ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದರು. ಎಫ್ಐಆರ್ನಲ್ಲಿ 2023ರ ಡಿಸೆಂಬರ್ 31ರಂದು ಆಫೀಸರ್ ಮೆಸ್ನಲ್ಲಿ ಹೊಸ ವರ್ಷದ ಪಾರ್ಟಿ ವೇಳೆ ವಿಂಗ್ ಕಮಾಂಡರ್ ಹಲ್ಲೆ ಮಾಡಿದ್ದರು ಎಂದು ಕೂಡ ಆರೋಪಿಸಲಾಗಿದೆ. ಉಡುಗೊರೆ ನೀಡುವುದಾಗಿ ನೆಪ ಮಾಡಿಕೊಂಡು ನನ್ನನ್ನು ಅವರ ಕೋಣೆಗೆ ಆಹ್ವಾನಿಸಿದ್ದರು. ಈ ವೇಳೆ ವಿರೋಧದ ನಡುವೆಯೂ ಕಿರುಕುಳ ನೀಡುವ ಪ್ರಯತ್ನ ನಡೆಸಿದರು.
ಘಟನೆಯಿಂದ ಆಘಾತಕ್ಕೆ ಒಳಗಾಗಿದ್ದು, ಭಯದಿಂದಾಗಿ ಈ ಕೃತ್ಯದ ಬಗ್ಗೆ ತಡವಾಗಿ ದೂರು ದಾಖಲಿಸಲಾಯಿತು. ಆಂತರಿಕ ಸಮಿತಿ ಕೂಡ ಆರೋಪಿ ಹೇಳಿಕೆ ದಾಖಲಿಕರಣ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಿ ತನಿಖೆಯನ್ನು ತಪ್ಪಾಗಿ ನಿರ್ವಹಿಸಿದೆ ಎಂದು ಕೂಡ ಮಹಿಳೆ ಅರೋಪಿಸಿದ್ದಾರೆ. ವೈದ್ಯಕೀಯ ಪರೀಕ್ಷಾ ವರದಿ ವಿಳಂಬಗಳು ಮತ್ತು ಮಧ್ಯಂತರ ಪರಿಹಾರ ಹಾಗೂ ವರ್ಗಾವಣೆ ಬದಲಾವಣೆಯಲ್ಲೂ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ ಎಂದು ಟೀಕಿಸಿದ್ದಾರೆ.
ಮಾನಸಿಕ ಕಿರುಕುಳ, ಸಾಮಾಜಿಕ ಬಹಿಷ್ಕಾರ, ಸಂವಹನದ ಕುರಿತು ಅನಧಿಕೃತ ನಿರ್ವಹಣೆ ನಡೆಸಿದ್ದು, ಇದು ನನ್ನ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದೆ ಎಂದು ಮಹಿಳಾ ಅಧಿಕಾರಿ ಆರೋಪಿಸಿದ್ದಾರೆ. ಈ ಕಿರುಕುಳ ಪ್ರಕರಣದಲ್ಲಿ ಅನೇಕ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದು, ಪೊಲೀಸರು ತಕ್ಷಣಕ್ಕೆ ಕ್ರಮಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿ, ಸೆಪ್ಟೆಂಬರ್ 8ರಂದು ದೂರು ದಾಖಲಿಸಿದ್ದರು.
ಇದನ್ನೂ ಓದಿ: ಬಾಲಕಿ ಮೇಲೆ ಮೂವರು ಯುವಕರಿಂದ ಲೈಂಗಿಕ ದೌರ್ಜನ್ಯ: ಕಾಲುವೆಗೆ ತಳ್ಳಿ ಪರಾರಿಯಾದ ದುಷ್ಕರ್ಮಿಗಳು