ಕೋಟಾ(ರಾಜಸ್ಥಾನ): ಕೋಚಿಂಗ್ ಹಬ್ ಎಂದೇ ಕರೆಯಲ್ಪಡುವ ಕೋಟಾದಲ್ಲಿ ಈ ಬಾರಿ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಗಣನೀಯ ಪ್ರಮಾಣದಲ್ಲಿ ಕುಂಠಿತವಾಗಿದೆ. ಪರಿಣಾಮ ನೂರಾರು ಸಂಖ್ಯೆಯ ಹಾಸ್ಟೆಲ್‌ಗಳಿಗೆ ಬೀಗ ಬಿದ್ದಿದೆ.
ಕಳೆದ ವರ್ಷ ಕೋಟಾದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆಯ ಬಿಸಿ ಈಗ ತಟ್ಟುತ್ತಿದ್ದು ಈ ಬಾರಿ ಕೇವಲ ಶೇ 40ರಷ್ಟು ಕೋಚಿಂಗ್‌ಗೆ ವಿದ್ಯಾರ್ಥಿಗಳ ದಾಖಲಾತಿಯಾಗಿದೆ. ಹೀಗಾಗಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಹಾಸ್ಟೆಲ್‌ಗಳು ಈಗ ಖಾಲಿ ಬಿದ್ದಿವೆ. ಇದೊಂದೇ ಕಾರಣವಲ್ಲದೇ, ಕೋಟಾ ಕೋಚಿಂಗ್ ಸಂಸ್ಥೆಗಳ ಅನೇಕ ಬ್ರಾಂಚ್ಗಳನ್ನು ದೇಶದಾದ್ಯಂತ ಇತರ ಕೋಚಿಂಗ್ ಸಂಸ್ಥೆಗಳೊಂದಿಗೆ ಸ್ಪರ್ಧಿಸಲು ತೆರೆದಿವೆ. ಈ ಕಾರಣಗಳಿಂದ ಕೋಟಾಕ್ಕೆ ಕೋಚಿಂಗ್‌ಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ.
ಎಲ್ಲ ಕೋಚಿಂಗ್ ಸಂಸ್ಥೆಗಳನ್ನು ಒಳಗೊಂಡಂತೆ, ಕೇವಲ 1.2 ಲಕ್ಷ ವಿದ್ಯಾರ್ಥಿಗಳು ಈ ಬಾರಿ ಕೋಟಾಕ್ಕೆ ಕೋಚಿಂಗ್‌ಗಾಗಿ ಬಂದಿದ್ದಾರೆ. ಆದರೆ ಕಳೆದ ವರ್ಷ 2 ಲಕ್ಷಕ್ಕೂ ಹೆಚ್ಚು ದಾಖಲಾತಿ ಇತ್ತು. ಹೀಗಾಗಿ ಕೋಟಾದ ಕೋಚಿಂಗ್ ಏರಿಯಾಗಳಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಹಾಸ್ಟೆಲ್‌ಗಳು ವಿದ್ಯಾರ್ಥಿಗಳಿಲ್ಲದೇ ಬರಿದಾಗಿದೆ. ಕೋಟಿಗಟ್ಟಲೇ ಹಣ ಹೂಡಿದ ಹಾಸ್ಟೆಲ್ ಮಾಲೀಕರು ಆತಂಕಕ್ಕೆ ಒಳಗಾಗಿದ್ದಾರೆ. ಅನೇಕ ಹಾಸ್ಟೆಲ್ ಮಾಲೀಕರು ತಮ್ಮ ಹಾಸ್ಟೆಲ್‌ಗಳಿಗೆ ಬೀಗ ಹಾಕಿ, ಸಿಬ್ಬಂದಿಯನ್ನು ವಜಾ ಮಾಡಿದ್ದಾರೆ.
ಇದರಿಂದ ಹಾಸ್ಟೆಲ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಜನರೂ ಕೂಡ ನಿರುದ್ಯೋಗಿಗಳಾಗಿದ್ದಾರೆ. ಇನ್ನು ಹಲವು ಕಡೆ ಹಾಸ್ಟೆಲ್‌ನ ರೂಂ ಬಾಡಿಗೆ ಸಾಕಷ್ಟು ಇಳಿಕೆಯಾಗಿದೆ. ವಿದ್ಯಾರ್ಥಿಗಳು ಇಲ್ಲದ ಹಿನ್ನೆಲೆ ಹಾಸ್ಟೆಲ್ ಮಾಲೀಕರು ಅತಿ ಕಡಿಮೆಗೆ ಬಾಡಿಗೆಗೆ ಕೊಠಡಿ ನೀಡಲು ಮುಂದಾಗಿದ್ದಾರೆ. ಎಲ್ಲೆಡೆ ಕಡಿಮೆ ದರದಲ್ಲಿ ಹಾಸ್ಟೆಲ್ ಕೊಠಡಿ ನೀಡುತ್ತಿರುವಂತೆ ಬೋರ್ಡ್ ಹಾಕಲಾಗಿದೆ. ಈ ಮೊದಲು ಹಾಸ್ಟೆಲ್ ಕೊಠಡಿಗಳಿಗೆ 14 ರಿಂದ 15 ಸಾವಿರ ರೂಪಾಯಿ ಬಾಡಿಗೆ ಇತ್ತು. ಆದರೆ ಈಗ 3,500 ರೂ.ನಿಂದ 2,500 ರೂ.ವರೆಗೆ ಲಭ್ಯವಾಗುತ್ತಿವೆ. ಇವುಗಳಲ್ಲಿ ಹಾಸ್ಟೆಲ್ ಸೌಕರ್ಯಗಳನ್ನು ಮಾತ್ರ ಒದಗಿಸಲಾಗುತ್ತಿದೆ. ಆಹಾರ ಮತ್ತಿತರ ವೆಚ್ಚಗಳನ್ನು ಪ್ರತ್ಯೇಕವಾಗಿ ಸೇರಿಸಲಾಗುತ್ತಿದೆ.
74 ರೂಂಗಳಿರುವ ಕೊಠಡಿಗಳಲ್ಲಿ ಕೇವಲ 15 ರಿಂದ 16 ವಿದ್ಯಾರ್ಥಿಗಳು ಮಾತ್ರ ಸೇರಿದ್ದಾರೆ. ಈ ಬಗ್ಗೆ ಹಾಸ್ಟೆಲ್ವೊಂದರ ಮಾಲೀಕ ರಾಜನಾರಾಯಣ ಗರ್ಗ್ "ಜಿಲ್ಲಾಡಳಿತವು ಈಗಾಗಲೇ ಪಿಜಿ ಮತ್ತು ಹಾಸ್ಟೆಲ್‌ಗಳಲ್ಲಿ ಆತ್ಮಹತ್ಯೆ ವಿರೋಧಿ ರಾಡ್‌ಗಳನ್ನು ಅಳವಡಿಸುತ್ತಿದೆ. ಆದರೆ, ಈಗ ವಿದ್ಯಾರ್ಥಿಗಳೇ ಇಲ್ಲದಿದ್ದರೇ ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿದ ಹಾಸ್ಟೆಲ್ ನಿರ್ವಾಹಕರಿಗೆ ಕಷ್ಟವಾಗಲಿದೆ. ಸಾಲ ಮಾಡಿ ಕಟ್ಟಡ ಕಟ್ಟಿರುವ ಅನೇಕ ಹಾಸ್ಟೆಲ್ ನಿರ್ವಾಹಕರು ಮಾಸಿಕ ಸಾವಿರದಿಂದ 1.5 ಲಕ್ಷ ರೂಪಾಯಿಗಳವರೆಗೆ ಇಎಂಐಗಳನ್ನು ಹೊಂದಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.