ನವದೆಹಲಿ: ಮಣಿಪುರ ಹಿಂಸಾಚಾರದ ಕುರಿತು ಭಾನುವಾರ ಮೇಲ್ವಿಚಾರಣೆ ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಿಂಸಾಚಾರ ತಡೆಗಟ್ಟಿ ಈಶಾನ್ಯ ರಾಜ್ಯದಲ್ಲಿ ಶಾಂತಿ ಕಾಪಾಡಲು ಪರಿಣಾಮಕಾರಿ ಕ್ರಮಕ್ಕೆ ಮುಂದಾಗುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಕುರಿತು ಗೃಹ ಸಚಿವಾಲಯ ಮತ್ತು ಭದ್ರತಾ ಪಡೆಗಳ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಅವರು ಸಭೆ ನಡೆಸಿದರು.
ಇಂದೂ ಕೂಡ ಅಮಿತ್ ಶಾ ಸಭೆ: ಇಂದೂ ಕೂಡ ಅಮಿತ್ ಶಾ ಅಧಿಕಾರಿಗಳೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸಲಿದ್ದಾರೆ. ಇಂಫಾಲದಿಂದ ವರ್ಚುಯಲ್ ಆಗಿ ಮಣಿಪುರ ಸರ್ಕಾರದ ಮುಖ್ಯ ಭದ್ರತಾ ಸಲಹೆಗಾರ ಕುಲದೀಪ್ ಸಿಂಗ್, ಮುಖ್ಯ ಕಾರ್ಯದರ್ಶಿ ವಿನೀತ್ ಜೋಶಿ ಮತ್ತು ಪೊಲೀಸ್ ಮಹಾನಿರ್ದೇಶಕ ರಾಜೀವ್ ಸಿಂಗ್ ಸಭೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.
ಮಣಿಪುರದಲ್ಲಿ ಶಾಂತಿ ಸುವ್ಯವಸ್ಥೆ ಪುನರ್ಸ್ಥಾಪನೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅವರು ಶನಿವಾರ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಮಣಿಪುರದಲ್ಲಿ ಕಳೆದ ಕೆಲವು ದಿನಗಳಿಂದ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಎರಡು ಸಮುದಾಯಗಳ ನಡುವೆ ಉಂಟಾದ ಸಂಘರ್ಷ ಹಿಂಸಾಚಾರಕ್ಕೆ ತಿರುಗಿದ್ದು, ಸರಣಿ ಕೊಲೆ ಪ್ರಕರಣಗಳು ವರದಿಯಾಗಿವೆ.
ಶನಿವಾರ ಮತ್ತು ಭಾನುವಾರ ನಡೆದ ಭಾರೀ ಹಿಂಸಾಚಾರದಲ್ಲಿ ಉದ್ರಿಕ್ತರ ಗುಂಪು ಸಚಿವರು, ಶಾಸಕರು ಮತ್ತು ರಾಜಕೀಯ ಮುಖಂಡರ ಮನೆಗಳ ಮೇಲೆ ದಾಳಿ ನಡೆಸಿದೆ. ಪರಿಸ್ಥಿತಿ ನಿಯಂತ್ರಿಸಲು ಅಸ್ಸಾಂ ರೈಫಲ್ಸ್, ಬಿಎಸ್‌ಎಫ್ ಮತ್ತು ಕಮಾಂಡೋಗಳು ಸೇರಿದಂತೆ ರಾಜ್ಯ ಪಡೆಗಳು ಆಶ್ರುವಾಯು ಮತ್ತು ರಬ್ಬರ್ ಬುಲೆಟ್ಗಳನ್ನು ಪ್ರಯೋಗಿಸಿದ್ದು, 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.(ಐಎಎನ್ಎಸ್)
ಇದನ್ನೂ ಓದಿ: ಮಹಾರಾಷ್ಟ್ರ ಚುನಾವಣೆ ರ್ಯಾಲಿ ರದ್ದುಗೊಳಿಸಿ ದೆಹಲಿಗೆ ವಾಪಸ್ ತೆರಳಿದ ಕೇಂದ್ರ ಗೃಹಸಚಿವ ಅಮಿತ್ ಶಾ