ಶಿಮ್ಲಾ(ಹಿಮಾಚಲ ಪ್ರದೇಶ) : ಹಿಮಾಚಲ ಪ್ರದೇಶವು ಋತುವಿನ ಮೊದಲ ಹಿಮಪಾತ ಅನುಭವಿಸಿದೆ. ಶಿಮ್ಲಾ, ಕಿನ್ನೌರ್, ಕಂಗ್ರಾ, ಲಾಹೌಲ್, ಸ್ಪಿಟಿ, ಕುಲು ಮತ್ತು ಚಂಬಾದಲ್ಲಿ ಭಾರೀ ಹಿಮಪಾತವಾಗಿದೆ. ಮನಾಲಿಯ ರೋಹ್ಟಾಂಗ್ ಪಾಸ್ ಬಳಿಯ ಅಟಾರಿ-ಲೇಹ್ ರಾಷ್ಟ್ರೀಯ ಹೆದ್ದಾರಿ ಸೇರಿ ರಾಜ್ಯದ 87 ರಸ್ತೆಗಳು ಬಂದ್ ಆಗಿವೆ.
ಶಿಮ್ಲಾ ಸಮೀಪದ ಪ್ರವಾಸಿ ತಾಣಗಳಾದ ಕುಫ್ರಿ, ಫಾಗು, ಚಾನ್ಸೆಲ್, ನರ್ಕಂಡ ಮತ್ತು ಚುರ್ಧಾರ್ ಶ್ರೇಣಿಗಳು ಸೇರಿದಂತೆ ಎತ್ತರದ ಪರ್ವತ ಪ್ರದೇಶಗಳಲ್ಲಿ ಭಾನುವಾರ ಸಂಜೆಯಿಂದಲೇ ಹಿಮಪಾತ ಶುರುವಾಗಿದೆ. ಕಳೆದ ಮೂರು ತಿಂಗಳಿನಿಂದ ಭಣಗುಡುತ್ತಿದ್ದ ಈ ಪ್ರದೇಶಗಳಿಗೆ ಮಂಜುಗಡ್ಡೆ ಹಾಸಿನಿಂದಾಗಿ ಹೊಸ ಮೆರಗು ಬಂದಿದೆ. ಸಹಜವಾಗಿಯೇ ಇದು ಪ್ರವಾಸಿಗರನ್ನು ಸೆಳೆಯಲಿದೆ. ಜೊತೆಗೆ ರೈತರು, ಸೇಬು ಬೆಳೆಗಾರರು ಮತ್ತು ಹೋಟೆಲ್ ಉದ್ಯಮಿಗಳಿಗೆ ಇದು ಸುಗ್ಗಿ ತರಲಿದೆ.
ಮಂಜುಗಡ್ಡೆಯಿಂದಾಗಿ ರಸ್ತೆಗಳು ಬಂದ್: ಹಿಮಗಡ್ಡೆಯಿಂದಾಗಿ ಶಿಮ್ಲಾದಲ್ಲಿ ಅತೀ ಹೆಚ್ಚು ಅಂದರೆ 58 ರಸ್ತೆಗಳು ಮುಚ್ಚಿವೆ. ಕಿನ್ನೌರ್‌ನಲ್ಲಿ 17, ಕಂಗ್ರಾದಲ್ಲಿ 6, ಲಾಹೌಲ್ ಮತ್ತು ಸ್ಪಿತಿಯಲ್ಲಿ ಎರಡು, ಕುಲು ಮತ್ತು ಚಂಬಾ ಜಿಲ್ಲೆಗಳಲ್ಲಿ ತಲಾ ಒಂದು ರಸ್ತೆ ಮುಚ್ಚಲ್ಪಟ್ಟಿವೆ. 457 ವಿದ್ಯುತ್ಪರಿವರ್ತಕಗಳು ನಿಷ್ಕ್ರಿಯವಾದ್ದರಿಂದ ಹಲವು ಭಾಗಗಳಲ್ಲಿ ಕತ್ತಲೆ ಆವರಿಸಿದೆ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (SEOC) ತಿಳಿಸಿದೆ.
ಭಾನುವಾರ ಸಂಜೆಯಿಂದ ಲಾಹೌಲ್‌ನಲ್ಲಿ ಹಿಮಪಾತ ಉಂಟಾಗಿ 490 ವಾಹನಗಳಲ್ಲಿ ಸಿಲುಕಿಕೊಂಡಿದ್ದ ಸುಮಾರು 800 ಜನರನ್ನು ರಕ್ಷಿಸಲಾಗಿದೆ. ಹಿಮ ಮತ್ತು ಜಾರು ರಸ್ತೆಗಳಿಂದಾಗಿ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಪ್ರತಿಕೂಲ ಹವಾಮಾನದ ಹೊರತಾಗಿಯೂ, ಪರೀಕ್ಷೆಗಳಿಂದಾಗಿ ಶಿಮ್ಲಾದ ಶಾಲೆಗಳು ತೆರೆದಿವೆ. ಹಿಮಪಾತದಿಂದಾಗಿ ತಾಪಮಾನವೂ ಇಳಿದಿದೆ. ಎತ್ತರದ ಪ್ರದೇಶಗಳು ಕೊರೆಯುವ ಚಳಿ ಅನುಭವಿಸಿವೆ. ಕನಿಷ್ಠ ತಾಪಮಾನವು 12 ರಿಂದ 18 ಡಿಗ್ರಿಗಳಷ್ಟಿದೆ. ಟಬೊದಲ್ಲಿ ಕನಿಷ್ಠ -12.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಎಲ್ಲೆಲ್ಲಿ ಎಷ್ಟು ಹಿಮಪಾತ?: ಕೊಕ್ಸರ್‌ನಲ್ಲಿ 6.7 ಸೆಂ.ಮೀ ಹಿಮ ದಾಖಲಾಗಿದ್ದರೆ, ಖದ್ರಾಲಾ 5 ಸೆಂ.ಮೀ., ಸಾಂಗ್ಲಾ 3.6 ಸೆಂ.ಮೀ., ಕೀಲಾಂಗ್ 3 ಸೆಂ.ಮೀ., ನಿಚಾರ್ ಮತ್ತು ಶಿಮ್ಲಾದಲ್ಲಿ 2.5 ಸೆಂ.ಮೀ. ಹಿಮ ಬಿದ್ದಿದೆ. ಇಳಿಜಾರು ಬೆಟ್ಟ ಪ್ರದೇಶಗಳಾದ ಕಂದಘಾಟ್, ಕಸೌಲಿ, ಜುಬ್ಬರಹಟ್ಟಿ ಮತ್ತು ಮಂಡಿಯಲ್ಲಿ ಮಳೆಯಾಗಿದೆ. ಮಳೆಗಾಲದ ಬಳಿಕ ರಾಜ್ಯದ ಹಲವು ಪ್ರದೇಶಗಳು ಮಳೆ ಕೊರತೆ ಅನುಭವಿಸಿವೆ.
ಇದನ್ನೂ ಓದಿ: ಕೋಚಿಂಗ್ ಸೆಂಟರ್ ಕೋಟಾ ಖಾಲಿ ಖಾಲಿ: ಫಜೀತಿ ತಂದ ವಿದ್ಯಾರ್ಥಿಗಳ 'ಆತ್ಮಹತ್ಯೆ'