ರಾಂಚಿ (ಜಾರ್ಖಂಡ್): ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರನ್ನು ಒಂದು ದಿನದ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ರಾಂಚಿ ಕೋರ್ಟ್ ಗುರುವಾರ ಆದೇಶಿಸಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಬುಧವಾರ ಹೇಮಂತ್ ಸೊರೆನ್ ಅವರನ್ನು ವಿಚಾರಣೆಗೆ ಒಳಪಡಿಸಿತ್ತು. ಸುಮಾರು ಎಂಟು ಗಂಟೆಗಳ ಕಾಲ ವಿಚಾರಣೆ ನಡೆಸಿದ ರಾತ್ರಿ 8.30ರ ಸುಮಾರಿಗೆ ಅವರನ್ನು ಬಂಧಿಸಿತ್ತು. ಬಂಧನ ಖಚಿತವಾಗುತ್ತಿದ್ದಂತೆ ಇಡಿ ಅಧಿಕಾರಿಗಳ ಸಮ್ಮುಖದಲ್ಲಿ ಸೊರೆನ್ ತಮ್ಮ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು.
ರಾತ್ರಿ ಬಂಧನದ ಬಳಿಕ ರಾಂಚಿಯ ಏರ್‌ಪೋರ್ಟ್ ರಸ್ತೆಯಲ್ಲಿರುವ ಇಡಿ ಕಚೇರಿಗೆ ಸೊರೆನ್ ಅವರನ್ನು ಕರೆದೊಯ್ಯಲಾಗಿತ್ತು. ಇಡೀ ರಾತ್ರಿ ಅವರು ಕಚೇರಿಯ ಅತಿಥಿಗೃಹದಲ್ಲಿ ಕಳೆದಿದ್ದರು. ಇಂದು ಮಧ್ಯಾಹ್ನ 3.30ರ ಸುಮಾರಿಗೆ ಅವರನ್ನು ವಿಶೇಷ ಅಕ್ರಮ ಹಣ ವರ್ಗಾವಣೆ ತಡೆ (ಪಿಎಂಎಲ್‌ಎ) ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಈ ವೇಳೆ, ನ್ಯಾಯಾಲಯದಲ್ಲಿ ಇಡಿ ಅಧಿಕಾರಿಗಳು ಸೊರೆನ್ ಅವರನ್ನು 10 ದಿನಗಳ ರಿಮಾಂಡ್ಗೆ ಒಪ್ಪಿಸುವಂತೆ ಕೋರಿದರು.
ರಾಂಚಿ ಭೂ ಹಗರಣದ ಹೆಚ್ಚಿನ ತನಿಖೆಗಾಗಿ ಸೊರೆನ್ ಅವರನ್ನು ಹಲವು ಅಂಶಗಳ ಬಗ್ಗೆ ವಿಚಾರಣೆ ನಡೆಸುವುದು ಅಗತ್ಯ ಎಂದು ಇಡಿ ಪರ ವಕೀಲರು ಹೇಳಿದರು. ಮತ್ತೊಂದೆಡೆ, ಇಡಿ ಬಂಧನದ ಬೇಡಿಕೆಯನ್ನು ಸೊರೆನ್ ಪರ ವಕೀಲರು ವಿರೋಧಿಸಿದರು. ಅಲ್ಲದೇ, ಇಡಿ ಕ್ರಮವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ರಜೆ ಅರ್ಜಿ (ಎಸ್‌ಎಲ್‌ಪಿ) ಸಲ್ಲಿಸಲಾಗಿದ್ದು, ಅದರ ವಿಚಾರಣೆಯು ಶುಕ್ರವಾರ ಬರಲಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಆಗ ಎರಡೂ ಕಡೆಯವರ ವಾದವನ್ನು ಆಲಿಸಿದ ನ್ಯಾಯಾಲಯವು ತನ್ನ ತೀರ್ಪು ಶುಕ್ರವಾರಕ್ಕೆ ಕಾಯ್ದಿರಿಸಿದೆ. ಅಲ್ಲಿಯವರೆಗೆ ಸೊರೆನ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲು ಆದೇಶಿಸಿತು. ನ್ಯಾಯಾಲಯದ ಈ ಆದೇಶದ ನಂತರ ಮಾಜಿ ಸಿಎಂ ಅವರನ್ನು ರಾಂಚಿಯ ಬಿರ್ಸಾ ಮುಂಡಾ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿದೆ.
ನಾಳೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ: ಇದರ ನಡುವೆ ತಮ್ಮ ಬಂಧನವನ್ನು ಪ್ರಶ್ನಿಸಿ ಸೊರೆನ್ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ತುರ್ತಾಗಿ ಪಟ್ಟಿ ಮಾಡಲು ಸರ್ವೋಚ್ಛ ನ್ಯಾಯಾಲಯ ಕೂಡ ಗುರುವಾರ ಒಪ್ಪಿಕೊಂಡಿದೆ. ಸಿಜೆಐ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯ ಪೀಠವು, ಸೊರೆನ್ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ಮಂಡಿಸಿದ ಮನವಿಗೆ ಒಪ್ಪಿ ಶುಕ್ರವಾರ ವಿಚಾರಣೆ ಮಾಡಲು ಸಮ್ಮತಿಸಿತು.
ಅರ್ಜಿಯ ತುರ್ತು ವಿಚಾರಣೆ ಕೋರಿದ ಸಿಬಲ್, ರಾಜ್ಯದ ಹಾಲಿ ಮುಖ್ಯಮಂತ್ರಿಯೊಬ್ಬರನ್ನು ಇಡಿ ಅಧಿಕಾರಿಗಳು ಬಂಧಿಸಿದ ವಿಧಾನವನ್ನು ಪ್ರಶ್ನಿಸಿದರು. ಇದು ದೇಶದ ರಾಜಕೀಯದ ಮೇಲೆ ಪರಿಣಾಮ ಬೀರುತ್ತದೆ. ಒಬ್ಬ ವ್ಯಕ್ತಿಯನ್ನು ಈ ರೀತಿ ಬಂಧಿಸಲು ಹೇಗೆ ಸಾಧ್ಯ ಎಂದು ತಮ್ಮ ವಾದ ಮಂಡಿಸಿದರು. ಆಗ ಸಿಜೆಐ ಚಂದ್ರಚೂಡ್ ಅವರ ಪೀಠವು, ಇದರ ವಿಚಾರಣೆಯನ್ನು ನಾಳೆ ಮಾಡುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಬಂಧಿಸಿದ ಇಡಿ: ಚಂಪೈ ಸೊರೆನ್ ಹೊಸ ಮುಖ್ಯಮಂತ್ರಿ?