ನವದೆಹಲಿ: ರೆಮಲ್ ಚಂಡಮಾರುತ ಪರಿಣಾಮವಾಗಿ ಪಶ್ಚಿಮ ಬಂಗಾಳ ಮತ್ತು ಮಣಿಪುರ, ನಾಗಲ್ಯಾಂಡ್ ಸೇರಿದಂತೆ ಹಲವು ಈಶಾನ್ಯ ಭಾಗದ ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದೆ. ಇದೇ ವೇಳೆ ದೆಹಲಿ, ರಾಜಸ್ಥಾನ, ಹರಿಯಾಣ, ಉತ್ತರ ಪ್ರದೇಶ ಮತ್ತಿತರ ಉತ್ತರ ಭಾರತದ ರಾಜ್ಯದಲ್ಲಿ ಬಿಸಿಲ ಝಳಕ್ಕೆ ಜನರು ತತ್ತರಿಸಲಿದ್ದಾರೆ.
ಭಾರತೀಯ ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ ಮತ್ತು ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಲ್ಲಿ ಮುಂದಿನ ಐದು ದಿನಗಳ ಕಾಲ ಭಾರೀ ಮಳೆಯಾಗಲಿದೆ. ಇಲ್ಲಿ ಗಾಳಿಯ ವೇಗ ಗಂಟೆಗೆ 35 ರಿಂದ 45 ಕಿ.ಮೀ.ನಿಂದ 55 ಕಿ.ಮೀ ಇರಲಿದೆ. ರೆಮಲ್ ಸೈಕ್ಲೋನ್ನಿಂದ ವಾಯುಭಾರ ಕುಸಿತವಾಗಲಿದೆ. ಇದರಿಂದ ಪಶ್ಚಿಮ ಬಂಗಾಳ ಮತ್ತು ಈಶಾನ್ಯ ಭಾಗದ ರಾಜ್ಯಗಳಲ್ಲಿ ಮಳೆಯಾಗಲಿದೆ. ಈಗಾಗಲೇ ಭಾರೀ ಮಳೆಯಿಂದಾಗಿ, ಮಿಜೋರಾಂನಲ್ಲಿ 37 ಜನರು ಸಾವನ್ನಪ್ಪಿದ್ದು, 12ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದಾರೆ. ಈಶಾನ್ಯ ಭಾಗದ ರಾಜ್ಯಗಳಲ್ಲಿ ಚಂಡಮಾರುತದ ಅಬ್ಬರ ಜನ ಜೀವನದ ಮೇಲೆ ಭಾರೀ ಪರಿಣಾಮ ಬೀರಿದೆ.
ವರದಿಯ ಪ್ರಕಾರ, ರೆಮಲ್ ಚಂಡ ಮಾರುತಕ್ಕೆ ಈವರೆಗೆ 60 ಮಂದಿ ಸಾವನ್ನಪ್ಪಿದ್ದಾರೆ. ಅನೇಕ ಕಡೆ ಭೂ ಕುಸಿತ ಸೇರಿದಂತೆ ಮಳೆ ಅವಘಡ ಸಂಭವಿಸಿದೆ. ಹವಾಮಾನ ಇಲಾಖೆ ಅಂದಾಜಿಸಿದಂತೆ ಚಂಡ ಮಾರುತವೂ ಸದ್ಯ ದಕ್ಷಿಣ ತಮಿಳುನಾಡಿನಲ್ಲಿ ಪರಿಚಲನೆ ಕಾಣುತ್ತಿದ್ದು, ಮಧ್ಯದ ಉಷ್ಣವಲಯದ ಮಟ್ಟದಲ್ಲಿ ಪಕ್ಕದ ಪ್ರದೇಶಗಳಲ್ಲಿ ಇರಲಿದೆ. ಪರಿಣಾಮ ಕೇರಳ ಮತ್ತು ಪುದುಚೇರಿಯಲ್ಲಿ ಇಂದು ಮತ್ತು ನಾಳೆ (ಮೇ 29 ಮತ್ತು 30) ಭಾರೀ ಮಳೆಯಾಗುವ ಸಂಭವ ಇದೆ ಎಂದು ತಿಳಿಸಿದೆ.
ಶಾಖದ ಅಲೆಗೆ ಉತ್ತರ ತತ್ತರ: ಇನ್ನು ಇದಕ್ಕೆ ತದ್ವಿರುದ್ಧವಾದ ವಾತಾವರಣ ಉತ್ತರ ಭಾರತದಲ್ಲಿದೆ. ಇಲ್ಲಿ ತೀವ್ರ ಬಿಸಿಲಿನ ಝಳ ಇದ್ದು, ಮೇ 30ರ ಬಳಿಕ ಈ ಶಾಖದ ಪರಿಸ್ಥಿತಿ ಕ್ಷೀಣಿಸಬಹುದು ಎಂದು ಐಎಂಡಿ ಅಂದಾಜಿಸಿದೆ. ದೆಹಲಿ, ಉತ್ತರ ಪ್ರದೇಶ, ಹರಿಯಾಣ, ಪಂಜಾಬ್, ರಾಜಸ್ಥಾನದಲ್ಲಿ ತೀವ್ರ ಶಾಖದ ಅಲೆ ಇದ್ದು, ರೆಡ್ ಆಲರ್ಟ್ ಘೋಷಿಸಲಾಗಿದೆ.
ಸಾಮಾನ್ಯ ಶಾಖದ ಅಲೆಯಿಂದ ತೀವ್ರ ಶಾಖದ ಅಲೆ ಪರಿಸ್ಥಿತಿಯು ರಾಜಸ್ಥಾನ, ಪಂಜಾಬ್ನ ಕೆಲವು ಪ್ರದೇಶ, ಚಂಡೀಗಢ, ದೆಹಲಿಯಲ್ಲಿ ಮುಂದುವರೆಯಲಿದೆ. ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲೂ ಕೆಲವು ಒಳನಾಡು ಪ್ರದೇಶದಲ್ಲಿ ಈ ರೀತಿ ವಾತವಾರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ದೆಹಲಿ, ಹರಿಯಾಣ, ಚಂಡೀಗಢದಲ್ಲಿ ಮೇ 30ರ ಮತ್ತು ಜೂನ್ 2 ರಂದು ಬೆಚ್ಚಗಿನ ರಾತ್ರಿ ಇರಲಿದೆ. ಇಂದು(ಮೇ 29) ಉತ್ತರ ಪ್ರದೇಶ ಮತ್ತು ಪೂರ್ವ ಮಧ್ಯ ಪ್ರದೇಶದಲ್ಲೂ ಕೂಡ ರಾತ್ರಿ ಶಾಖದ ಅನುಭವ ಉಂಟಾಗಲಿದೆ.
ರಾಷ್ಟ್ರ ರಾಜಧಾನಿಯಲ್ಲಿ ಕೂಡ ತೀವ್ರ ಶಾಖದ ಪರಿಸ್ಥಿತಿ ಮುಂದುವರೆದಿದ್ದು, ಕನಿಷ್ಠ ತಾಪಮಾನ 29.4 ಡಿಗ್ರಿ ಸೆಲ್ಸಿಯಸ್ ಇರಲಿದೆ. ಈ ಋತುಮಾನದಲ್ಲಿ ದಾಖಲಾಗುತ್ತಿದ್ದು, ಸಾಮಾನ್ಯ ತಾಪಮಾನಕ್ಕಿಂತ 2.8 ಡಿಗ್ರಿ ಸೆಲ್ಸಿಯಸ್ ಹವಾಮಾನ ಅಧಿಕ ಇರಲಿದೆ. ದೆಹಲಿಯ ಅನೇಕ ಪ್ರದೇಶದಲ್ಲಿ ಗರಿಷ್ಠ ತಾಪಮಾನ 46 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಷ್ಟ್ರ ರಾಜಧಾನಿಯಲ್ಲಿ ಅನೇಕ ಕಡೆ ಶಾಖದ ತೀವ್ರ ಅಲೆ ಹೆಚ್ಚಿದ್ದು, ತಾಪಮಾನ 50 ಡಿಗ್ರಿ ಹತ್ತಿರ ಏರಿಕೆ ಕಂಡಿದೆ.
ಇದನ್ನೂ ಓದಿ: ಕೇರಳದಲ್ಲಿ ಮಳೆಯಿಂದ ಜನಜೀವನ ಅಸ್ತವ್ಯಸ್ತ: ಕೊಚ್ಚಿಯಲ್ಲಿ ಮೇಘಸ್ಪೋಟ.. ಖ್ಯಾತ ಸಾಹಿತಿಗಳ ಮನೆ ಜಲಾವೃತ