ಮುಂಬೈ: ಭಾರತದ ಹಲವಾರು ಪ್ರದೇಶಗಳು ಮಳೆ ಅಬ್ಬರಕ್ಕೆ ನಲುಗಿದೆ. ಮಹಾರಾಷ್ಟ್ರ ಮತ್ತು ಗುಜರಾತ್ನಲ್ಲಿ ಭಾರೀ ಮಳೆ ಮುನ್ಸೂಚನೆ ಹಿನ್ನಲೆ ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.
ಇಂದು ಮತ್ತು ನಾಳೆ ಮಹಾರಾಷ್ಟ್ರ ಮತ್ತು ಗುಜರಾತ್ನಲ್ಲಿ ಭಾರೀ ಪ್ರಮಾಣದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಶುಕ್ರವಾರದವರೆಗೆ ಮಹಾರಾಷ್ಟ್ರದಲ್ಲಿ ಮಳೆಯಾದರೆ, ಗುಜರಾತ್ನಲ್ಲಿ ಮುಂದಿನ ಮೂರು ದಿನ ವರುಣದ ಅರ್ಭಟ ಇರಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ಬುಧವಾರ ರಾತ್ರಿ ಮುಂಬೈ, ಪುಣೆಯಲ್ಲಿ ಭಾರೀ ಮಳೆಯಾಗಿದ್ದು, ವೈಲ್ ಪಾರ್ಲೆ ಮತ್ತು ವೆಸ್ಟರ್ನ್ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಪ್ರಯಾಣಿಕರು ಸಂಕಷ್ಟಕ್ಕೆ ಒಳಗಾದರು. ಮಹಾರಾಷ್ಟ್ರದ ಕೊಂಕಣ ತೀರ ಥಾಣೆ, ಪಾಲ್ಗಾರ್, ರಾಯ್ಗಢ, ರತ್ನಗಿರಿ ಮತ್ತು ಸಿಂಧುಗಢ ಜಿಲ್ಲೆಯಲ್ಲಿ ಆರೆಂಜ್ ಆಲರ್ಟ್ ಘೋಷಿಸಲಾಗಿದೆ. ಮುಂಬೈ ಮತ್ತು ಇತರೆ ಉಪನಗರದಲ್ಲಿ ಹಾಗೂ ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದ್ದು, ಗಾಳಿಯ ವೇಗ ಗಂಟೆಗೆ 50 ರಿಂದ 50 ಕಿ.ಮೀ ಇರಲಿದೆ.ಶಾಲಾ -ಕಾಲೇಜಿಗೆ ರಜೆ: ರಾಯಗಢದಲ್ಲಿ ಭಾರೀ ಮಳೆ ಹಿನ್ನೆಲೆ ಶಾಲೆ ಮತ್ತು ಕಾಲೇಜಿಗೆ ಅಧಿಕಾರಿಗಳು ರಜೆ ಘೋಷಣೆ ಮಾಡಿದ್ದಾರೆ. ಮಹಾರಾಷ್ಟ್ರದ ಕರಾವಳಿ ತೀರ ಪಾಲ್ಗಾರ್ ಜಿಲ್ಲೆಯ ವಿಕ್ರಂಗಢ ಮತ್ತು ವಾಡಾ ತಾಲೂಕಿನಲ್ಲಿ ಭಾರೀ ಮಳೆ ಹಿನ್ನೆಲೆ ರಜೆ ಘೋಷಣೆ ಮಾಡಲಾಗಿದೆ.
ರಾಯಗಢ, ಪಾಲ್ಗಾರ್ದಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಇಲ್ಲಿನ ಕುಂಡಲಿಕಾ, ಅಂಬಾ, ಸಾವಿತ್ರಿ ಸೇರಿದಂತೆ ಹಲವು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಸಂಚಾರ ಸಂಪರ್ಕ ವ್ಯವಸ್ಥೆಯಲ್ಲಿ ವ್ಯತ್ಯಯವಾಗಿದೆ. ಜಿಲ್ಲೆಗಳಲ್ಲಿ ಮಳೆ ಅವಘಡದ ಹಿನ್ನೆಲೆ ವಿಪತ್ತು ನಿರ್ವಹಣೆಗೆ ನೆರವಾಗುವಂತೆ ಶಿಕ್ಷಕರು ಇತರ ಸಿಬ್ಬಂದಿಗೆ ಸಹಾಯ ಮಾಡುವಂತೆ ಮನವಿ ಮಾಡಲಾಗಿದೆ.
ಗುಜರಾತ್ನಲ್ಲೂ ಮಳೆ ಅಬ್ಬರ: ಗುಜರಾತ್ನಲ್ಲೂ ಗುರುವಾರ ಸುರಿದ ಭಾರೀ ಮಳೆಗೆ 8 ಮಂದಿ ಸಾವನ್ನಪ್ಪಿದ್ದು, ಇದುವರೆಗೆ ಮಳೆ ಸಂಬಂಧಿ ಘಟನೆಯಲ್ಲಿ ಸಾವನ್ನಪ್ಪಿದರ ಸಂಖ್ಯೆ 61 ಆಗಿದೆ. ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನರ ರಕ್ಷಣಾ ಕಾರ್ಯದಲ್ಲಿ ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ಮುಂದಾಗಿದೆ.
ಗುಜರಾತ್ನಲ್ಲೂ ಇನ್ನು ಮೂರು ದಿನ ಭಾರೀ ಪ್ರಮಾಣದ ಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ.
ವಾಯುವ್ಯ ರಾಜ್ಯದಲ್ಲೂ ಮಳೆ: ಹಿಮಾಚಲ ಪ್ರದೇಶ, ಉತ್ತರಾಖಂಡ, ರಾಜಸ್ಥಾನದಲ್ಲಿ ಜುಲೈ 28ರ ವರೆಗೆ ಭಾರೀ ಮಳೆ ನಿರೀಕ್ಷಿಸಲಾಗಿದೆ. ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದಲ್ಲಿ ಉತ್ತಮ ಮಳೆಯಾಗಲಿದ್ದು, ಪಂಜಾಬ್ ಮತ್ತು ಹರಿಯಾಣದಲ್ಲಿ ಜುಲೈ 25ರ ವರೆಗೆ ಮಳೆ ಮುನ್ಸೂಚನೆ ನೀಡಲಾಗಿದೆ.
ಆಂಧ್ರಪ್ರದೇಶದಲ್ಲಿ ಜುಲೈ 26ರ ವರೆಗೆ ಮಳೆ ಪರಿಸ್ಥಿತಿ ಮುಂದುವರೆದರೆ ಕೇರಳದಲ್ಲಿ ಜುಲೈ 27ರ ವರೆಗೆ ಭಾರೀ ಮಳೆಯಾಗಲಿದೆ. ಇಡಿಶಾದಲ್ಲೂ ಭಾರೀ ಮಳೆ ಮುನ್ಸೂಚನೆ ನೀಡಲಾಗಿದೆ. ಅರುಣಾಚಲ ಪ್ರದೇಶ, ಅಸ್ಸೋಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ, ಪಶ್ಚಿಮ ಬಂಗಾಳ ಮತ್ತು ಸಿಕ್ಕೀಂನಲ್ಲೂ ಜುಲೈ 27 ಮತ್ತು 28ರಂದು ಮಳೆ ಸಾಧ್ಯತೆ ಇದೆ.
ಗುರುವಾರ ಬೆಳಗ್ಗೆ ದೆಹಲಿಯಲ್ಲಿ ಸುರಿದ ಮಳೆ ತಂಪೆರೆದಿದ್ದು, ಕನಿಷ್ಠ ತಾಪಮಾನ 26.2 ಡಿಗ್ರಿ ಸೆಲ್ಸಿಯಸ್ ಇದೆ.
ಇದನ್ನೂ ಓದಿ: ಶಿರಡಿ ಸಾಯಿಬಾಬಾ ಮಂದಿರಕ್ಕೆ ₹6.25 ಕೋಟಿ ದೇಣಿಗೆ ನೀಡಿದ ಭಕ್ತ