ನವದೆಹಲಿ: ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾಮೀನು ನೀಡುವ ವಿಚಾರಣಾ ನ್ಯಾಯಾಲಯದ ಆದೇಶಕ್ಕೆ ದೆಹಲಿ ಹೈಕೋರ್ಟ್ ಶುಕ್ರವಾರ ಮಧ್ಯಂತರ ತಡೆ ನೀಡಿದೆ. ಗುರುವಾರವಷ್ಟೇ ಕೆಳಹಂತದ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ನೀಡಿತ್ತು. ಇದರ ಪ್ರಕಾರ, ಇಂದು ಅವರು ಜೈಲಿನಿಂದ ಬಿಡುಗಡೆಯಾಗಬೇಕಿತ್ತು.
ಕೇಜ್ರಿವಾಲ್ ಅವರಿಗೆ ಜಾಮೀನು ಮಂಜೂರು ಮಾಡಿದ ವಿಚಾರಣಾ ನ್ಯಾಯಾಲಯದ ಜೂನ್ 20ರ ಆದೇಶವನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ ಹೈಕೋರ್ಟ್ ಮೆಟ್ಟಿಲೇರಿತ್ತು. ಇಡಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುಧೀರ್ ಕುಮಾರ್ ಜೈನ್ ಅವರನ್ನೊಳಗೊಂಡ ರಜಾಕಾಲದ ಪೀಠವು, ಸಂಪೂರ್ಣ ದಾಖಲೆಗಳನ್ನು ಪರಿಶೀಲಿಸಲು ಇಡಿ ಬಯಸಿದ್ದರಿಂದ ಈ ಜಾಮೀನು ಆದೇಶವನ್ನು 2-3 ದಿನಗಳವರೆಗೆ ಕಾಯ್ದಿರಿಸುತ್ತಿರುವುದಾಗಿ ತಿಳಿಸಿದೆ. ಇದೇ ವೇಳೆ, ಇಡಿ ಅರ್ಜಿ ಸಂಬಂಧ ಪ್ರತಿಕ್ರಿಯಿಸುವಂತೆ ಕೇಜ್ರಿವಾಲ್ ಅವರಿಗೆ ಹೈಕೋರ್ಟ್ ನೋಟಿಸ್ ಕೂಡ ಜಾರಿ ಮಾಡಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ಮಾರ್ಚ್ 21ರಂದು ಇಡಿ ಅಧಿಕಾರಿಗಳು ಕೇಜ್ರಿವಾಲ್ ಅವರನ್ನು ಬಂಧಿಸಿದ್ದರು. ಇದರ ನಡುವೆ ಲೋಕಸಭೆ ಚುನಾವಣೆಯ ಪ್ರಚಾರಕ್ಕೆಂದು ಸುಪ್ರೀಂ ಕೋರ್ಟ್ ಮೇ 10ರಂದು ಅವರಿಗೆ ಮಧ್ಯಂತರ ಜಾಮೀನು ನೀಡಿತ್ತು. ಇದರ ಅವಧಿಯು ಜೂನ್ 2ರಂದು ಮುಗಿದ ಬಳಿಕ ಮತ್ತೆ ಜೈಲಿಗೆ ಶರಣಾಗಿದ್ದರು. ಗುರುವಾರ ವಿಚಾರಣಾ ನ್ಯಾಯಾಲಯ, 1 ಲಕ್ಷ ರೂಪಾಯಿಗಳ ವೈಯಕ್ತಿಕ ಬಾಂಡ್ ಮೇಲೆ ಜಾಮೀನು ನೀಡಿತ್ತು.
ಇದನ್ನೂ ಓದಿ: ಅಬಕಾರಿ ನೀತಿ ಹಗರಣ: ದೆಹಲಿ ಸಿಎಂ ಕೇಜ್ರಿವಾಲ್ಗೆ ಜಾಮೀನು