ನವದೆಹಲಿ: ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ (ಎನ್‌ಡಿಆರ್‌ಎಫ್ ) ಬರ ಪರಿಹಾರ ಬಿಡುಗಡೆಗೆ ಸಂಬಂಧಿಸಿದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಕೇಂದ್ರಕ್ಕೆ ದತ್ತಾಂಶವನ್ನು ನೀಡಿದೆ ಮತ್ತು ಅಫಿಡವಿಟ್ ಸಲ್ಲಿಸಲಿದೆ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಪೀಠವು ರಾಜ್ಯ ಸರ್ಕಾರದ ಅರ್ಜಿ ವಿಚಾರಣೆ ನಡೆಸಿದರು.
ಕರ್ನಾಟಕ ಸರ್ಕಾರ ಪರ ಹಿರಿಯ ವಕೀಲ ಕಪಿಲ್ ಸಿಬಲ್, ಕೇಂದ್ರ ಸರ್ಕಾರ ನಮಗೆ ಕರ್ನಾಟಕ ಸರ್ಕಾರ ಡೇಟಾ ನೀಡಿಲ್ಲ ಎಂದು ಹೇಳಿದ್ದರು. ಆದರೆ ನಮ್ಮ ಬಳಿ ಅವರ ಡೇಟಾ ಇದೆ. ನಾವು ಅಫಿಡವಿಟ್ ಸಲ್ಲಿಸುತ್ತೇವೆ ಎಂದರು. ಕರ್ನಾಟಕ ಸರ್ಕಾರ ತೃಪ್ತಿಯಾಗದಿದ್ದರೆ ನ್ಯಾಯಾಲಯವು ಮುಂದಿನ ದಿನಾಂಕದಂದು ಈ ವಿಷಯವನ್ನು ಕೈಗೆತ್ತಿಕೊಳ್ಳುತ್ತದೆ ಮತ್ತು ಬೇಸಿಗೆ ರಜೆಯ ನಂತರ ವಿಚಾರಣೆ ಆಲಿಸುತ್ತೇವೆ ಎಂದು ನ್ಯಾಯಮೂರ್ತಿ ಗವಾಯಿ ತಿಳಿಸಿದರು. ಇದಕ್ಕೆ ಸಮ್ಮತಿಸಿದ ಸಿಬಲ್, " ಸ್ವಂತ ನೀತಿಯನ್ನು ಅವರು ಪರಿಗಣಿಸಬೇಕಾದ ಅಗತ್ಯ ಇದೆ. ನಾನು ಇಂದು ವಿವಾದಕ್ಕೆ ಇಳಿಯಲು ಬಯಸುವುದಿಲ್ಲ, ನಾವು ಅಫಿಡವಿಟ್ ಸಲ್ಲಿಸುತ್ತೇವೆ ಎಂದು ಪೀಠಕ್ಕೆ ತಿಳಿಸಿದರು. ಸಂಕ್ಷಿಪ್ತ ವಿಚಾರಣೆ ನಂತರ, ಬೇಸಿಗೆ ರಜೆಯ ನಂತರ ವಿಚಾರಣೆ ನಿಗದಿಪಡಿಸಲು ಪೀಠವು ಒಪ್ಪಿಕೊಂಡಿತು.
ರಾಜ್ಯದಲ್ಲಿನ ಬರ ನಿರ್ವಹಣೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರಕ್ಕೆ ಸುಮಾರು 3,400 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಏಪ್ರಿಲ್ 29 ರಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು.
ರಾಜ್ಯ ಸರ್ಕಾರಕ್ಕೆ ಕೇಂದ್ರವು 3,454 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ ಎಂದು ಭಾರತದ ಅಟಾರ್ನಿ ಜನರಲ್ ಆರ್.ವೆಂಕಟರಮಣಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು. ರಾಜ್ಯ ಸರ್ಕಾರವು 18,000 ಕೋಟಿ ರೂ.ಗಳನ್ನು ಕೋರಿದೆ. ಆದರೆ ಕೇವಲ 3,454 ಕೋಟಿ ರೂ.ಗಳನ್ನು ಮಾತ್ರ ಬಿಡುಗಡೆ ಮಾಡಲಾಗಿದೆ ಎಂದು ಸಿಬಲ್ ವಾದಿಸಿದ್ದರು. ಅಂತರ ಸಚಿವಾಲಯದ ತಂಡವು ಪರಿಶೀಲನೆ ನಡೆಸಿ ಉಪಸಮಿತಿಗೆ ವರದಿಯನ್ನು ಕಳುಹಿಸಿದೆ ಎಂದು ಹೇಳಿದ್ದರು. ಬಳಿಕ ವೆಂಕಟರಮಣಿ ಸಚಿವಾಲಯದ ತಂಡ ಏನು ಶಿಫಾರಸು ಮಾಡಿದೆಯೋ ಅದನ್ನು ಉಪಸಮಿತಿ ಗಣನೆಗೆ ತೆಗೆದುಕೊಂಡಿದೆ ಎಂದು ತಿಳಿಸಿದ್ದರು.
ಬರ ನಿರ್ವಹಣೆಗಾಗಿ ರಾಜ್ಯಕ್ಕೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ (ಎನ್‌ಡಿಆರ್‌ಎಫ್) ಆರ್ಥಿಕ ನೆರವು ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ. ಸೆಪ್ಟೆಂಬರ್ 2023 ರಲ್ಲಿ, ಬರಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು NDRF ಅಡಿ 18,174 ಕೋಟಿ ರೂ. ನೀಡಬೇಕು ಎಂದು ರಾಜ್ಯ ಸರ್ಕಾರ ಕೋರಿತ್ತು. ರಾಜ್ಯ ಸರ್ಕಾರ ಸೆಪ್ಟೆಂಬರ್ 13, 2023 ರಂದು 223 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಿತ್ತು. ಬರದಿಂದಾಗಿ 48 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆ ಹಾನಿಯಾಗಿದೆ, ಇದರ ಪರಿಣಾಮವಾಗಿ 35,162 ಕೋಟಿ ರೂ ನಷ್ಟವಾಗಿದೆ ಎಂದು ತಿಳಿಸಿತ್ತು.
ಇದನ್ನೂ ಓದಿ: ಕೇಂದ್ರದ ಬರ ಪರಿಹಾರ ಮೊತ್ತ ಬೆಳೆಹಾನಿಯಾದ ರೈತರಿಗೆ ಪಾವತಿಸಲು ರಾಜ್ಯ ಸರ್ಕಾರ ಆದೇಶ - Drought Relief Fund