ನವದೆಹಲಿ: ಕಾಂಗ್ರೆಸ್ ಜೊತೆ ಮೈತ್ರಿ ವಿಫಲವಾಗಿರುವ ಹಿನ್ನೆಲೆಯಲ್ಲಿ ಸ್ವತಂತ್ರವಾಗಿ ಹರಿಯಾಣ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಿರುವ ಆಮ್ ಆದ್ಮಿ ಪಕ್ಷ (ಎಎಪಿ) ತನ್ನ ಅಭ್ಯರ್ಥಿಗಳ ಆರನೇ ಪಟ್ಟಿ ಬಿಡುಗಡೆ ಮಾಡಿದೆ.
ಒಟ್ಟು 89 ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಚುನಾವಣೆಗೆ ಸ್ಪರ್ಧಿಸುತ್ತಿರುವ ಆರನೇ ಪಟ್ಟಿಯಲ್ಲಿ 19 ಅಭ್ಯರ್ಥಿಗಳ ಹೆಸರು ಘೋಷಿಸಿದೆ. ಇದರೊಂದಿಗೆ ಇಲ್ಲಿಯವರೆಗೆ 89 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದಂತಾಗಿದೆ. ಇನ್ನೊಬ್ಬ ಅಭ್ಯರ್ಥಿಯ ಹೆಸರು ಪ್ರಕಟಿಸಬೇಕಿದೆ.
ಈ ಪಟ್ಟಿಯಲ್ಲಿ ಕಲ್ಕಾ ಕ್ಷೇತ್ರದಿಂದ ಪಿ.ಗುಜ್ಜರ್, ಪಂಚಕುಲದಿಂದ ಪ್ರೇಮ್ ಗರ್ಗ್, ಅಂಬಾಲಾ ನಗರದಿಂದ ಕೇತನ್ ಶರ್ಮಾ ಮತ್ತು ಮುಲಾನಾದಿಂದ ಗುರ್ತೇಜ್ ಸಿಂಗ್ ಕಣಕ್ಕಿಳಿಯಲಿದ್ದಾರೆ. ನಿನ್ನೆಯಷ್ಟೇ ಎಎಪಿ 21 ಅಭ್ಯರ್ಥಿಗಳ ಐದನೇ ಪಟ್ಟಿ ಬಿಡುಗಡೆಗಳಿಸಿತ್ತು.
40 ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆಗೊಳಿಸಿದ ಎಎಪಿ: ಹರಿಯಾಣ ಚುನಾವಣಾ ಕಣದಲ್ಲಿನ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಎಎಪಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪತ್ನಿ ಸುನೀತಾ ಕೇಜ್ರಿವಾಲ್, ಪಂಜಾಬ್ ಸಿಎಂ ಭಗವಂತ್ ಮಾನ್, ದೆಹಲಿ ಸಚಿವೆ ಅತಿಶಿ, ಸೌರಭ್ ಭಾರಧ್ವಾಜ್, ಸಂಜಯ್ ಸಿಂಗ್ ಮತ್ತು ಮನೀಷ್ ಸಿಸೋಡಿಯಾ ಸೇರಿದಂತೆ ಪ್ರಮುಖರಿದ್ದಾರೆ.
ಕಾಂಗ್ರೆಸ್ ನಾಲ್ಕನೇ ಪಟ್ಟಿ ರಿಲೀಸ್, ಆದಿತ್ಯ ಸುರ್ಜೇವಾಲಗೆ ಟಿಕೆಟ್: ಕಾಂಗ್ರೆಸ್ ಪಕ್ಷ ಗುರುವಾರ ತನ್ನ ನಾಲ್ಕನೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಐವರು ಅಭ್ಯರ್ಥಿಗಳ ಹೆಸರು ಘೋಷಿಸಿದೆ. ಇಲ್ಲಿಯವರೆಗೆ ಕೈ ಪಕ್ಷ 86 ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಿದೆ.
ಅಂಬಾಲಾ ಕ್ಯಾಂಟ್‌ನಿಂದ ಪರಿಮಲ್ ಪಾರಿ, ಪಾಣಿಪತ್ ಗ್ರಾಮಾಂತರದಿಂದ ಸಚಿನ್ ಕುಂದು, ನರ್ವಾನಾ (ಎಸ್‌ಸಿ)ಯಿಂದ ಸತ್ಬೀರ್ ದುಬ್ಲೇನ್, ರಾನಿಯಾದಿಂದ ಸರ್ವ ಮಿತ್ರ ಕಾಂಬೋಜ್ ಮತ್ತು ಟಿಗಾಂವ್‌ನಿಂದ ರೋಹಿತ್ ನಗರ್ ಅವರನ್ನು ಕಣಕ್ಕಿಳಿಸಿದೆ. 40 ಅಭ್ಯರ್ಥಿಗಳ ಮೂರನೇ ಪಟ್ಟಿ ಪ್ರಕಟಿಸಿದ ಕೆಲವೇ ಹೊತ್ತಿನಲ್ಲಿ ನಾಲ್ಕನೇ ಪಟ್ಟಿ ಬಿಡುಗಡೆಯಾಗಿದೆ.
ಸಂಸದ ರಣದೀಪ್ ಸುರ್ಜೇವಾಲ ಅವರ ಪುತ್ರ ಆದಿತ್ಯ ಸುರ್ಜೇವಾಲರನ್ನು ಕೈತಾಲ್ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ.
ಈಗಾಗಲೇ 86 ಅಭ್ಯರ್ಥಿಗಳನ್ನು ಘೋಷಿಸಿರುವ ಕಾಂಗ್ರೆಸ್, ಅಂತಿಮ ಹಂತದ ಒಪ್ಪಂದದ ಹಿನ್ನೆಲೆಯಲ್ಲಿ ನಾಲ್ಕು ಸೀಟುಗಳಿಗೆ ಅಭ್ಯರ್ಥಿಗಳನ್ನು ಕಾಯ್ದಿರಿಸುವ ತಂತ್ರದ ಮೊರೆ ಹೋಗಿದೆ. ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಗರ್ಹಿ ಸಂಪ್ಲಾ ಕಿಲೋಯ್‌ನಿಂದ, ರಾಜ್ಯ ಘಟಕದ ಮುಖ್ಯಸ್ಥ ಉದಯ್ ಭಾನ್ ಹೊಡಾಲ್‌ನಿಂದ, ಕುಸ್ತಿಪಟು ವಿನೇಶ್ ಫೋಗಟ್ ಜೂಲಾನಾದಿಂದ ಸ್ಪರ್ಧಿಸುತ್ತಿದ್ದಾರೆ.
ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನ ಸೆಪ್ಟೆಂಬರ್ 12. ಅಕ್ಟೋಬರ್ 5ರಂದು ಮತದಾನ ನಡೆಯಲಿದೆ. ಮತ ಎಣಿಕೆ ಅಕ್ಟೋಬರ್ 12ರಂದು ನಡೆಯಲಿದೆ.
ಇದನ್ನೂ ಓದಿ: I.N.D.I.A ಕೂಟಕ್ಕೆ ಇನ್ನು 20 ಸೀಟು ಸಿಕ್ಕಿದ್ದರೆ ಬಿಜೆಪಿಗರು ಜೈಲಿನಲ್ಲಿ ಇರುತ್ತಿದ್ದರು: ಮಲ್ಲಿಕಾರ್ಜುನ್ ಖರ್ಗೆ