ರಾಂಚಿ(ಜಾರ್ಖಂಡ್): ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರ್ಖಂಡ್ ಸರ್ಕಾರದ ಎರಡನೇ ವಿಕೆಟ್ ಪತನವಾಗಿದೆ. ಕಾಂಗ್ರೆಸ್ ನಾಯಕ ಆಲಂಗೀರ್ ಆಲಂ ಅವರು ಸಚಿವ ಸ್ಥಾನ ಮತ್ತು ಶಾಸಕಾಂಗ ಪಕ್ಷದ ನಾಯಕತ್ವಕ್ಕೆ ಇಂದು ರಾಜೀನಾಮೆ ನೀಡಿದ್ದಾರೆ. ಇದಕ್ಕೂ ಮೊದಲು ಹೇಮಂತ್ ಸೊರೆನ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಪ್ರಕರಣದ ವಿಚಾರಣೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇಡಿ) ಜಾರ್ಖಂಡ್ ಮುಕ್ತಿ ಮೋರ್ಚಾ ಮತ್ತು ಕಾಂಗ್ರೆಸ್ ಪಕ್ಷಗಳ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದ ಆಲಂ ಅವರನ್ನು ಬಂಧಿಸಿದೆ. ರಾಂಚಿಯ ವಿಶೇಷ ನ್ಯಾಯಾಲಯ ಅವರನ್ನು 6 ದಿನಗಳ ಕಾಲ ಇಡಿ ಕಸ್ಟಡಿಗೆ ನೀಡಿತ್ತು. ಇದರ ಬೆನ್ನಲ್ಲೇ ಆಲಂ, ಸಚಿವ ಸ್ಥಾನಕ್ಕೆ ಸಿಎಂಗೆ ರಾಜೀನಾಮೆ ಪತ್ರ ಕಳುಹಿಸಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಎಐಸಿಸಿ ಅಧ್ಯಕ್ಷರಿಗೆ ರಾಜೀನಾಮೆ ಪತ್ರವನ್ನು ಜೈಲಾಧಿಕಾರಿಗಳ ಮೂಲಕ ಸಲ್ಲಿಸಿದ್ದಾರೆ.
ಪ್ರಕರಣವೇನು?: ಸಚಿವರಾಗಿದ್ದ ಆಲಂಗೀರ್ ಆಲಂ ಅವರ ಸಹಾಯಕನ ಮನೆ ಕೆಲಸದಾಳುವಿನ ನಿವಾಸದಲ್ಲಿ 35.23 ಕೋಟಿ ರೂಪಾಯಿ ಅಕ್ರಮ ಹಣ ಪತ್ತೆಯಾಗಿತ್ತು. ದಾಳಿ ನಡೆಸಿದ್ದ ಇಡಿ ಅಧಿಕಾರಿಗಳು ರಾತ್ರಿಯಿಡೀ ಹಣ ಎಣಿಕೆ ಮಾಡಿ ವಶಕ್ಕೆ ಪಡೆದಿದ್ದರು. ಸಹಾಯಕ ಸಂಜೀವ್ ಲಾಲ್ ಮತ್ತು ಆತನ ಮನೆ ಕೆಲಸಗಾರ ಜಹಾಂಗೀರ್ ಆಲಂ ಇಬ್ಬರನ್ನೂ ಬಂಧಿಸಿತ್ತು.
ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಆಲಂ ಅವರನ್ನು ಮೇ 14ರಂದು ರಾಂಚಿ ವಲಯ ಕಚೇರಿಯ ಇಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತ್ತು. ಆದರೆ ನಿನ್ನೆ(ಸೋಮವಾರ) ಅವರು ಇಡಿ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಇಂದು ಬಂಧಿಸಲಾಗಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಂಚಿಯ ವಿಶೇಷ ಪಿಎಂಎಲ್‌ಎ ನ್ಯಾಯಾಲಯವು ಅವರನ್ನು ಆರು ದಿನಗಳ ಕಾಲ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಿ ಆದೇಶಿಸಿದೆ.
ಬಂಧನದ ಕುರಿತು ಮಾತನಾಡಿರುವ ಜಾರ್ಖಂಡ್ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಠಾಕೂರ್, "ಆಲಂ ಪ್ರಾಮಾಣಿಕ ವ್ಯಕ್ತಿ. ಪಲಾಯನ ಮಾಡುವವರಲ್ಲ. ಕಾನೂನು ಪ್ರಕಾರ ಎಲ್ಲವನ್ನೂ ಎದುರಿಸಲಿದ್ದಾರೆ. ಪ್ರಧಾನಿ ಮೋದಿ ಅವರು ಪ್ರಮಾಣ ವಚನ ಸ್ವೀಕರಿಸಿದ ನಂತರ ಆಲಂರನ್ನು ಬಂಧಿಸಲಾಗಿದೆ. ಇದು ರಾಜಕೀಯ ಹಿನ್ನೆಲೆಯಲ್ಲಾದ ಬಂಧನ. ಪ್ರಕರಣದಲ್ಲಿ ಅವರನ್ನು ಸಿಲುಕಿಸಿದ್ದು ಅನ್ಯಾಯ" ಎಂದು ದೂರಿದರು.
ಇದನ್ನೂ ಓದಿ: ನನ್ನ ವಿರುದ್ಧದ ಭ್ರಷ್ಟಾಚಾರ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ: ಹೇಮಂತ್ ಸೊರೇನ್