ಜಮ್ಮು: ಕಣಿವೆ ರಾಜ್ಯದಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದೆ. ಜಮ್ಮು ಮತ್ತು ಕಾಶ್ಮೀರದ ಜಮ್ಮು ಜಿಲ್ಲೆಯ ಅಖ್ನೂರ್ ಪ್ರದೇಶದಲ್ಲಿ ಸೇನಾ ವಾಹನ ಗುರಿಯಾಗಿಸಿ ಭಯೋತ್ಪಾದಕರು ದಾಳಿ ನಡೆಸಿದ್ದು, ಇದರ ಬೆನ್ನಲ್ಲೇ ಭಯೋತ್ಪಾದಕರು ಮತ್ತು ಸೇನಾ ಸಿಬ್ಬಂದಿಗಳ ನಡುವೆ ಗುಂಡಿನ ಚಕಮಕಿ ನಡೆದಿದೆ.
ಸೋಮವಾರ ಬೆಳಗ್ಗೆ ಜೊಗ್ವಾನ್ನಲ್ಲಿನ ಅಸ್ಸಾನ್ ದೇಗುಲದ ರಸ್ತೆಯಲ್ಲಿ ಸೇನಾ ಆ್ಯಂಬುಲೆನ್ಸ್ ಸಾಗುತ್ತಿದ್ದಾಗ ಮೂವರು ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದು, ತಕ್ಷಣಕ್ಕೆ ಕಾರ್ಯ ಪ್ರವೃತ್ತರಾದ ಭದ್ರತಾ ಸಿಬ್ಬಂದಿ ಶೋಧ ಕಾರ್ಯಾಚರಣೆಗೆ ಮುಂದಾಗಿದ್ದಾರೆ.
ಈ ಕುರಿತು ತಿಳಿಸಿರುವ ಅಧಿಕಾರಿಗಳು, ಭಯೋತ್ಪಾದಕರು ಸೇನಾ ವಾಹನ ಗುರಿಯಾಗಿಸಿ ನಡೆಸಿದ ಸಂಚು ವಿಫಲವಾಗಿದೆ. ಇದರ ಬೆನ್ನಲ್ಲೇ ಸೇನಾ ಸಿಬ್ಬಂದಿ ಪ್ರತಿದಾಳಿ ನಡೆಸಿದೆ. ಸದ್ಯ ಭಯೋತ್ಪಾದಕರು ಮತ್ತು ಭದ್ರತಾ ಸಿಬ್ಬಂದಿ ನಡುವೆ ದಾಳಿ ಆರಂಭವಾಗಿದೆ. ಭಯೋತ್ಪಾದಕರು ತಪ್ಪಿಸಿಕೊಳ್ಳುವ ಎಲ್ಲ ಮಾರ್ಗಗಳನ್ನು ಮುಚ್ಚಲಾಗಿದೆ ಎಂದಿದ್ದಾರೆ.
ಸೇನೆಗೆ ಬಲ ತುಂಬುವ ಯತ್ನ ಸಾಗಿದ್ದು, ಘಟನೆಯಲ್ಲಿ ಯಾವುದೇ ಅಪಾಯ ಅಥವಾ ಗಾಯಗಳ ಕುರಿತಾದ ಯಾವುದೇ ವರದಿ ಬಂದಿಲ್ಲ. ರಾತ್ರಿ ಸಮಯದಲ್ಲಿ ಜಮ್ಮು ಗಡಿಯಿಂದ ಒಳನುಸುಳಿದ ಭಯೋತ್ಪಾದಕರು ಈ ದಾಳಿ ನಡೆಸಿದ್ದು, ಮೂವರು ಈ ತಂಡದಲ್ಲಿರುವ ಸಾಧ್ಯತೆ ಇದೆ ಎಂದು ಸೇನೆ ತಿಳಿಸಿದೆ.
ಗುರುವಾರ ಕೂಡ ಸೇನಾ ವಾಹನ ಗುರಿಯಾಗಿಸಿ ಕೊಂಡು ಗುಲ್ಮಾರ್ಗ್ ಬಳಿಯ ಬುತಪಥೇರಿ ಪ್ರದೇಶದ ನಗಿನ್ನಲ್ಲಿ ಭಯೋತ್ಪಾದಕರು ದಾಳಿ ನಡೆಸಿದ್ದರು. ಈ ವೇಳೆ ಇಬ್ಬರು ಸಿಬ್ಬಂದಿ ಹಾಗೂ ಇಬ್ಬರು ಕಾರ್ಮಿಕರು ಸಾವನ್ನಪ್ಪಿ, ಮೂವರು ಯೋಧರು ಗಾಯಗೊಂಡಿದ್ದರು.
ಇದನ್ನೂ ಓದಿ: ಬಾರಾಮುಲ್ಲಾದಲ್ಲಿ ಸೇನಾ ವಾಹನ ಗುರಿಯಾಗಿಸಿ ದಾಳಿ: ಇಬ್ಬರು ಯೋಧರು, ಕಾರ್ಮಿಕರ ಸಾವು