ಅಹ್ಮದಾಬಾದ್ : ಗುಜರಾತ್ನ ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ವಿವಿಧ ಪಕ್ಷಗಳ ಒಟ್ಟು 35 ಮುಸಲ್ಮಾನ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ ಪ್ರತಿ ಬಾರಿ ಮುಸಲ್ಮಾನರಿಗೆ ಟಿಕೆಟ್ ನೀಡುತ್ತಿದ್ದ ಕಾಂಗ್ರೆಸ್ ಪಕ್ಷ ಈ ಬಾರಿ ಒಬ್ಬೇ ಒಬ್ಬ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸದಿರುವುದು ಸೋಜಿಗ.
ಭರೂಚ್ ಲೋಕಸಭಾ ಕ್ಷೇತ್ರಕ್ಕೆ ಸಾಂಪ್ರದಾಯಿಕವಾಗಿ ಕಾಂಗ್ರೆಸ್ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡುತ್ತಿತ್ತು. ಆದರೆ ಐಎನ್ಡಿಐಎ ಮೈತ್ರಿಯ ಭಾಗವಾಗಿ ಈ ಬಾರಿ ಭರೂಚ್ ಕ್ಷೇತ್ರವನ್ನು ಆಮ್ ಆದ್ಮಿ ಪಕ್ಷಕ್ಕೆ ಬಿಟ್ಟುಕೊಡಲಾಗಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ.
ರಾಷ್ಟ್ರೀಯ ಪಕ್ಷಗಳ ಪೈಕಿ ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಮಾತ್ರವೇ ಗಾಂಧಿನಗರದಿಂದ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. 2019 ರ ಲೋಕಸಭಾ ಚುನಾವಣೆಯಲ್ಲಿ ಕೂಡ ಬಿಎಸ್ಪಿ ಪಂಚಮಹಲ್ನಿಂದ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಗುಜರಾತ್ನ 26 ಸ್ಥಾನಗಳ ಪೈಕಿ 25 ಸ್ಥಾನಗಳಿಗೆ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ 35 ಮುಸ್ಲಿಂ ಅಭ್ಯರ್ಥಿಗಳು ಕಣದಲ್ಲಿದ್ದಾರೆ. 2019ರಲ್ಲಿ 43 ಮುಸ್ಲಿಂ ಅಭ್ಯರ್ಥಿಗಳು ಕಣದಲ್ಲಿದ್ದರು.
ಮುಸ್ಲಿಂ ಸಮುದಾಯದ ಬಹುತೇಕ ಅಭ್ಯರ್ಥಿಗಳು ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದಾರೆ ಅಥವಾ ಕಡಿಮೆ ಪರಿಚಿತ ಪಕ್ಷಗಳಿಂದ ಕಣಕ್ಕಿಳಿಸಲ್ಪಟ್ಟಿದ್ದಾರೆ.
ಈ ಬಗ್ಗೆ ಮಾತನಾಡಿದ ಗುಜರಾತ್ ಕಾಂಗ್ರೆಸ್ನ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ವಜಿರ್ ಖಾನ್ ಪಠಾಣ್, "ಪಕ್ಷವು ಸಾಂಪ್ರದಾಯಿಕವಾಗಿ ಮುಸ್ಲಿಂ ಸಮುದಾಯದಿಂದ ಕನಿಷ್ಠ ಒಬ್ಬ ಅಭ್ಯರ್ಥಿಯನ್ನು ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸುತ್ತಿತ್ತು. ಆದರೆ ಈ ಬಾರಿ ಭರೂಚ್ ಕ್ಷೇತ್ರವನ್ನು ಆಮ್ ಆದ್ಮಿ ಪಾರ್ಟಿಗೆ ಬಿಟ್ಟು ಕೊಟ್ಟಿರುವುದರಿಂದ ಅದು ಸಾಧ್ಯವಾಗಿಲ್ಲ." ಎಂದು ಹೇಳಿದರು.
"ಮುಸ್ಲಿಂ ಅಭ್ಯರ್ಥಿಗಳು ಬೇರೆ ಯಾವುದೇ ಕ್ಷೇತ್ರಗಳಿಂದ ಸ್ಪರ್ಧಿಸಿದರೂ ಗೆಲ್ಲುವ ಸಾಧ್ಯತೆಗಳು ಬಹಳ ಕಡಿಮೆ. ಅಹ್ಮದಾಬಾದ್ ಪಶ್ಚಿಮ ಮತ್ತು ಕಚ್ ಈ ಎರಡು ಕ್ಷೇತ್ರಗಳಲ್ಲಿ ಮುಸಲ್ಮಾನರ ಸಂಖ್ಯೆ ಜಾಸ್ತಿ ಇದ್ದರೂ ಇವೆರಡೂ ಕ್ಷೇತ್ರಗಳು ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಮೀಸಲಾಗಿವೆ" ಎಂದು ಪಠಾಣ್ ತಿಳಿಸಿದರು.
ಭರೂಚ್ ಹೊರತುಪಡಿಸಿ ಕಾಂಗ್ರೆಸ್ ಈ ಹಿಂದೆ ನವಸಾರಿ ಮತ್ತು ಅಹಮದಾಬಾದ್ ನಿಂದ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. (ಆಗ ಇದನ್ನು ಅಹಮದಾಬಾದ್ ಪೂರ್ವ ಮತ್ತು ಪಶ್ಚಿಮ ಸ್ಥಾನಗಳಾಗಿ ವಿಂಗಡಿಸಲಾಗಿರಲಿಲ್ಲ). 1977ರಲ್ಲಿ ಕಾಂಗ್ರೆಸ್ ಅಹಮದಾಬಾದ್ನಿಂದ ಎಹ್ಸಾನ್ ಜಾಫ್ರಿ ಮತ್ತು ಭರೂಚ್ ನಿಂದ ಅಹ್ಮದ್ ಪಟೇಲ್ ಹೀಗೆ ಇಬ್ಬರು ಮುಸ್ಲಿಂ ಸದಸ್ಯರನ್ನು ಲೋಕಸಭೆಗೆ ಕಳುಹಿಸಿತ್ತು.
ಪಟೇಲ್ ಅವರು 1980 ಮತ್ತು 1984 ರಲ್ಲಿ ಭರೂಚ್ನಿಂದ ಮತ್ತೆ ಎರಡು ಬಾರಿ ಗೆದ್ದರು. ಅವರ ಮಗ ಫೈಸಲ್ ಪಟೇಲ್ ಮತ್ತು ಮಗಳು ಮುಮ್ತಾಜ್ ಪಟೇಲ್ ಈ ಬಾರಿ ಈ ಸ್ಥಾನದ ಆಕಾಂಕ್ಷಿಗಳಾಗಿದ್ದರು. ಆದರೆ ಈ ಕ್ಷೇತ್ರ ಕೂಡ ಆಮ್ ಆದ್ಮಿ ಪಾರ್ಟಿಗೆ ಹಂಚಿಕೆಯಾಗಿದ್ದರಿಂದ ಇಬ್ಬರೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಪ್ ಇಲ್ಲಿಂದ ಬುಡಕಟ್ಟು ನಾಯಕ ಚೈತಾರ್ ವಾಸವ ಅವರನ್ನು ಕಣಕ್ಕಿಳಿಸಿದೆ.
ಈ ಹಿಂದೆ 2004, 2009 ಮತ್ತು 2019 ರ ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಕ್ರಮವಾಗಿ ಮುಹಮ್ಮದ್ ಪಟೇಲ್, ಅಜೀಜ್ ತಂಕರ್ವಿ ಮತ್ತು ಶೇರ್ ಖಾನ್ ಪಠಾಣ್ ಅವರನ್ನು ಭರೂಚ್ನಿಂದ ಕಣಕ್ಕಿಳಿಸಿತ್ತು. 2014 ರ ಲೋಕಸಭಾ ಚುನಾವಣೆಯಲ್ಲಿ ಅದು ತನ್ನ ಏಕೈಕ ಮುಸ್ಲಿಂ ಅಭ್ಯರ್ಥಿ ಮಕ್ಸೂದ್ ಮಿರ್ಜಾ ಅವರನ್ನು ನವಸಾರಿ ಸ್ಥಾನದಿಂದ ಕಣಕ್ಕಿಳಿಸಿತ್ತು.
ಮಾಯಾವತಿ ನೇತೃತ್ವದ ಬಿಎಸ್ಪಿ ಈ ಬಾರಿ ಗಾಂಧಿನಗರದಿಂದ ಸ್ಪರ್ಧಿಸಲು ಮೊಹಮ್ಮದ್ ಅನೀಸ್ ದೇಸಾಯಿ ಅವರಿಗೆ ಟಿಕೆಟ್ ನೀಡಿದೆ. ಇಲ್ಲಿ ಅವರು ಬಿಜೆಪಿ ನಾಯಕ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಗುಜರಾತ್ನ 25 ಲೋಕಸಭಾ ಕ್ಷೇತ್ರಗಳ ಪೈಕಿ ಗಾಂಧಿನಗರದಲ್ಲಿ ಅತಿ ಹೆಚ್ಚು 8 ಮುಸ್ಲಿಂ ಅಭ್ಯರ್ಥಿಗಳಿದ್ದಾರೆ.
ಇದನ್ನೂ ಓದಿ : 140 ಕೋಟಿ ಜನರ ಮನಸ್ಸಿನಲ್ಲಿ ನಂಬಿಕೆ, ವಿಶ್ವಾಸ ಮರುಸ್ಥಾಪಿಸಿರುವುದು ನಮ್ಮ ಸಾಧನೆ: ಪ್ರಧಾನಿ ಮೋದಿ - PM Modi Interview