ಸೂರತ್ (ಗುಜರಾತ್): ಆರು ವರ್ಷಗಳ ಹಿಂದಿನ ಪ್ರಕರಣದಲ್ಲಿ ಗುಜರಾತ್ ಬಿಜೆಪಿ ನಾಯಕ ಹಾರ್ದಿಕ್ ಪಟೇಲ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಸೂರತ್ ಜಿಲ್ಲೆಯಲ್ಲಿ ನಡೆದಿದ್ದ ಸಭೆಯಲ್ಲಿ ಸರ್ಕಾರದ ವಿರುದ್ಧ ರಾಜಕೀಯ ಭಾಷಣ ಆರೋಪ ಪ್ರಕರಣದಲ್ಲಿ ಸೂರತ್‌ನ ನ್ಯಾಯಾಲಯವು ಹಾರ್ದಿಕ್ ಪಟೇಲ್ ಅವರನ್ನು ಖುಲಾಸೆಗೊಳಿಸಿದೆ ಎಂದು ವಕೀಲರು ತಿಳಿಸಿದ್ದಾರೆ.
2017ರ ಡಿಸೆಂಬರ್ 3ರಂದು ನಡೆದಿದ್ದ ಜನ ಕ್ರಾಂತಿ ಮಹಾಸಭಾದ ಕಾರ್ಯಕ್ರಮದಲ್ಲಿ ಹಾರ್ದಿಕ್ ಪಟೇಲ್ ರಾಜಕೀಯ ಭಾಷಣ ಮಾಡಿದ್ದರು. ಆ ಸಮಯದಲ್ಲಿ ಜಿಲ್ಲಾಧಿಕಾರಿಗಳ ಅನುಮತಿಯ ಮೇರೆಗೆ ಹಾರ್ದಿಕ್ ಪಟೇಲ್ ಈ ರಾಜಕೀಯೇತರ ಸಭೆಯಲ್ಲಿ ಭಾಗವಹಿಸಿದ್ದರು. ಈ ಸಭೆಯಲ್ಲಿ ಸರ್ಕಾರದ ವಿರುದ್ಧ ಭಾಷಣ ಮಾಡಿದ್ದಕ್ಕಾಗಿ ಹಾರ್ದಿಕ್ ಪಟೇಲ್ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿತ್ತು.
ಇದೀಗ ಈ ಪ್ರಕರಣದಲ್ಲಿ ನಮ್ಮ ವಾದವನ್ನು ನ್ಯಾಯಾಲಯವು ಒಪ್ಪಿಕೊಂಡಿದ್ದು, ಹಾರ್ದಿಕ್ ಪಟೇಲ್ ಅವರನ್ನು ಖುಲಾಸೆಗೊಳಿಸಿ ಆದೇಶಿಸಿದೆ ಎಂದು ವಕೀಲ ಯಶವಂತ್ ವಾಲಾ ಹೇಳಿದ್ದಾರೆ. ಅಲ್ಲದೇ, ಪರವಾನಗಿಯ ಷರತ್ತು ಸಂಖ್ಯೆ 14 ಉಲ್ಲಂಘಿಸಿರುವುದು ಸಾಬೀತಾಗಿಲ್ಲ. ಇದಲ್ಲದೆ, ಅವರು ಯಾರದ್ದೋ ಪರವಾಗಿ ಅಥವಾ ವಿರುದ್ಧವಾಗಿ ಯಾವುದೇ ಭಾಷಣ ಮಾಡಿದ ಬಗ್ಗೆ ದಾಖಲೆಯಲ್ಲಿ ಯಾವುದೇ ಪುರಾವೆಗಳಿಲ್ಲ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಲಾಗಿದೆ. ಹೀಗಾಗಿ ಎರಡೂ ಕಡೆಯ ವಾದವನ್ನು ಆಲಿಸಿದ ಕೋರ್ಟ್ ಇಂದು ಹಾರ್ದಿಕ್ ಪಟೇಲ್ ಅವರನ್ನು ಖುಲಾಸೆಗೊಳಿಸಿದೆ ಎಂದು ವಕೀಲರು ಮಾಹಿತಿ ನೀಡಿದ್ದಾರೆ.
ಮತ್ತೊಂದೆಡೆ, ಬಿಜೆಪಿ ನಾಯಕ ಹಾರ್ದಿಕ್ ಪಟೇಲ್ ಪ್ರತಿಕ್ರಿಯಿಸಿ, ಸಾರ್ಥನಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಇಂದು ನಾನು ನಿರಪರಾಧಿ ಎಂದು ಸಾಬೀತಾಗಿದೆ. ನನ್ನ ಪರವಾದ ಎಲ್ಲ ವಕೀಲರು ಸರಿಯಾದ ವಾದಗಳನ್ನು ಮಾಡಿದ್ದಾರೆ. ನ್ಯಾಯಾಲಯದ ಈ ತೀರ್ಪನ್ನು ನಾನು ಸ್ವಾಗತಿಸುತ್ತೇನೆ ಎಂದು ತಿಳಿಸಿದ್ದಾರೆ. ಇದೇ ಪ್ರಕರಣ ಸಂಬಂಧ ಹಾರ್ದಿಕ್ ಪಟೇಲ್ ಅವರನ್ನು 2019ರ ಜನವರಿ 24ರಂದು ಸಾರ್ಥನಾ ಪೊಲೀಸ್ ಬಂಧಿಸಿದ್ದರು. ಅಲ್ಲದೇ, ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದರು. ಈ ಪ್ರಕರಣದಲ್ಲಿ ಜಿಲ್ಲಾಧಿಕಾರಿ ಸೇರಿದಂತೆ 8ರಿಂದ 10 ಸಾಕ್ಷಿಗಳ ಹೇಳಿಕೆಯನ್ನೂ ದಾಖಲಿಸಲಾಗಿತ್ತು.