ನವದೆಹಲಿ: ಕ್ರಿಮಿನಲ್ ಪ್ರಕರಣದ ಸಾಕ್ಷಿಗಳಿಗೆ ಪೊಲೀಸ್ ಠಾಣೆಯೊಳಗೆ ಬೋಧನೆ ನೀಡಿರುವುದು ಆಘಾತಕಾರಿ ಎಂದು ಹೇಳಿರುವ ಸುಪ್ರೀಂ ಕೋರ್ಟ್, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ತಮಿಳುನಾಡು ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿದೆ.
ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಹಾಗೂ ಪಂಕಜ್ ಮಿಥಾಲ್ ಅವರಿದ್ದ ವಿಭಾಗೀಯ ಪೀಠ, ಇಡ್ಲಿ ವಿಚಾರವಾಗಿ ನಡೆದ ಗಲಾಟೆಯಲ್ಲಿ ಕೊಲೆ ಮಾಡಿದ ಆರೋಪದ ಮೇಲೆ ಇಬ್ಬರು ಆರೋಪಿಗಳ ವಿರುದ್ಧ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಶುಕ್ರವಾರ ರದ್ದುಗೊಳಿಸಿದೆ. ಹಾಗೂ ಪ್ರಕರಣದ ಸಾಕ್ಷಿಗಳಿಗೆ ಬೋಧನೆ ನೀಡಿರುವ ನಿರ್ಣಾಯಕ ಅಂಶವನ್ನು ವಿಚಾರಣಾ ನ್ಯಾಯಾಲಯ ಹಾಗೂ ಹೈಕೋರ್ಟ್ ಕಡೆಗಣಿಸಿರುವುದು ಆಶ್ಚರ್ಯಕರವಾಗಿದೆ. ಪ್ರಾಸಿಕ್ಯೂಷನ್ ಸಾಕ್ಷಿಗಳಿಗೆ ಬೋಧಿಸಲು ಪೊಲೀಸರಿಗೆ ಅನುಮತಿ ಇಲ್ಲ. ಇದು ಪೊಲೀಸರಿಂದ 'ಅಧಿಕಾರದ ಸಂಪೂರ್ಣ ದುರುಪಯೋಗ'ವಾಗಿದೆ ಎಂದು ಹೇಳಿದೆ.
ಪೊಲೀಸ್ ಠಾಣೆಯೊಳಗೆ ಸಾಕ್ಷಿಗಳಿಗೆ ಬೋಧನೆ ಮಾಡಿರುವುದರ ಪರಿಣಾಮವನ್ನು ಯಾರಾದರೂ ಸಮಂಜಸವಾಗಿ ಊಹಿಸಬಹುದು. ಪ್ರಕರಣದ ಸಾಕ್ಷಿಗಳಿಗೆ ಪೊಲೀಸರು ಬೋಧನೆ ಮಾಡಿರುವುದು ಅವಿವೇಕದ ಕೃತ್ಯವಾಗಿದೆ. ಅವರೆಲ್ಲರೂ ಆಸಕ್ತ ಸಾಕ್ಷಿಗಳಾಗಿದ್ದರು. ಪ್ರಕರಣದಲ್ಲಿ ಇತರ ಪ್ರತ್ಯಕ್ಷ ಸಾಕ್ಷಿಗಳು ಲಭ್ಯವಿದ್ದರೂ ಪೊಲೀಸರು ಅವರನ್ನು ತಡೆಹಿಡಿದಿರುವುದನ್ನು ಸುಪ್ರೀಂ ಕೋರ್ಟ್ ಗಮನಿಸಿದೆ. ಸಾಕ್ಷಿಗಳಿಗೆ ಹಿಂದಿನ ದಿನವೇ ಪೊಲೀಸರು ಬೋಧನೆ ಮಾಡಿರುವ ಸಾಧ್ಯೆತಗಳಿರುವುದರಿಂದ ಅವರ ಸಾಕ್ಷ್ಯವನ್ನು ತಿರಸ್ಕರಿಸಬೇಕಾಗುತ್ತದೆ. ನ್ಯಾಯಾಂಗ ಪ್ರಕ್ರಿಯೆಯಲ್ಲಿ ಪೊಲೀಸರ ಈ ರೀತಿಯ ಹಸ್ತಕ್ಷೇಪ ಆಘಾತಕಾರಿಯಾಗಿದೆ ಎಂದು ಪೀಠವು ಆದೇಶದಲ್ಲಿ ಹೇಳಿದೆ.
ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಪ್ರಾಸಿಕ್ಯೂಷನ್ ಸಾಕ್ಷಿಗಳಿಗೆ ಬೋಧನೆ ಮಾಡಿರುವ ಪೊಲೀಸ್ ಅಧಿಕಾರಿಗಳ ವರ್ತನೆಯ ಬಗ್ಗೆ ವಿಚಾರಣೆ ನಡೆಸುವಂತೆ ತಮಿಳುನಾಡು ರಾಜ್ಯದ ಪೊಲೀಸ್ ಮಹಾನಿರ್ದೇಶಕರಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಪೀಠ ಹೇಳಿದೆ.
ಆರೋಪಿಗಳು ಘಟನೆಯ ಸಮಯದಲ್ಲಿ ಆ ಸ್ಥಳದಲ್ಲಿ ಇರಲಿಲ್ಲ ಎಂಬುದನ್ನು ಕ್ರಾಸ್ ಎಕ್ಸಾಮಿನೇಷನ್ನಲ್ಲಿ ಗಮನಿಸಬಹುದು. ಇಬ್ಬರು ಆರೋಪಿಗಳಲ್ಲಿ ಒಬ್ಬರು ತಿರುಪುರ್ ಎಂಬ ಇನ್ನೊಂದು ಗ್ರಾಮದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಾಸಿಕ್ಯೂಷನ್ ಸಾಕ್ಷಿ ಒಪ್ಪಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಸ್ವತಂತ್ರ ಸಾಕ್ಷಿಗಳು ಲಭ್ಯವಿದ್ದರೂ ಅವರನ್ನು ಪ್ರಾಸಿಕ್ಯೂಷನ್ ಪರಿಶೀಲಿಸಲಿಲ್ಲ ಎಂದು ಪೀಠ ಹೇಳಿದೆ. ಮೇಲ್ಮನವಿದಾರರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವ ಮೊದಲು, ಅವರು 10 ವರ್ಷಗಳಿಗೂ ಹೆಚ್ಚು ಕಾಲ ಜೈಲುವಾಸ ಅನುಭವಿಸಿದ್ದರು ಎಂಬುದನ್ನು ಸುಪ್ರೀಂ ಕೋರ್ಟ್ ಗಮನಿಸಿದೆ.
ಪ್ರಾಸಿಕ್ಯೂಷನ್ ಪ್ರಕಾರ, ಆರೋಪಿಗಳಾದ ಮಣಿಕಂಠನ್ ಹಾಗೂ ಶಿವಕುಮಾರ್ ಅವರು 2017ರ ಅಕ್ಟೋಬರ್ 4ರಂದು ಬಾಲಮುರುಗನ್ ಎಂಬ ವ್ಯಕ್ತಿಯನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಮಣಿಕಂಠನ್ ಅವರ ಮನೆಯಲ್ಲಿ ಇಡ್ಲಿ ವಿತರಿಸುವ ಬಗ್ಗೆ ಉಂಟಾದ ಗಲಾಟೆಯ ಬಳಿಕ ಬಾಲಮುರುಗನ್ ಅವರನ್ನು ಕೊಲೆ ಮಾಡಲಾಯಿತು.
ಇದನ್ನೂ ಓದಿ: ವಿಪತ್ತು ಪರಿಹಾರ ನಿಧಿಗಾಗಿ ಕೇಂದ್ರದ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ತಮಿಳುನಾಡು - Disaster Relief Fund