ಅಹಮದಾಬಾದ್: ಅನೇಕ ಬಾರಿ ಮಕ್ಕಳು ಏನು ತಿನ್ನುತ್ತಾರೆ ಎಂಬುದರ ಬಗ್ಗೆ ಪೋಷಕರು ಹೆಚ್ಚಿನ ಗಮನ ನೀಡುವುದಿಲ್ಲ. ಕೈಗೆ ಸಿಕ್ಕಿದ್ದನ್ನು ಬಾಯಿಗೆ ಹಾಕಿಕೊಳ್ಳುವ ಮಕ್ಕಳು ಜೀವಕ್ಕೆ ಕುತ್ತು ತಂದುಕೊಳ್ಳುವ ಸಾಧ್ಯತೆಗಳಿರುತ್ತವೆ. ಅದಕ್ಕೆ ಉದಾಹರಣೆ ಈ ಘಟನೆ. ರಾಜಸ್ಥಾನದಲ್ಲಿ ಒಂದು ವರ್ಷದ ಮಗುವೊಂದು ಜೋಳದ ಕಾಳೊಂದನ್ನು ಬಾಯಿಗೆ ಹಾಕಿಕೊಂಡು, ಜೀವನ್ಮರಣದ ಹೋರಾಟ ನಡೆಸಿ, ವೈದ್ಯರ ಸಮಯಪ್ರಜ್ಞೆಯಿಂದ ಬದುಕುಳಿದಿದೆ.
'ವೈದ್ಯೋ ನಾರಾಯಣೋ ಹರಿ' ಎಂಬಂತೆ ಅಹಮದಾಬಾದ್ನ ಸಿವಿಲ್ ಆಸ್ಪತ್ರೆಯ ಮಕ್ಕಳ ವಿಭಾಗದ ತಜ್ಞರಾದ ಡಾ.ರಾಕೇಶ್ ಜೋಶಿ ಮಗುವಿಗೆ ಬೈನಾಕ್ಯೂಲರ್ ನಡೆಸಿ, ಶ್ವಾಸಕೋಶದಲ್ಲಿ ಸಿಲುಕಿದ್ದ ಜೋಳದ ಕಾಳನ್ನು ಹೊರತೆಗೆದು, ಮಗುವಿನ ಪ್ರಾಣ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೊಸ ಜನ್ಮ ಪಡೆದ ಮಗು: ರಾಜಸ್ಥಾನದ ರಾಜಸ್ಮಂದ್ ಮೂಲದ ಕನ್ಸಿಂಗ್ ರಾವತ್ ಮತ್ತು ಸಂತೋಷ ದೇವಿ ಮಧ್ಯಮ ವರ್ಗದ ಕುಟುಂಬದ ದಂಪತಿಗಳಾಗಿದ್ದು, ಅವರ ಒಂದು ವರ್ಷದ ಮಗುವು ಆಟವಾಡುವಾಗ ಜೋಳದ ಕಾಳು ಬಾಯಿಗೆ ಹಾಕಿಕೊಂಡಿತ್ತು. ಇದರಿಂದ ಮಗುವಿನ ಉಸಿರಾಟಕ್ಕೆ ತೊಂದರೆ ಉಂಟಾಗಿತ್ತು. ಬಳಿಕ ದಂಪತಿಯು ಅಜ್ಮೀರ್ನ ಬೈವಾರ್ನ ಮಕ್ಕಳ ತಜ್ಞರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಸಿಟಿ ಸ್ಕ್ಯಾನ್ ಮಾಡಿದಾಗ ಮಗುವಿನ ಶ್ವಾಸಕೋಶದಲ್ಲಿ ಜೋಳದ ಕಾಳು ಇರುವುದನ್ನು ಕಂಡು ತಕ್ಷಣಕ್ಕೆ ಮಗುವನ್ನು ಅಹಮದಾಬಾದ್ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚನೆ ನೀಡಿದ್ದಾರೆ.
ತಕ್ಷಣಕ್ಕೆ ಕಾರ್ಯಪ್ರವೃತ್ತರಾದ ವೈದ್ಯರು: ಮಗುವಿನ ಸ್ಥಿತಿ ಗಮನಿಸಿದ ಅಹಮದಾಬಾದ್ ಸಿವಿಲ್ ಆಸ್ಪತ್ರೆಯ ವೈದ್ಯರಿಗೆ ಮಗು ಏನೋ ಸೇವಿಸಿದ ಬಳಿಕ ಅದಕ್ಕೆ ಕೆಮ್ಮು ಮತ್ತು ಉಸಿರಾಟ ಸಮಸ್ಯೆ ಶುರುವಾಗಿರುವುದು ಗೊತ್ತಾಗಿದೆ. ತಕ್ಷಣಕ್ಕೆ ಮಕ್ಕಳ ತಜ್ಞ ಡಾ.ರಾಕೇಶ್ ಜೋಶಿ ಮತ್ತು ಅವರ ತಂಡ ಪರೀಕ್ಷೆ ನಡೆಸಿದ್ದಾರೆ. ಮಗುವಿನ ಸ್ಥಿತಿ ಗಂಭೀರವಾಗಿರುವುದನ್ನು ಅರಿತ ವೈದ್ಯರು ತಕ್ಷಣಕ್ಕೆ ಶಸ್ತ್ರ ಚಿಕಿತ್ಸೆಗೆ ಮುಂದಾದರು. ಮಗುವಿಗೆ ಬ್ರೊಕೊಸ್ಕೋಪಿ ಸರ್ಜರಿ ನಡೆಸಿ, ಶ್ವಾಸಕೋಶದಲ್ಲಿದ್ದ ಜೋಳದ ಕಾಳನ್ನು ಹೊರತೆಗೆದಿದ್ದಾರೆ.
ಜೋಳದ ಕಾಳು ಮಗುವಿನ ಶ್ವಾಸನಾಳದಲ್ಲಿ ಸಿಲುಕಿದ್ದ ಪರಿಣಾಮ ಉಸಿರಾಟದ ತೊಂದರೆ ಉಂಟಾಗಿತ್ತು. ಇಂತಹ ಸಂದರ್ಭದಲ್ಲಿ ಶ್ವಾಸಕೋಶದಲ್ಲಿ ರಂಧ್ರಗಳಾಗುವ ಸಾಧ್ಯತೆ ಇರುತ್ತದೆ. ಇದೀಗ ಶಸ್ತ್ರ ಚಿಕಿತ್ಸೆ ಬಳಿಕ ಮಗು ಚೇತರಿಸಿಕೊಳ್ಳಲಾರಂಭಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಚಿಕ್ಕ ಮಕ್ಕಳ ಬಗ್ಗೆ ಬೇಡ ನಿರ್ಲಕ್ಷ್ಯ: ಸಾಮಾನ್ಯವಾಗಿ ಮಕ್ಕಳು ಬಾಯಿಗೆ ಸಿಕ್ಕಿದ್ದನ್ನು ಬಾಯಿಗೆ ಹಾಕಿಕೊಳ್ಳುವ ಅಭ್ಯಾಸ ಹೊಂದಿರುತ್ತಾರೆ. ಈ ಹಿನ್ನೆಲೆಯಲ್ಲಿ ಮೂರು ವರ್ಷದೊಳಗಿನ ಮಕ್ಕಳ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸುವುದು ಅಗತ್ಯ ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ನಾಯಿ ಮರಿಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಮಹಿಳೆಯರು: ಪ್ರಕರಣ ದಾಖಲು