ತೆಲಂಗಾಣ: ಇಲ್ಲಿನ ಪೆದ್ದಪಲ್ಲಿ ಜಿಲ್ಲೆಯ ಧರ್ಮರಾಮ್ ಮಂಡಲದ ಲಂಬಾಡಿ (ಲಂಬಾಣಿ) ತಾಂಡಾ(ಬಿ) ಎಂಬ ಗ್ರಾಮ ಹೆಚ್ಚು ಸರಕಾರಿ ನೌಕರರನ್ನು ಹೊಂದಿರುವ ಜನಪ್ರಿಯತೆ ಗಳಿಸಿದೆ. ಇಲ್ಲಿ 301 ಮನೆಗಳಿವೆ. 1,213 ಜನಸಂಖ್ಯೆ ಇದೆ. ಆದರೆ ರಾಜ್ಯದ ವಿವಿಧ ಇಲಾಖೆಗಳಲ್ಲಿ 61 ನೌಕರರು ಕೆಲಸ ಮಾಡುತ್ತಿದ್ದಾರೆ. ಎಷ್ಟೋ ವರ್ಷಗಳವರೆಗೆ ಕತ್ತಲಲ್ಲೇ ಇದ್ದ ಈ ಗ್ರಾಮವೀಗ ಜಿಲ್ಲೆಗೆ ಮಾದರಿಯಾಗಿದೆ.
1984ರವರೆಗೂ ತಾಂಡಾದಲ್ಲಿ ವಿದ್ಯುತ್ ವ್ಯವಸ್ಥೆ ಇರಲಿಲ್ಲ. ಈ ಮೊದಲು ತಾಂಡಾ ಬಂಜಾರುಪಲ್ಲಿ ಎಂಬ ಪಂಚಾಯಿತಿಗೆ ಹೊಂದಿಕೊಂಡಿತ್ತು. ಆಗ ಶಿಕ್ಷಣಕ್ಕಾಗಿ 8 ಕಿ.ಮೀ. ದೂರ ನಡೆಯುತ್ತಲೇ ಪಟ್ಟಿಪಾಕ ಎಂಬ ಹಳ್ಳಿಗೆ ಹೋಗುವ ಪರಿಸ್ಥಿತಿ. ದಿನನಿತ್ಯ ಅಷ್ಟು ದೂರ ಹೋಗಲು ಸಾಧ್ಯವಾಗದ ಮಕ್ಕಳು, ಯುವಕರು ಅಲ್ಲೇ ಸಮೀಪದ ಬಂಜಾರುಪಲ್ಲಿ, ಪೆರುಕಪಲ್ಲಿ, ಕಾಟಿಕೇನಪಲ್ಲಿ ಗ್ರಾಮಗಳ ರೈತರೊಂದಿಗೆ ಕೆಲಸ ಮಾಡಲಾರಂಭಿಸಿದ್ದರು. ಕೆಲವು ವರ್ಷಗಳ ಹಿಂದೆ ಪಟ್ಟಿಪಾಕ ಶಾಲೆಯಲ್ಲಿ ಇದೇ ತಾಂಡಾದ ನಾಲ್ವರು ಯುವಕರು 10ನೇ ತರಗತಿ ಮುಗಿಸಿದ್ದರು. ನಂತರ ಅವರಿಗೆ ಸರ್ಕಾರಿ ನೌಕರಿ ದೊರೆಯುತ್ತದೆ. ಇಲ್ಲಿಂದ ತಾಂಡಾ 'ಸರಕಾರಿ ನೌಕರರ ತಾಂಡ'ವಾಗಿ ಅಭಿವೃದ್ಧಿ ಪಥದತ್ತ ಸಾಗುತ್ತದೆ.
ಇದೇ ಯುವಕರು ತಮ್ಮ ಗೆಳೆಯರಿಗೆ ಶಿಕ್ಷಣದ ಮೌಲ್ಯ ತಿಳಿಸಿ ಅವರಲ್ಲಿ ಜಾಗೃತಿ ಮೂಡಿಸಲು ಆರಂಭಿಸುತ್ತಾರೆ. ಪೋಷಕರು ತಮ್ಮ ಮಕ್ಕಳನ್ನು ಶಾಲೆಗಳಿಗೆ ಸೇರಿಸಲು ಪ್ರಾರಂಭಿಸಿದರು. ತಾಂಡಾದಲ್ಲಿ ಎಲ್ಲರೂ ತರಕಾರಿ ಕೃಷಿ ಆರಂಭಿಸಿ, ಬಂದ ಆದಾಯದಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಿಸೋಕೆ ಶುರು ಮಾಡಿದರು. ಮಕ್ಕಳೂ ಕೂಡ ತಂದೆ-ತಾಯಿಯ ಕಷ್ಟವನ್ನು ಅರ್ಥ ಮಾಡಿಕೊಂಡು ಪರಿಶ್ರಮ ಹಾಕಿ ಓದುತ್ತಿದ್ದರು. ಇದರ ಫಲವಾಗಿ ಗ್ರಾಮದ ಯುವಕರಿಗೆಲ್ಲ ಇಂದು ಉದ್ಯೋಗ ಸಿಕ್ಕಿದೆ. ಪ್ರಸ್ತುತ ತಾಂಡಾದಲ್ಲಿ 60ಕ್ಕೂ ಹೆಚ್ಚು ಮಂದಿ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಶೈಕ್ಷಣಿಕ ಅಭಿವೃದ್ಧಿ ಮಾತ್ರವಲ್ಲದೆ ಎಲ್ಲ ರೀತಿಯಲ್ಲೂ ತಾಂಡಾ ಪ್ರಗತಿ ಪಥದಲ್ಲಿ ಸಾಗುತ್ತಿದೆ. ಬೆಳಕೇ ಇಲ್ಲದ ಗ್ರಾಮದ ಚಹರೆ ಸಂಪೂರ್ಣ ಬದಲಾಗಿದೆ.
ಗ್ರಾಮದಲ್ಲಿ 11 ಶಿಕ್ಷಕರು, ಇಬ್ಬರು ಕಿರಿಯ ಉಪನ್ಯಾಸಕರು, ಒಬ್ಬ ಪದವಿ ಉಪನ್ಯಾಸಕರು, 16 ಪೊಲೀಸ್ ಕಾನ್ಸ್‌ಟೇಬಲ್‌ಗಳು, ವೈದ್ಯಕೀಯ ವಿಭಾಗದಲ್ಲಿ ಇಬ್ಬರು, ಸೇನೆಯಲ್ಲಿ ನಾಲ್ವರು, ಆರ್‌ಟಿಸಿಯಲ್ಲಿ ನಾಲ್ವರು, ವಿದ್ಯುತ್ ಇಲಾಖೆಯಲ್ಲಿ ನಾಲ್ವರು, ಸಿಂಗರೇಣಿಯಲ್ಲಿ 8 ಜನ, ಕೇಂದ್ರ ಸರ್ಕಾರದ ಉದ್ಯೋಗಗಳಲ್ಲಿ ನಾಲ್ವರು ಸೇರಿದಂತೆ ಇತರ ಇಲಾಖೆಗಳಲ್ಲಿ ಯುವಕರು ಕಾರ್ಯನಿರ್ವಹಿಸುತ್ತಿದ್ದಾರೆ. ಇಬ್ಬರು ಮಾತ್ರ ಖಾಸಗಿ ಉದ್ಯೋಗಿಯಾಗಿದ್ದಾರೆ. ನಾಲ್ವರು ಈಗಾಗಲೇ ನಿವೃತ್ತಿಯಾಗಿದ್ದಾರೆ. ಇದರ ನಡುವೆ ಹತ್ತಾರು ಮಂದಿ ವಿವಿಧ ರೀತಿ ಸರ್ಕಾರಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ.
ಇದನ್ನೂ ಓದಿ: ರಕ್ಷಾ ಬಂಧನ: ಚಿನ್ನ, ಬೆಳ್ಳಿ, ವಜ್ರದ ರಾಖಿ ಖರೀದಿಸಿದ ಸಹೋದರಿಯರು - Raksha Bandhan 2024