ನವದೆಹಲಿ: ಆಮ್ ಆದ್ಮಿ ಪಕ್ಷದ ರಾಜ್ಯಸಭೆ ಸಂಸದೆ ಸ್ವಾತಿ ಮಲಿವಾಲ್ ಮೇಲೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಬಿಭವ್ ಕುಮಾರ್ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಮತ್ತೊಂದು ತಿರುವು ಪಡೆದಿದೆ. ಬಿಭವ್ ಕುಮಾರ್ ವಿರುದ್ಧ ಮಲಿವಾಲ್ ಮಾಡಿರುವ ಈ ಆರೋಪವನ್ನು ಆಮ್ ಆದ್ಮಿ ಪಕ್ಷವು ಈಗಾಗಲೇ ಆಧಾರ ರಹಿತ ಎಂದು ತಳ್ಳಿಹಾಕಿದೆ. ಇದೀಗ ಎಎಪಿ 'ಗೂಂಡಾಗಳ ಒತ್ತಡ'ಕ್ಕೆ ಮಣಿಯುತ್ತಿದೆ ಮತ್ತು ನನ್ನ ನಡವಳಿಕೆಯನ್ನೇ ಪ್ರಶ್ನಿಸಲಾಗುತ್ತಿದೆ ಎಂದು ಸ್ವಾತಿ ಮಲಿವಾಲ್ ಆರೋಪಿಸಿದ್ದಾರೆ.
-
कल पार्टी के एक बड़े नेता का फोन आया। उसने बताया कैसे सब पर बहुत ज़्यादा दबाव है, स्वाति के ख़िलाफ़ गंदी बातें बोलनी हैं, उसकी पर्सनल फ़ोटोज़ लीक करके उसे तोड़ना है। ये बोला जा रहा है कि जो उसको सपोर्ट करेगा उसको पार्टी से निकाल देंगे। किसी को PC करने की और किसी को ट्वीट्स करने…
— Swati Maliwal (@SwatiJaiHind) May 22, 2024
ಮೇ 13ರಂದು ದೆಹಲಿ ಸಿಎಂ ನಿವಾಸದ ಕ್ಯಾಂಪ್ ಕಚೇರಿಗೆ ಭೇಟಿ ನೀಡಿದಾಗ ತನ್ನ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಸ್ವಾತಿ ಮಲಿವಾಲ್ ಆರೋಪಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಿಭವ್ ಕುಮಾರ್ ಬಂಧನಕ್ಕೆ ಒಳಗಾಗಿ, ಐದು ದಿನಗಳ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಈಗ ಆಪ್ ವಿರುದ್ಧ ಮತ್ತಷ್ಟು ವಾಗ್ದಾಳಿ ಮುಂದುವರೆಸಿರುವ ಮಲಿವಾಲ್, ''ನಿನ್ನೆ ನನಗೆ ಪಕ್ಷದ ಹಿರಿಯ ನಾಯಕರಿಂದ ಕರೆ ಬಂದಿತ್ತು. ಸ್ವಾತಿ ವಿರುದ್ಧ ಕೊಳಕು ಮಾತನಾಡಬೇಕು ಎಂದು ಪಕ್ಷದ ಎಲ್ಲರ ಮೇಲೆ ಹೇಗೆ ಒತ್ತಡ ಇದೆ. ವೈಯಕ್ತಿಕ ಫೋಟೋಗಳನ್ನು ಹರಿಬಿಟ್ಟು ಆಕೆಯನ್ನು ಕುಗ್ಗಿಸಬೇಕು ಎಂಬ ತಂತ್ರ ನಡೆಯುತ್ತಿದೆ. ಯಾರೇ ಬೆಂಬಲಿಸಿದರೂ ಅವರನ್ನು ಪಕ್ಷದಿಂದ ಉಚ್ಚಾಟಿಸುವ ಬೆದರಿಕೆ ಹಾಕಲಾಗಿದೆ ಎಂಬುವುದಾಗಿ ಹೇಳಿದ್ದಾರೆ'' ಎಂದು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅಲ್ಲದೇ, ''ಕೆಲವರಿಗೆ ಮಾಧ್ಯಮಗೋಷ್ಠಿ, ಮತ್ತೆ ಕೆಲವರಿಗೆ ಟ್ವೀಟ್ ಮಾಡುವ ಹಾಗೂ ಇನ್ನು ಕೆಲವರಿಗೆ ಅಮೆರಿಕದಲ್ಲಿ ಕುಳಿತಿರುವ ಸ್ವಯಂಸೇವಕರಿಗೆ ಕರೆ ಮಾಡಿ, ನನ್ನ ವಿರುದ್ಧ ಟೀಕೆ ಮಾಡುವ ಕರ್ತವ್ಯ ನೀಡಲಾಗಿದೆ. ಇಷ್ಟೇ ಅಲ್ಲ, ಆರೋಪಿಗೆ ಹತ್ತಿರವಿರುವ ಕೆಲವು ಬೀಟ್ ವರದಿಗಾರರು ಕೆಲವು ನಕಲಿ ಚುಟುಕು ಕಾರ್ಯಾಚರಣೆಗಳನ್ನು ಸಿದ್ಧಪಡಿಸುವ ಕೆಲಸ ಮಾಡುತ್ತಿದ್ದಾರೆ. ನೀವು ಸಾವಿರಾರು ಸೇನೆವನ್ನು ಬೆಳೆಸಬಹುದು. ನಾನು ಅದನ್ನು ಏಕಾಂಗಿಯಾಗಿ ಎದುರಿಸುತ್ತೇನೆ. ಏಕೆಂದರೆ ಸತ್ಯವು ನನ್ನೊಂದಿಗಿದೆ. ನನಗೆ ಅವರ ಮೇಲೆ ಕೋಪವಿಲ್ಲ. ಆರೋಪಿ ತುಂಬಾ ಶಕ್ತಿಶಾಲಿ ವ್ಯಕ್ತಿ. ದೊಡ್ಡ ದೊಡ್ಡ ನಾಯಕರೂ ಆತನಿಗೆ ಹೆದರುತ್ತಾರೆ. ಆತನ ವಿರುದ್ಧ ನಿಲುವು ತಳೆಯುವ ಧೈರ್ಯ ಯಾರಿಗೂ ಇಲ್ಲ'' ಎಂದು ಟೀಕಾಪ್ರಹಾರ ನಡೆಸಿದ್ದಾರೆ.
ಮುಂದುವರೆದು, ''ದೆಹಲಿಯ ಮಹಿಳಾ ಸಚಿವರು ನಗುಮೊಗದಿಂದ ಪಕ್ಷದ ಹಿರಿಯ ಮಹಿಳಾ ಸಹೋದ್ಯೋಗಿಯ ನಡವಳಿಕೆವನ್ನು ಕೆಣಕುತ್ತಿರುವುದು ನನಗೆ ಬೇಸರ ತಂದಿದೆ. ನನ್ನ ಸ್ವಾಭಿಮಾನಕ್ಕಾಗಿ ಹೋರಾಟ ಆರಂಭಿಸಿದ್ದೇನೆ, ನ್ಯಾಯ ಸಿಗುವವರೆಗೂ ಹೋರಾಟ ನಡೆಸುತ್ತೇನೆ. ಈ ಹೋರಾಟದಲ್ಲಿ ನಾನು ಸಂಪೂರ್ಣವಾಗಿ ಒಂಟಿಯಾಗಿದ್ದೇನೆ. ಆದರೂ, ಅದನ್ನು ನಾನು ಬಿಟ್ಟುಕೊಡುವುದಿಲ್ಲ'' ಎಂದು ಮಲಿವಾಲ್ ತಮ್ಮ ಪೋಸ್ಟ್ನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ದೆಹಲಿ ಸಿಎಂ ಕಚೇರಿ ಸಿಬ್ಬಂದಿಯಿಂದ ಅನುಚಿತ ವರ್ತನೆ: ಎಎಪಿ ನಾಯಕಿ ಸ್ವಾತಿ ಮಾಲಿವಾಲ್ ಆರೋಪ