ನವಸಾರಿ (ಗುಜರಾತ್): ಜಿಲ್ಲೆಯ ಹೋಟೆಲ್‌ವೊಂದರಲ್ಲಿ ಯುವತಿಯೊಬ್ಬಳ ನಿಗೂಢ ಸಾವು ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗ ಯುವತಿಗೆ ರಕ್ತಸ್ರಾವವಾಗಿ ಮೃತಪಟ್ಟಿದ್ದು, ಇದಕ್ಕೆ ಕಾರಣವಾದ ಯುವಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಮೃತ ಯುವತಿ ಮತ್ತು ಆರೋಪಿ ಯುವಕ 2 ವರ್ಷದಿಂದ ಪ್ರೀತಿಸುತ್ತಿದ್ದು, ಸೆಪ್ಟೆಂಬರ್ 23 ರಂದು ಹೋಟೆಲ್ಗೆ ಹೋಗಿದ್ದಾಗ ಪ್ರಣಯದಲ್ಲಿ ತೊಡಗಿದ್ದಾರೆ. ಈ ವೇಳೆ ಯುವತಿಗೆ ರಕ್ತಸ್ರಾವವಾಗಿದೆ. ಏನು ಮಾಡಬೇಕೆಂದು ತಿಳಿಯದ ಯುವಕ ಕಾಲಹರಣ ಮಾಡಿದ್ದರಿಂದ, ಯುವತಿ ನಿಶ್ಯಕ್ತಳಾಗಿ ಸಾವಿಗೀಡಾಗಿದ್ದಾಳೆ.
ಪ್ರಕರಣದ ವಿವರ: ಚಿಖಾಲಿಯ ನೊಗಮಾ ಗ್ರಾಮದ ನಿವಾಗಿಯಾಗಿರುವ ಆರೋಪಿ ಯುವಕ ಭಾರ್ಗವ್ ನರೇಂದ್ರಭಾಯ್ ಪಟೇಲ್ (26) ಅದೇ ಗ್ರಾಮದ ಯುವತಿಯನ್ನು 2 ವರ್ಷದಿಂದ ಪ್ರೀತಿಸುತ್ತಿದ್ದ. ಸೆಪ್ಟೆಂಬರ್ 23 ರಂದು ಇಬ್ಬರೂ, ನವಸಾರಿ ನಗರದ ಹೊಟೇಲ್‌ವೊಂದಕ್ಕೆ ತೆರಳಿದ್ದಾರೆ. ಯುವಕ ಗೆಳತಿಯೊಂದಿಗೆ ಸಂಭೋಗ ನಡೆಸಿದಾಗ, ಆಕೆಯ ಖಾಸಗಿ ಅಂಗದಲ್ಲಿ ರಕ್ತಸ್ರಾವ ಉಂಟಾಗಿದೆ. ಇದರಿಂದ ಹೆದರಿದ ಯುವಕ ರಕ್ತ ಬರುವುದನ್ನು ನಿಲ್ಲಿಸುವ ವಿಧಾನದ ಬಗ್ಗೆ ಗೂಗಲ್‌ನಲ್ಲಿ ಹುಡುಕಾಡಿದ್ದಾನೆ. 2 ಗಂಟೆಗೂ ಅಧಿಕ ಕಾಲ ಕಾಲಹರಣ ಮಾಡಿದ್ದಾರೆ.
ಇದರಿಂದ ಯುವತಿ ತೀವ್ರ ಅಸ್ವಸ್ಥಳಾಗಿದ್ದಾಳೆ. ಬಳಿಕ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿದೆ. ತಪಾಸಣೆ ನಡೆಸಿದ ವೈದ್ಯರು ಯುವತಿ ಸಾವನ್ನಪ್ಪಿದ್ದಾಗಿ ತಿಳಿಸಿದ್ದಾರೆ. ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದ್ದು, ಯುವತಿಯ ತಂದೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.
ಕಾಲಹರಣ ಮಾಡಿದ ಯುವಕ: ಇನ್ನು, ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠ ಸುಶೀಲ್ ಅಗರ್ವಾಲ್, ಆರೋಪಿ ಯುವಕ ಯುವತಿಯ ಜೊತೆ ಖಾಸಗಿ ಸಮಯ ಕಳೆಯುತ್ತಿದ್ದಾಗ ಅಚಾತುರ್ಯ ನಡೆದಿದೆ. ಲೈಂಗಿಕ ಸಂಭೋಗದ ವೇಳೆ ಯುವತಿಗೆ ರಕ್ತಸ್ರಾವವಾದಾಗ, ಆಕೆಯನ್ನು ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಬರಬೇಕಿತ್ತು. ಆದರೆ, ಯುವಕ ಗೂಗಲ್‌ನಲ್ಲಿ ಹುಡುಕಾಡಿದ್ದಾನೆ. ಇದರಿಂದ ಯುವತಿ ತೀವ್ರ ರಕ್ತಸ್ರಾವಕ್ಕೀಡಾಗಿ ಸಾವನ್ನಪ್ಪಿದ್ದಾಳೆ ಎಂದು ತಿಳಿಸಿದ್ದಾರೆ.
ಯುವತಿಯನ್ನು ಸರ್ಕಾರಿ ಆಸ್ಪತ್ರೆಗೆ ಕರೆತಂದ ಕೂಡಲೇ ವೈದ್ಯರು ಆಕೆ ಮೃತಪಟ್ಟಿದ್ದಾಳೆ ಎಂದು ಘೋಷಿಸಿದರು. ಆಕೆಯ ದೇಹದಿಂದ ಮೂರನೇ ಒಂದು ಭಾಗದಷ್ಟು ರಕ್ತ ಸೋರಿಕೆಯಾಗಿದೆ ಎಂದು ತಿಳಿಸಿದ್ದಾರೆ. ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ ಯುವಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ವೈದ್ಯರು ಹೇಳಿದ್ದೇನು?: ಮೊದಲ ಬಾರಿಗೆ ಲೈಂಗಿಕ ಕ್ರಿಯೆ ನಡೆಸಿದಾಗ ಯುವತಿಗೆ ರಕ್ತಸ್ರಾವವಾಗುವುದು ಸಹಜ. ಅಂತಹ ಪರಿಸ್ಥಿತಿಯಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಪ್ರಕರಣದಲ್ಲಿ ಆರೋಪಿ ಯುವಕ ರಕ್ತಸ್ರಾವವಾದರೂ ನಿರ್ಲಕ್ಷ್ಯ ತೋರಿದ್ದಾನೆ. ರಕ್ತ ನಿಲ್ಲಿಸುವ ಬಗ್ಗೆ ಗೂಗಲ್‌ನಲ್ಲಿ ಹುಡುಕಾಡಿದ್ದಾನೆ. ಇದರ ಬದಲು ಆಕೆಯನ್ನು ತಕ್ಷಣವೇ ಆಸ್ಪತ್ರೆಗೆ ಕರೆತಂದಿದ್ದರೆ ಬದುಕಿಸಬಹುದಿತ್ತು ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: 'ಕನಿಷ್ಠ ದೇವರನ್ನಾದರೂ ರಾಜಕೀಯದಿಂದ ದೂರವಿಡಿ': ತಿರುಪತಿ ಲಡ್ಡು ವಿವಾದದ ಬಗ್ಗೆ ಸುಪ್ರೀಕೋರ್ಟ್ ಬೇಸರ - Tirupati laddu row