ವಯನಾಡ್: ವಯನಾಡ್‌ನಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಭೂಕುಸಿತದಿಂದಾಗಿ ತನ್ನ ಕುಟುಂಬದ 9 ಸದಸ್ಯರನ್ನು ಕಳೆದುಕೊಂಡಿದ್ದ ಯುವತಿಗೆ ಇದೀಗ ಮತ್ತೊಂದು ಆಘಾತವಾಗಿದೆ. ಭೀಕರ ಪ್ರವಾಹದಲ್ಲಿ ಬದುಕುಳಿದ ಶೃತಿ ಎಂಬವರು ರಸ್ತೆ ಅಪಘಾತದಲ್ಲಿ ತನ್ನ ಭಾವಿ ಗಂಡನನ್ನೂ ಕಳೆದುಕೊಂಡಿದ್ದಾರೆ.
ಅಪಘಾತದಲ್ಲಿ ಶೃತಿ ಕಾಲಿಗೂ ಗಾಯವಾಗಿದೆ. ಜೊತೆಗಿದ್ದ ಸಹೋದರ ಸಂಬಂಧಿ ಸಣ್ಣಪುಟ್ಟ ಗಾಯಗಳಿಂದ ಅಪಾಯದಿಂದ ಪಾರಾಗಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಕೇರಳ ಪೊಲೀಸರು, ಕೋಝಿಕ್ಕೋರ್-ಕೊಳ್ಳಗಲ್ ರಾಷ್ಟ್ರೀಯ ಹೆದ್ದಾರಿ ವೆಲ್ಲರಂಕುನ್ನು ಎಂಬಲ್ಲಿ ಖಾಸಗಿ ಬಸ್ ಮತ್ತು ವ್ಯಾನ್ ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಜೆನ್ಸನ್ ಮೃತಪಟ್ಟಿದ್ದಾರೆ. ಕಾಲಿನ ಗಾಯಕ್ಕೆ ತುತ್ತಾಗಿರುವ ಯುವತಿ ಕಳೆದೆರಡು ತಿಂಗಳ ಹಿಂದೆ ಮುಂಡಕೈ-ಚೂರಲ್ಮಲಾದ ಭೂಕುಸಿತದಲ್ಲಿ ತನ್ನ ಪೋಷಕರು, ಸಹೋದರಿಯರು ಸೇರಿದಂತೆ ಒಟ್ಟು 9 ಜನರನ್ನು ಕಳೆದುಕೊಂಡಿದ್ದರು. ಭಾವಿ ಪತಿಯೊಂದಿಗೆ ಕಾರಿನಲ್ಲಿ ಹೋಗುತ್ತಿದ್ದಾಗ ಇದೀಗ ಮತ್ತೊಂದು ದುರಂತ ಸಂಭವಿಸಿ ಅವರನ್ನೂ ಕಳೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಜೆನ್ಸನ್ ಮತ್ತವರ ಸ್ನೇಹಿತರು ಲಿಖಿಟಿ ಕಡೆಗೆ ಪ್ರಯಾಣಿಸುತ್ತಿದ್ದರು. ಕೋಝಿಕ್ಕೋಡ್ನಿಂದ ಸುಲ್ತಾನ್ ಬತೇರಿ ಕಡೆಗೆ ಸಾಗುತ್ತಿದ್ದಾಗ ಬಸ್ ಡಿಕ್ಕಿ ಹೊಡೆದಿದೆ. ವಾಹನದಡಿ ಸಿಲುಕಿದ್ದವರನ್ನು ಅಗ್ನಿಶಾಮಕ ತಂಡ ಹೊರಗೆಳೆದು ರಕ್ಷಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವ್ಯಾನ್ನಲ್ಲಿ 9 ಮಂದಿ ಪ್ರಯಾಣಿಸುತ್ತಿದ್ದರು. ಜೆನ್ಸನ್ ವಾಹನ ಚಲಾಯಿಸುತ್ತಿದ್ದರು. ಈ ಅಪಘಾತದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಇದನ್ನೂ ಓದಿ: ವಯನಾಡು ದುರಂತಕ್ಕೆ ಒಂದು ತಿಂಗಳು: ಚೇತರಿಕೆ ಹಾದಿಯಲ್ಲಿ ಜನರು, ಉತ್ತಮ ಬದುಕಿನ ಭರವಸೆ