ತಿರುವನಂತಪುರಂ: ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕಂಡರಿಯದ ಭೂಕುಸಿತಕ್ಕೆ ಒಳಗಾಗಿರುವ ಕೇರಳದ ವಯನಾಡ್‌ನಲ್ಲಿ ಜನರು ತೀವ್ರ ಸಂಕಷ್ಟದಲ್ಲಿದ್ದಾರೆ. ಮನೆಗಳನ್ನು ಕಳೆದುಕೊಂಡು ಸಹಾಯಕ್ಕಾಗಿ ಅಂಗಲಾಚುತ್ತಿರುವ ದೃಶ್ಯಗಳು ಕಂಡುಬಂದಿವೆ. ಇದಕ್ಕಾಗಿ ಫೋನ್ ಕರೆಗಳನ್ನು ಮಾಡುತ್ತಾ ತಮ್ಮನ್ನು ರಕ್ಷಿಸುವಂತೆ ಬೇಡಿಕೊಳ್ಳುತ್ತಿದ್ದಾರೆ.
'ದಯವಿಟ್ಟು ಯಾರಾದರೂ ಬಂದು ನಮ್ಮನ್ನು ರಕ್ಷಿಸಿ': ಪ್ರವಾಹ ಸಂಕಷ್ಟದಲ್ಲಿರುವ ಸಂತ್ರಸ್ತರ ಫೋನ್ ಕರೆಗಳನ್ನು ಸ್ಥಳೀಯ ಟಿವಿ ವಾಹಿನಿಯೊಂದು ಪ್ರಸಾರ ಮಾಡಿದೆ. ಇದರಲ್ಲಿ ಸಂತ್ರಸ್ತರು ಕಣ್ಣೀರಿಡುತ್ತಾ, ತಮ್ಮನ್ನು ಯಾರಾದರೂ ಬಂದು ರಕ್ಷಿಸುವಂತೆ ಮನವಿ ಮಾಡಿದ್ದಾರೆ. "ತಮ್ಮ ಮನೆ ಪ್ರವಾಹದಲ್ಲಿ ಸಿಲುಕಿದ್ದು, ರಸ್ತೆ ಸಂಪರ್ಕ, ಸೇತುವೆಗಳು ನೀರಿನಲ್ಲಿ ಮುಳುಗಿವೆ. ಇಲ್ಲಿಂದ ಪಾರಾಗುವ ಯಾವುದೇ ಮಾರ್ಗ ಕಾಣುತ್ತಿಲ್ಲ" ಎಂದು ಅಳಲು ತೋಡಿಕೊಂಡಿದ್ದಾರೆ.
'ಮನೆ ಸದಸ್ಯರು ಜೀವಂತ ಇದ್ದಾರಾ ಇಲ್ಲವೋ ತಿಳಿಯದು': ಚೂರಲ್ಮಲಾ ಪಟ್ಟಣದಲ್ಲಿ ಮಹಿಳೆಯೊಬ್ಬರು ಕೂಡ ಇದೇ ರೀತಿ ಸಹಾಯಕ್ಕೆ ಅಂಗಲಾಚಿದ್ದಾರೆ. "ಯಾರಾದರೂ ಬಂದು ಸಹಾಯ ಮಾಡಿ. ನಾವು ಮನೆ ಕಳೆದುಕೊಂಡಿದ್ದೇವೆ. ಮನೆ ಸದಸ್ಯರು ಜೀವಂತ ಇದ್ದಾರಾ ಇಲ್ಲವೋ ತಿಳಿಯದು" ಎಂದು ಕಣ್ಣೀರು ಹಾಕಿದ್ದಾರೆ.
'ಇಲ್ಲಿಂದ ಹೊರಬರುವ ದಾರಿ ಕಾಣುತ್ತಿಲ್ಲ': ಚೂರಲ್ಮಲಾದ ಮತ್ತೊಬ್ಬ ವ್ಯಕ್ತಿ, "ನಮಗೇನು ಮಾಡಬೇಕೆಂಬುದೇ ತೋಚುತ್ತಿಲ್ಲ. ಭೂಮಿ ನಡುಗುತ್ತಿದೆ. ಇಲ್ಲಿ ದೊಡ್ಡ ಶಬ್ಧವೂ ಕೇಳಿ ಬರುತ್ತಿದೆ. ಇಲ್ಲಿಂದ ಹೊರಬರುವ ದಾರಿ ಕಾಣುತ್ತಿಲ್ಲ" ಎಂದು ತಮ್ಮ ಅಸಹಾಯಕತೆ ವಿವರಿಸಿದ್ದಾರೆ.
'ಯಾರಾದರೂ ಮೇಪ್ಪಡಿ ಪ್ರದೇಶಕ್ಕೆ ಬಂದರೆ..': ಮುಂಡಕ್ಕೈಯನಲ್ಲಿ ರಕ್ಷಣೆಗಾಗಿ ಕರೆ ಮಾಡಿದ ಮತ್ತೊಬ್ಬರು, "ಹಲವಾರು ಜನರ ಗುಂಪಿನೊಂದಿಗೆ ನಾವು ಪ್ರವಾಹದ ನಡುಗಡ್ಡೆಯಲ್ಲಿ ಸಿಲುಕಿದ್ದು, ಜೀವಕ್ಕಾಗಿ ಹೋರಾಡುತ್ತಿದ್ದೇವೆ. ಯಾರಾದರೂ ಮೇಪ್ಪಡಿ ಪ್ರದೇಶಕ್ಕೆ ಬಂದರೆ, ನೂರಾರು ಜನರನ್ನು ರಕ್ಷಿಸಬಹುದು" ಎಂದು ಹೇಳಿದ್ದಾರೆ.
'ಮರಗಳ ಸಮೇತ ಬೃಹತ್ ಗುಡ್ಡಗಳೇ ಕುಸಿಯುತ್ತಿದ್ದವು': ಘಟನೆಯ ದಾರುಣ ಕಥೆ ಬಿಚ್ಚಿಟ್ಟಿರುವ ವೃದ್ಧರೊಬ್ಬರು, "ನಾವು ರಾತ್ರಿ ನೆಮ್ಮದಿಯಾಗಿ ಮಲಗಿದ್ದೆವು. ತಕ್ಷಣಕ್ಕೆ ದೊಡ್ಡ ಶಬ್ಧ ಕೇಳಿಸಿತು. ನೋಡಿದರೆ, ಮರಗಳ ಸಮೇತ ಬೃಹತ್ ಗುಡ್ಡಗಳೇ ಕುಸಿಯುತ್ತಿದ್ದವು. ಕ್ಷಣಮಾತ್ರದಲ್ಲಿ ಪ್ರವಾಹದ ನೀರು ಮನೆಯೊಳಗೆ ನುಗ್ಗಿ, ಎಲ್ಲವೂ ನಾಶವಾಯಿತು. ನಾನು ಗಾಯಗೊಂಡಿದ್ದು, ಹೆಂಡತಿ ಕಣ್ಮರೆಯಾಗಿದ್ದಾಳೆ" ಎಂದು ಸಂಕಷ್ಟ ಹೇಳಿಕೊಂಡರು.
ವಯನಾಡ್ ಜಿಲ್ಲೆಯಲ್ಲಿ ಕಳೆದ ರಾತ್ರಿ ಸಂಭವಿಸಿದ ಭೀಕರ ಭೂ ಕುಸಿತದಿಂದ ಮುಂಡಕ್ಕೈ, ಚೂರಲ್ಮಲಾ, ಅಟ್ಟಮಾಲ ಮತ್ತು ನೂಲ್ಪುಳದ ಸುಮಾರು 400ಕ್ಕೂ ಹೆಚ್ಚು ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಎನ್ಡಿಆರ್ಎಫ್, ಎಸ್ಡಿಆರ್ಎಫ್ ತಂಡ ಮತ್ತು ಹೆಲಿಕ್ಯಾಪ್ಟರ್ ಮತ್ತು ಇತರೆ ರಕ್ಷಣಾ ತಂಡ ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿವೆ. ಭೂಕುಸಿತದಿಂದ ಸಾವನ್ನಪ್ಪಿದವರ ಸಂಖ್ಯೆ 41ಕ್ಕೆ ತಲುಪಿದ್ದು, ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಭಾರೀ ಮಳೆ ಮುನ್ಸೂಚನೆ: ನಿರಂತರ ಮಳೆಯಿಂದ ಸರಣಿ ಭೂಕುಸಿತಕ್ಕೆ ಒಳಗಾಗಿರುವ ವಯನಾಡ್‌ನಲ್ಲಿ ಮಂಗಳವಾರ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ ರೆಡ್ ಅಲರ್ಟ್ ನೀಡಿದೆ. ವಯನಾಡ್, ಮಲ್ಲಪುರಂ, ಕೋಝಿಕ್ಕೋಡ್ ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಜೋರು ಮಳೆಯಾಗಲಿದೆ ಎಂದು ತಿಳಿಸಿದೆ. ಇನ್ನು, ತಿರುವನಂತಪುರಂ, ಪತ್ತನಂತ್ತಿಟ್ಟು, ಅಲಪ್ಪುಳ, ಕೊಟ್ಟಾಯಂ, ಎರ್ನಾಕುಲಂ ಮತ್ತು ಕೊಲ್ಲಂಗೆ ಆರೆಂಜ್ ಅಲರ್ಟ್ ನೀಡಿದೆ. ಬುಧವಾರ ಕೂಡ ಮಲ್ಲಪುರಂ, ಕೋಝಿಕ್ಕೋಡ್, ವಯನಾಡು ಮತ್ತು ಕಣ್ಣೂರು ಜಿಲ್ಲೆಗಳಿಗೆ ಅರೆಂಜ್ ಅಲರ್ಟ್ ನೀಡಲಾಗಿದೆ.
ಇದನ್ನೂ ಓದಿ: ವಯನಾಡ್‌ನಲ್ಲಿ ರಣಮಳೆಗೆ ಸರಣಿ ಭೂಕುಸಿತ: ಮಕ್ಕಳು ಸೇರಿ 41 ಮಂದಿ ಸಾವು, 400ಕ್ಕೂ ಹೆಚ್ಚು ಕುಟುಂಬಗಳಿಗೆ ಸಂಕಷ್ಟ