ಸಂಗ್ರೂರ್ (ಪಂಜಾಬ್): ಪಂಜಾಬ್ನ ಹಣಕಾಸು ಸಚಿವ ಹರ್ಪಾಲ್ ಚೀಮಾ ಅವರ ವಿಧಾನಸಭಾ ಕ್ಷೇತ್ರವಾದ ದಿರ್ಬಾದಲ್ಲಿ ವಿಷಪೂರಿತ ಮದ್ಯ ಸೇವಿಸಿ ನಾಲ್ವರು ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ. ಮೃತರನ್ನು ದಲಿತ ಕುಟುಂಬಕ್ಕೆ ಸೇರಿದ ಭೋಲಾ ಸಿಂಗ್(50), ನಿರ್ಮಲ್ ಸಿಂಗ್ (42), ಪ್ರೀತ್ ಸಿಂಗ್ (42), ಹಾಗೂ ಜಗಜಿತ್ ಸಿಂಗ್ (30) ಎಂದು ಗುರುತಿಸಲಾಗಿದೆ.
ಅದಲ್ಲದೇ ವಿಷಪೂರಿತ ಮದ್ಯ ಸೇವಿಸಿ, ಇಬ್ಬರು ಸರ್ಕಾರಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲಾಗಿದ್ದಾರೆ. ಅವರು ಹೇಳಿಕೆ ನೀಡುವ ಸ್ಥಿತಿಯಲ್ಲಿಲ್ಲ. ಆದರೆ ಅವರ ಸಂಬಂಧಿಕರು, ವಿಷಪೂರಿತ ಮದ್ಯ ಸೇವಿಸಿ ಅಸ್ವಸ್ಥಗೊಂಡಿರುವ ಶಂಕೆ ವ್ಯಕ್ತಪಡಿಸಿದ್ದಾರೆ.
ಘಟನೆ ಸಂಭವಿಸಿದ ಕೂಡಲೇ ದಿಡ್ಬಾ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣದ ಕುರಿತು ಪೊಲೀಸ್ ತಂಡ ತನಿಖೆ ಕೈಗೊಂಡಿದೆ.
ಇದನ್ನೂ ಓದಿ: ಧಾರವಾಡ: ಅಡುಗೆ ಅನಿಲ ಸೋರಿಕೆಯಿಂದ ಸಿಲಿಂಡರ್ ಸ್ಫೋಟ; ಮಹಿಳೆ ಸಾವು, ಮೂವರಿಗೆ ಗಾಯ