ಗುವಾಹಟಿ: ಅಸ್ಸಾಂನಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ಇದ್ದು, ಪ್ರಸಿದ್ಧ ಕಾಜೀರಂಗ ರಾಷ್ಟ್ರೀಯ ಉದ್ಯಾನವನದಲ್ಲಿ 131 ವನ್ಯಜೀವಿಗಳು ಸಾವನ್ನಪ್ಪಿವೆ. ಆರು ಘೇಂಡಾಮೃಗಗಳು, ಹೊಗ್ ಡೀರ್ ಮತ್ತು ಸಾಂಬಾರ್ ಸೇರಿದಂತೆ 98 ಪ್ರಾಣಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿವೆ. ಈ ಪೈಕಿ ಎರಡು ಪ್ರಾಣಿಗಳು ವಾಹನ ಅಪಘಾತ ಮತ್ತು 17 ಪ್ರಾಣಿಗಳು ಚಿಕಿತ್ಸೆಯ ವೇಳೆ ಸಾವನ್ನಪ್ಪಿದೆ ಎಂದು ಕಾಜೀರಂಗ ರಾಷ್ಟ್ರೀಯ ಉದ್ಯಾನವನದ ಫೀಲ್ಡ್ ಡೈರೆಕ್ಷರ್ ಸೋನಾಲಿ ಘೋಷ್ ತಿಳಿಸಿದ್ದಾರೆ.
ಇದೀಗ ಉದ್ಯಾನವನದಲ್ಲಿ ಪ್ರವಾಹ ಪರಿಸ್ಥಿತಿ ಸುಧಾರಿಸುತ್ತಿದೆ. ಆದರೆ, ಇಲ್ಲಿನ 233 ಅರಣ್ಯ ಕ್ಯಾಂಪ್‌ಗಳ ಪೈಕಿ 69 ಕ್ಯಾಂಪ್‌ಗಳು ಮುಳುಗಿವೆ. ಇತ್ತೀಚಿನ ವರ್ಷದಲ್ಲಿ ಉದ್ಯಾನವನ ಭಾರೀ ಪ್ರವಾಹಕ್ಕೆ ತುತ್ತಾಗಿದೆ. 2017ರ ಪ್ರವಾಹದಲ್ಲೂ ಕೂಡ 350 ಕಾಡುಪ್ರಾಣಿಗಳು ಸಾವನ್ನಪ್ಪಿದ್ದವು. ಸದ್ಯ 25 ಪ್ರಾಣಿಗಳು ವೈದ್ಯಕೀಯ ಆರೈಕೆಯಲ್ಲಿದ್ದು, 52 ಇತರೆ ಪ್ರಾಣಿಗಳನ್ನು ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಜ್ಯದ ಪ್ರವಾಹ ಪರಿಸ್ಥಿತಿ ಕುರಿತು ಮಾತನಾಡಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಾಂತ್ ಬಿಸ್ವಾ ಶರ್ಮಾ, "ರಾಜ್ಯದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯಿಂದ ಜಾನುವಾರು ಹೆಚ್ಚು ತೊಂದರೆಗೆ ಸಿಲುಕಿವೆ. ಅವುಗಳ ರಕ್ಷಣೆ ಮತ್ತು ಚಿಕಿತ್ಸೆಗೆ ದಿನದ 24 ಗಂಟೆಗಳ ಕಾಲವೂ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ" ಎಂದು ಹೇಳಿದ್ದಾರೆ.
Recently, while passing through Kaziranga, I noticed this stranded rhino calf and instructed its immediate rescue.
— Himanta Biswa Sarma (@himantabiswa) July 8, 2024
The #AssamFloods have affected humans and animals alike and Team Assam is working round the clock to aid everyone. pic.twitter.com/gljiVaGzhJ
ಇನ್ನು, ಪ್ರವಾಹದಿಂದಾಗಿ ರಾಜ್ಯದ 28 ಜಿಲ್ಲೆಗಳಲ್ಲಿ 22.70 ಲಕ್ಷ ಜನರು ಸಂತ್ರಸ್ತರಾಗಿದ್ದಾರೆ. 3,446 ಗ್ರಾಮಗಳು ಹಾನಿಗೊಂಡಿವೆ. 68,432,75 ಹೆಕ್ಟೇರ್ ಕೃಷಿ ಭೂಮಿ ಜಲಾವೃತಗೊಂಡಿದೆ. ಭೂಕುಸಿತ, ಬಿರುಗಾಳಿಯಿಂದ 78 ಜನರು ಸಾವನ್ನಪ್ಪಿದ್ದಾರೆ. ಜಿಲ್ಲೆಯ ಪ್ರಮುಖ ನದಿಗಳಾದ ಬ್ರಹ್ಮಪುತ್ರ, ಬರಕ್ ಅನೇಕ ಪ್ರದೇಶದಲ್ಲಿ ಅಪಾಯ ಮಟ್ಟ ಮೀರಿ ಹರಿಯುತ್ತಿವೆ. ದುಬ್ರಿ ಜಿಲ್ಲೆ ಅತೀ ಹೆಚ್ಚು ಹಾನಿಗೊಳಗಾಗಿದ್ದು, 7,54,791 ಜನರು ಪರಿಣಾಮಕ್ಕೆ ಒಳಗಾಗಿದ್ದಾರೆ. 269 ನಿರಾಶ್ರಿತರ ತಾಣದಲ್ಲಿ ಸಂತ್ರಸ್ತರಿಗೆ ಪರಿಹಾರ ಕಲ್ಪಿಸಲಾಗಿದೆ.
ಎನ್ಡಿಆರ್ಎಫ್, ಎಸ್ಡಿಆರ್ಎಫ್ ಮತ್ತು ಸ್ಥಳೀಯ ಆಡಳಿತವೂ ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿದ್ದು, ಜಿಲ್ಲೆಯ ವಿವಿಧ ಭಾಗದಲ್ಲಿ 171 ಬೋಟ್ಗಳನ್ನು ನಿಯೋಜಿಸಲಾಗಿದೆ.(ಪಿಟಿಐ)
ಇದನ್ನೂ ಓದಿ: ಮೇಘಾಲಯದಲ್ಲಿ ಶೇ 44ರಷ್ಟು ಹೆಚ್ಚು ಮಳೆ: ಅಸ್ಸಾಂ ಪ್ರವಾಹದಲ್ಲಿ ಸಾವಿನ ಸಂಖ್ಯೆ 52ಕ್ಕೇರಿಕೆ