ನಾರಾಯಣಪುರ(ಛತ್ತೀಸ್‌ಗಢ): ಛತ್ತೀಸ್‌ಗಢದಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆ ಮುಂದುವರೆದಿದೆ. ನಾರಾಯಣಪುರ ಜಿಲ್ಲೆಯಲ್ಲಿ ಶುಕ್ರವಾರ ನಡೆದ ಎನ್‌ಕೌಂಟರ್‌ನಲ್ಲಿ ಐವರು ಸೇರಿದಂತೆ ಒಟ್ಟು 7 ನಕ್ಸಲರು ಹತರಾಗಿದ್ದಾರೆ. ಇದೇ ವೇಳೆ, ಮೂವರು ಯೋಧರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಲ್ಲಿನ ಓರ್ಚಾ ಪ್ರದೇಶದ ಗೋಬೆಲ್ ಗ್ರಾಮದ ಬಳಿಯ ಅರಣ್ಯದಲ್ಲಿ ಭದ್ರತಾ ಪಡೆಗಳ ಜಂಟಿ ತಂಡವು ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿತ್ತು. ಈ ವೇಳೆ, ನಕ್ಸಲರು ಹಾಗೂ ಭದ್ರತಾ ಪಡೆಗಳ ಮಧ್ಯೆ ಗುಂಡಿನ ಚಕಮಕಿ ಉಂಟಾಗಿದೆ. ಈ ಕಾಳಗದಲ್ಲಿ ಐವರು ಕೊಲೆಯಾಗಿದ್ದಾರೆ. ಮೃತದೇಹಗಳು, ಅವರ ಸಮವಸ್ತ್ರಗಳು ಮತ್ತು ಕೆಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈ ಗುಂಡಿನ ಕಾಳಗದಲ್ಲಿ ಮೂವರು ಯೋಧರು ಸಹ ಗಾಯಗೊಂಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ನಾರಾಯಣಪುರ, ಕೊಂಡಗಾಂವ್, ದಾಂತೇವಾಡ ಮತ್ತು ಬಸ್ತಾರ್ ಜಿಲ್ಲೆಗಳ ಪೊಲೀಸ್ ಜಿಲ್ಲಾ ಮೀಸಲು ಗಾರ್ಡ್‌ಗೆ ಸೇರಿದ ಸಿಬ್ಬಂದಿ ಮತ್ತು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) 45ನೇ ಬೆಟಾಲಿಯನ್ ಸಿಬ್ಬಂದಿ ಪಾಲ್ಗೊಂಡಿದ್ದರು ಎಂದು ಅವರು ವಿವರಿಸಿದ್ದಾರೆ.
ಛತ್ತೀಸ್‌ಗಢದ ನಕ್ಸಲ್ ಪೀಡಿತ ಪ್ರದೇಶದಲ್ಲಿ ಈ ವರ್ಷ ಪೊಲೀಸರು ನಕ್ಸಲರ ವಿರುದ್ಧ ನಿರಂತರವಾಗಿ ಕಾರ್ಯಾಚರಣೆ ನಡೆಯುತ್ತಿದ್ದಾರೆ. ನಾರಾಯಣಪುರ, ಬಿಜಾಪುರ, ಕಂಕೇರ್ ಜಿಲ್ಲೆಗಳ ಅರಣ್ಯಗಳಲ್ಲಿ ಶೋಧ ಕಾರ್ಯ ನಡೆಸಿ, ನಕ್ಸಲರ ಸದೆಬಡಿಯಲಾಗುತ್ತಿದೆ. ಇಂದಿನ ಗುಂಡಿನ ಚಕಮಕಿ ಸೇರಿ ಇದುವರೆಗೆ ನಡೆದ ಹಲವೆಡೆ ಎನ್‌ಕೌಂಟರ್‌ಗಳಲ್ಲಿ ಅಂದಾಜು 122 ನಕ್ಸಲರು ಹತರಾಗಿದ್ದಾರೆ.
ಏಪ್ರಿಲ್ 16ರಂದು ಕಂಕೇರ್ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ 29 ನಕ್ಸಲರನ್ನು ಹೊಡೆದುರುಳಿಸಲಾಗಿತ್ತು. ಏಪ್ರಿಲ್ 30ರಂದು ನಾರಾಯಣಪುರ ಮತ್ತು ಕಂಕೇರ್ ಜಿಲ್ಲೆಗಳ ಗಡಿಯ ಅರಣ್ಯದಲ್ಲಿ ಮೂವರು ಮಹಿಳೆಯರು ಸೇರಿದಂತೆ ಹತ್ತು ನಕ್ಸಲರ ಹತ್ಯೆ ಮಾಡಲಾಗಿತ್ತು. ಮೇ 10ರಂದು ಬಿಜಾಪುರ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ 12 ನಕ್ಸಲರು, ಮೇ 23ರಂದು ನಾರಾಯಣಪುರ - ಬಿಜಾಪುರ ಜಿಲ್ಲೆಗಳ ಗಡಿಯ ಅರಣ್ಯದಲ್ಲಿ ಏಳು ಮಂದಿ ಕೊಲೆಯಾಗಿದ್ದರು.
ಮತ್ತೊಂದೆಡೆ, ರಾಜ್ಯದಲ್ಲಿ ನಕ್ಸಲರನ್ನು ಮುಖ್ಯ ವಾಹಿನಿಗೆ ತರಲು 'ಮನೆಗೆ ಹಿಂತಿರುಗಿ' ಎಂಬ ಅಭಿಮಾನ ಕೈಗೊಂಡಿದೆ. ಇದರ ಭಾಗವಾಗಿ ನಕ್ಸಲರ ತಮ್ಮ ದುಷ್ಕೃತ್ಯಗಳನ್ನು ಬಿಟ್ಟು ಸಮಾಜದ ಮುಖ್ಯ ವಾಹಿನಿಗೂ ಬರುತ್ತಿದ್ದಾರೆ. ಈ ರೀತಿಯಾಗಿ 815ಕ್ಕೂ ಅಧಿಕ ನಕ್ಸಲರು ಶರಣಾಗಿ ಸಮಾಜದ ಮುಖ್ಯವಾಹಿನಿಗೆ ಬಂದಿದ್ದಾರೆ. ಶರಣಾದ ನಕ್ಸಲರಿಗೆ ಪುನರ್ವಸತಿ ಯೋಜನೆಯಡಿ ತಲಾ 25,000 ರೂ.ಗಳ ನಗದು ವಿತರಣೆ ಮಾಡಲಾಗುತ್ತಿದೆ.
ಇದನ್ನೂ ಓದಿ: ಛತ್ತೀಸ್‌ಗಢದಲ್ಲಿ ಮುಂದುವರಿದ ನಕ್ಸಲ್ ನಿಗ್ರಹ ಕಾರ್ಯಾಚರಣೆ; ಮಹಿಳೆ ಸೇರಿ ಮತ್ತಿಬ್ಬರ ಹತ್ಯೆ, 10 ನಕ್ಸಲರ ಶರಣಾಗತಿ