ನವದೆಹಲಿ: ಭಾರಿ ಆಕ್ಷೇಪದ ಮಧ್ಯೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯಡಿ (ಸಿಎಎ) ಮೊದಲ ಕಂತಿನಲ್ಲಿ 14 ಜನರಿಗೆ ಭಾರತೀಯ ನಾಗರಿಕತ್ವವನ್ನು ನೀಡಲಾಗಿದೆ. ಎಲ್ಲರಿಗೂ ಪೌರತ್ವ ಪ್ರಮಾಣಪತ್ರವನ್ನು ಬುಧವಾರ ವಿತರಿಸಲಾಯಿತು.
ಈ ಮೂಲಕ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಕಿರುಕುಳಕ್ಕೊಳಗಾದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ರಾಷ್ಟ್ರೀಯತೆ ನೀಡುವ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಅಧಿಕೃತ ಚಾಲನೆ ನೀಡಿದೆ.
ದೆಹಲಿಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರು, 14 ಜನರು ಆನ್ಲೈನ್ ಮೂಲಕ ಸಲ್ಲಿಸಿದ್ದ ಅರ್ಜಿಗಳನ್ನು ಪರಿಶೀಲಿಸಿದ ನಂತರ ಭಾರತೀಯ ಪೌರತ್ವ ನೀಡಿದ ಪ್ರಮಾಣಪತ್ರಗಳನ್ನು ಹಸ್ತಾಂತರಿಸಿದರು.
ಈ ಬಗ್ಗೆ ಮಾಹಿತಿ ನೀಡಿರುವ ಇಲಾಖೆ ವಕ್ತಾರರು, "ಪೌರತ್ವ ತಿದ್ದುಪಡಿ ಕಾಯ್ದೆಯಡಿ (ಸಿಎಎ) ನಾಗರಿಕತ್ವ ನೀಡುವ ಪ್ರಕ್ರಿಯೆ ಆರಂಭವಾಗಿದೆ. ಗೃಹ ಕಾರ್ಯದರ್ಶಿಗಳು ಅರ್ಜಿದಾರರಿಗೆ ಅಧಿಕೃತ ಪ್ರಮಾಣಪತ್ರ ನೀಡಿದ್ದಾರೆ. ಜಿಲ್ಲಾ ಮಟ್ಟದ ಸಮಿತಿಗಳು (DLCs) ಹಿರಿಯ ಅಂಚೆ ಅಧೀಕ್ಷಕರು/ಪೋಸ್ಟ್ ಅಧೀಕ್ಷಕರು ಗೊತ್ತುಪಡಿಸಿದ ಅಧಿಕಾರಿಗಳ ನೇತೃತ್ವದಲ್ಲಿ ದಾಖಲೆಗಳ ಪರಿಶೀಲನೆಯ ನಂತರ ಅರ್ಜಿಗಳನ್ನು ಅಖೈರು ಮಾಡಲಾಗಿದೆ" ಎಂದು ತಿಳಿಸಿದರು.
ಏನಿದು ಸಿಎಎ?: ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ಕಿರುಕುಳಕ್ಕೊಳಗಾದ ಮುಸ್ಲಿಮೇತರ ವಲಸಿಗರು 2014 ರ ಡಿಸೆಂಬರ್ 31ಕ್ಕೂ ಮೊದಲು ಭಾರತಕ್ಕೆ ಬಂದಿದ್ದಲ್ಲಿ ಅವರಿಗೆ ಭಾರತದ ನಾಗರಿಕತ್ವ ನೀಡಲು ಕೇಂದ್ರ ಸರ್ಕಾರ ಸಿಎಎ ಕಾಯ್ದೆ ಜಾರಿಗೆ ತಂದಿದೆ. 2019 ರಲ್ಲಿ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಇದರಲ್ಲಿ ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರು ಕಾಯ್ದೆಯಡಿ ಬರುತ್ತಾರೆ. ಮುಸ್ಲಿಮರಿಗೆ ಈ ಕಾಯ್ದೆಯಡಿ ಅವಕಾಶವಿಲ್ಲ.
2019 ರಲ್ಲಿ ಜಾರಿಯಾದರೂ, ಅದರ ನಿಯಮಗಳನ್ನು ರೂಪಿಸಲು ಸರ್ಕಾರ 4 ವರ್ಷ ಸಮಯಾವಕಾಶ ತೆಗೆದುಕೊಂಡಿತು. 2024 ರ ಮಾರ್ಚ್ 11 ರಂದು ಅಧಿಕೃತ ನಿಯಮಾವಳಿಗಳನ್ನು ರೂಪಿಸಿ ಆದೇಶ ಹೊರಡಿಸಿತು.
ಮುಸ್ಲಿಮೇತರ ಅರ್ಜಿದಾರರು ನಿಗದಿಪಡಿಸಿದ ಪೋರ್ಟಲ್ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಇವುಗಳನ್ನು ಜಿಲ್ಲಾ ಮಟ್ಟದ ಸಮಿತಿ (ಡಿಎಲ್ಸಿ), ರಾಜ್ಯ ಮಟ್ಟದ ಸಶಕ್ತ ಸಮಿತಿಯಿಂದ (ಇಸಿ) ಪರಿಶೀಲನೆ ಮಾಡಿದ ಬಳಿಕ ಪೌರತ್ವ ನೀಡಬೇಕೆ ಬೇಡವೇ ಎಂಬುದನ್ನು ನಿರ್ಧರಿಸಲಾಗುತ್ತದೆ.
ಈ ನಿಯಮಗಳ ಅನುಸಾರವಾಗಿ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಹಿಂದೂ, ಸಿಖ್, ಜೈನ್, ಬೌದ್ಧ, ಪಾರ್ಸಿ ಮತ್ತು ಕ್ರಿಶ್ಚಿಯನ್ ಸಮುದಾಯದವರು ಮಾತ್ರ ಭಾರತದ ನಾಗರಿಕತ್ವಕ್ಕಾಗಿ ಅರ್ಜಿ ಸಲ್ಲಿಸಬೇಕು.
ಇದನ್ನೂ ಓದಿ: ಸಿಎಎ ನಂತರ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಹೆಚ್ಚಿವೆ: ಅಡ್ವೊಕೇಟ್ ಗೋವಿಂದ್ ಚಂದ್ರ ಪ್ರಮಾಣಿಕ್