ರಾಯಪುರ (ಛತ್ತೀಸ್‌ಗಢದ): ರಾಜಧಾನಿ ರಾಯಪುರದಲ್ಲಿ ಸಾರನಾಥ್ ಎಕ್ಸ್‌ಪ್ರೆಸ್ ರೈಲಿನೊಳಗೆ ಬಂದೂಕಿನಿಂದ ಆಕಸ್ಮಿಕವಾಗಿ ಹಾರಿದ ಗುಂಡಿನಿಂದ ದುರಂತವೊಂದು ಸಂಭವಿಸಿದೆ. ಈ ಗುಂಡು ಆರ್‌ಪಿಎಸ್‌ಎಫ್ ಯೋಧನಿಗೆ ತಗುಲಿದ್ದರಿಂದ ಅವರು ಮೃತಪಟ್ಟಿದ್ದಾರೆ. ಒಬ್ಬ ಪ್ರಯಾಣಿಕ ಕೂಡಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಯೋಧ ಮೃತಪಟ್ಟಿದ್ದರು.
ಬಂದೂಕಿನಿಂದ ಆಕಸ್ಮಿಕವಾಗಿ ಹಾರಿದ ಗುಂಡು: ಇಂದು (ಶನಿವಾರ) ಬೆಳಗ್ಗೆ 6 ಗಂಟೆಗೆ ಗುಂಡಿನ ಸದ್ದು ಕೇಳಿದೆ. ಉಸ್ಲಾಪುರದಿಂದ ರಾಯಪುರಕ್ಕೆ ಹೋಗುವ ರೈಲು ಸಂಖ್ಯೆ 15159 ಸಾರನಾಥ ಎಕ್ಸ್‌ಪ್ರೆಸ್ ರೈಲಿನೊಳಗೆ RPSF ಸಿಬ್ಬಂದಿ ಪರಿಶೀಲಿಸುತ್ತಿದ್ದರು. ರೈಲು ರಾಯ್‌ಪುರ ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 1 ತಲುಪಿದಾಗ, RPSF ಯೋಧ ದಿನೇಶ್ ಚಂದ್ರ ರೈಲಿನ ಕೋಚ್ ಸಂಖ್ಯೆ S/02 ನಿಂದ ಇಳಿಯುತ್ತಿದ್ದರು. ಆಗ ಅವರ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಹಾರಿತು. ಗುಂಡು ಹಾರಿಸಿದ್ದರಿಂದ ದಿನೇಶ್ ಚಂದ್ರ ಅವರ ಎದೆಗೆ ಗುಂಡು ತಗುಲಿದೆ. ಕೋಚ್‌ನಲ್ಲಿ ಮೇಲಿನ ಸೀಟ್ನಲ್ಲಿ ಮಲಗಿದ್ದ ಪ್ರಯಾಣಿಕ ಮೊಹಮ್ಮದ್ ಡ್ಯಾನಿಸ್‌ಗೂ ಗುಂಡು ತಗುಲಿದೆ. ಘಟನೆಯ ನಂತರ ಈ ರೈಲಿನೊಳಗೆ ಆತಂಕ ಮನೆ ಮಾಡಿತ್ತು.
ರೈಲ್ವೆ ಮತ್ತು ಸ್ಥಳೀಯ ಪೊಲೀಸರು ತನಿಖೆ ಆರಂಭ: ರೈಲ್ವೆ ನಿಲ್ದಾಣದಲ್ಲಿ ನಡೆದ ಈ ಘಟನೆಯ ಬಳಿಕ, ಆರ್‌ಪಿಎಫ್ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದರು. ಗಾಯಗೊಂಡ ಪ್ರಯಾಣಿಕರನ್ನು ರಾಯಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಯೋಧ ದಿನೇಶ್ ಚಂದ್ರ ಸಾವನ್ನಪ್ಪಿದ್ದಾರೆ. ಗಾಯಾಳು ಪ್ರಯಾಣಿಕನಿಗೆ ಚಿಕಿತ್ಸೆ ಮುಂದುವರಿದಿದೆ.
ಮೃತ ಯೋಧ ರಾಜಸ್ಥಾನದ ಮೂಲ ನಿವಾಸಿ: ಮೃತ ಆರ್‌ಪಿಎಸ್‌ಎಫ್ ಸಿಬ್ಬಂದಿ ದಿನೇಶ್ ಚಂದ್ರ ರಾಜಸ್ಥಾನದ ನಿವಾಸಿಯಾಗಿದ್ದಾರೆ. ಅವರಿಗೆ 34 ವರ್ಷ ವಯಸ್ಸಾಗಿತ್ತು. ಇಂದು (ಫೆ.10 ರಂದು) ಬೆಳಗ್ಗೆ ರಾಯಪುರ ನಿಲ್ದಾಣದಲ್ಲಿ ಡ್ಯೂಟಿ ಮುಗಿದಿತ್ತು. ಈ ವೇಳೆ, ಅವಘಡ ಸಂಭವಿಸಿದೆ. ಈ ಕುರಿತು ಸ್ಥಳೀಯ ಪೊಲೀಸರು ಹಾಗೂ ರೈಲ್ವೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇತ್ತೀಚಿನ ಪ್ರಕರಣ, ಆಕಸ್ಮಿಕವಾಗಿ ಬಂದೂಕಿನಿಂದ ಹಾರಿದ ಗುಂಡಿನಿಂದ ಯೋಧ ಸಾವು: ಪೂಂಚ್ (ಜಮ್ಮು ಮತ್ತು ಕಾಶ್ಮೀರ), ತನ್ನ ಬಂದೂಕಿನಿಂದಲೇ ಆಕಸ್ಮಿಕವಾಗಿ ಹಾರಿದ ಗುಂಡಿನಿಂದ ಭಾರತೀಯ ಸೇನೆಯ ಯೋಧರೊಬ್ಬರು ಇತ್ತೀಚಗೆ ಸಾವನ್ನಪ್ಪಿದ್ದರು. ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಸಮೀಪದ ಮಂಕೋಟೆ ಸೆಕ್ಟರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈಶ್ವರನ್ ಆರ್. (27) ಮೃತಪಟ್ಟಿರುವ ಯೋಧ. ಮೃತಪಟ್ಟ ಯೋಧ 37ನೇ ರಾಷ್ಟ್ರೀಯ ರೈಫಲ್ಸ್ (RR)ನ ಕರ್ತವ್ಯದ ಮೇಲೆ ನಿಯೋಜನೆ ಮಾಡಲಾಗಿತ್ತು.
ಈಶ್ವರನ್ ಆರ್. ಅವರ ಸರ್ವೀಸ್ ರೈಫಲ್ನಿಂದ ಆಕಸ್ಮಿಕವಾಗಿ ಗುಂಡು ಹಾರಿದ ಪರಿಣಾಮ ಗಂಭೀರ ಗಾಯಗೊಂಡಿದ್ದರು. ತಕ್ಷಣವೇ ಮೆಂಧಾರ್‌ನಲ್ಲಿರುವ ಉಪ-ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದ್ರೆ, ಅಷ್ಟೊತ್ತಿಗಾಗಲೇ ಯೋಧ ಸಾವನ್ನಪ್ಪಿದ್ದರು. ಮರಣೋತ್ತರ ಪರೀಕ್ಷೆಯ ನಂತರ ಪಾರ್ಥಿವ ಶರೀರವನ್ನು ಸೇನೆಗೆ ಹಸ್ತಾಂತರ ಮಾಡಲಾಗಿತ್ತು.
ಇದನ್ನೂ ಓದಿ: ಕಳಸಾ ಬಂಡೂರಿ ನಾಲಾ ಯೋಜನೆಗೆ ಅನುಮತಿ: ನಿರ್ಧಾರ ಮುಂದೂಡಿದ ರಾಷ್ಟ್ರೀಯ ವನ್ಯಜೀವಿ ಮಂಡಳಿ