ಕಣ್ಣೂರು(ಕೇರಳ): ಅಧಿಕಾರಿಗಳು ನಿಯಮಿತವಾಗಿ ಚಿನ್ನ ಕಳ್ಳಸಾಗಣೆಯನ್ನು ತಡೆಯುತ್ತಿದ್ದರೂ ಕೆಲವರು ಇಂಥ ಚಟುವಟಿಕೆಗಳಲ್ಲಿ ತೊಡಗುವ ಪ್ರಕರಣಗಳು ನಿಯಂತ್ರಣಕ್ಕೆ ಬಂದಿಲ್ಲ. ಇತ್ತೀಚೆಗೆ ಕೇರಳದ ವಿಮಾನಯಾನ ಸಂಸ್ಥೆಯೊಂದರ ಮಹಿಳಾ ಉದ್ಯೋಗಿಯೊಬ್ಬರು ಕಳ್ಳಸಾಗಣೆ ಮಾಡಲೆತ್ನಿಸಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ಆರೋಪಿ ತನ್ನ ಖಾಸಗಿ ಅಂಗಗಳಲ್ಲಿ 1 ಕೆಜಿ ಚಿನ್ನ ಬಚ್ಚಿಟ್ಟಿರುವುದಾಗಿ ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಮೂರು ದಿನಗಳ ಹಿಂದೆ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮೇ 28ರಂದು ಮಸ್ಕತ್‌ನಿಂದ ಕಣ್ಣೂರಿಗೆ ವಿಮಾನ ಆಗಮಿಸಿತ್ತು. ಇದರಲ್ಲಿ ಚಿನ್ನ ಕಳ್ಳಸಾಗಣೆ ಮಾಡಲಾಗುತ್ತಿದೆ ಎಂದು ಡಿಆರ್‌ಐ ಅಧಿಕಾರಿಗಳಿಗೆ ಗುಪ್ತಚರ ಸಂಸ್ಥೆಗಳಿಂದ ಮಾಹಿತಿ ಲಭಿಸಿತ್ತು. ಆ ವಿಮಾನದಲ್ಲಿ ಗಗನಸಖಿಯಾಗಿದ್ದ ಸುರ್ಭಿ ಖಾತೂನ್ ಎಂಬಾಕೆ ಈ ಅಕ್ರಮ ಸಾಗಾಟದಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಬಂದಿದ್ದು, ಕೂಲಂಕಷವಾಗಿ ಪರಿಶೀಲಿಸಲಾಗಿದೆ. ಈ ಸಂದರ್ಭದಲ್ಲಿ ಗುದದ್ವಾರದಲ್ಲಿ 960 ಗ್ರಾಂ ಚಿನ್ನಾಭರಣ ಪತ್ತೆಯಾಗಿದ್ದು, ವಶಪಡಿಸಿಕೊಳ್ಳಲಾಗಿದೆ.
ಇದೀಗ ಆರೋಪಿಯನ್ನು ಕಣ್ಣೂರು ಮಹಿಳಾ ಜೈಲಿಗೆ ಸ್ಥಳಾಂತರಿಸಲಾಗಿದೆ. ವಿಮಾನಯಾನ ಸಂಸ್ಥೆಯ ಸಿಬ್ಬಂದಿ ರಹಸ್ಯ ಭಾಗಗಳಲ್ಲಿ ಚಿನ್ನ ಕಳ್ಳಸಾಗಣೆ ಮಾಡುತ್ತಿರುವುದು ದೇಶದಲ್ಲಿ ಇದೇ ಮೊದಲು ಎಂದು ಡಿಆರ್‌ಐ ಮೂಲಗಳು ಬಹಿರಂಗಪಡಿಸಿವೆ.
ಕಳೆದ ಕೆಲವು ವರ್ಷಗಳಿಂದ ಚಿನ್ನ ಕಳ್ಳಸಾಗಣೆ ಪ್ರಕರಣ ಕೇರಳದಲ್ಲಿ ರಾಜಕೀಯವಾಗಿ ಅಲ್ಲೋಲಕಲ್ಲೋಲ ಉಂಟುಮಾಡುತ್ತಿದೆ. ಇತ್ತೀಚೆಗಷ್ಟೇ ಹಳದಿ ಲೋಹ ಕಳ್ಳಸಾಗಣೆ ಪ್ರಕರಣದಲ್ಲಿ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಆಪ್ತನನ್ನು ದೆಹಲಿಯಲ್ಲಿ ಬಂಧಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: ಅಕ್ರಮ ಚಿನ್ನ ಸಾಗಣೆ: ದೆಹಲಿ ಏರ್ಪೋರ್ಟ್‌ನಲ್ಲಿ ಶಶಿ ತರೂರ್ ಆಪ್ತ ಸಹಾಯಕನ ಬಂಧನ - Gold Smuggling Case