ಹೈದರಾಬಾದ್: ಪತ್ನಿ ಬೇರೊಬ್ಬನನ್ನು ಮದುವೆಯಾಗಿ ತನ್ನ ಮಗನನ್ನು ಬಾಂಗ್ಲಾದೇಶಕ್ಕೆ ಕರೆದೊಯ್ದಿರುವುದರಿಂದ ಮಗನನ್ನು ಭಾರತಕ್ಕೆ ಕರೆತರಲು ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ತಂದೆ ಮನವಿ ಮಾಡಿದ್ದಾರೆ.
ಸಂತ್ರಸ್ತ ತಂದೆ ಹೇಳಿದ್ದೇನು?: ಸಂತ್ರಸ್ತ ತಿರುಪತಿ ಪ್ರಕಾರ, ವಿಕಾರಾಬಾದ್ ಜಿಲ್ಲೆಯ ಚೌದಾಪುರ ಮಂಡಲದ ಲಿಂಗಪುರ ಗ್ರಾಮದ ಮಗಣಿ ತಿರುಪತಿ ಎಂಬುವರು ಮುಂಬೈನಲ್ಲಿ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು. 2016 ರಲ್ಲಿ, ರಿಯಾ ಎಂಬ ಮಹಿಳೆ ಅವರಿಗೆ ಮುಂಬೈನಲ್ಲಿ ಪರಿಚಯವಾಗಿದ್ದರು. ನಂತರ ತಿರುಪತಿಯು ಆಕೆಯನ್ನು ಪ್ರೀತಿಸಿ ಮದುವೆಯಾಗಿದ್ದರು.
ಅವರಿಗೆ 2017ರಲ್ಲಿ ಮಗ ವಿಶಾಲ್ ಜನಿಸಿದ್ದ. ಕೆಲಸದ ನಿಮಿತ್ತ ತಿರುಪತಿ ತನ್ನ ಊರಿಗೆ ಬಂದಾಗ, ರಿಯಾ ಇನ್ನೊಬ್ಬ ವ್ಯಕ್ತಿಯನ್ನು ಮದುವೆಯಾಗಿದ್ದಳು. ವಿಷಯ ತಿಳಿದ ತಿರುಪತಿ ಮುಂಬೈಗೆ ತೆರಳಿದ್ದಾರೆ. ಮಗನನ್ನು ಕರೆದುಕೊಂಡು ಹೋಗಬೇಕು ಎಂದು ರಿಯಾಗೆ ಹೇಳಿದ್ದಾರೆ. ನಂತರ ವಿಶಾಲ್‌ನನ್ನು ಹೈದರಾಬಾದ್‌ನ ಬಾಲಾಪುರಕ್ಕೆ ಕರೆತಂದು ಸರ್ಕಾರಿ ಶಾಲೆಗೆ ಸೇರಿಸಿದ್ದಾರೆ.
2022 ರಲ್ಲಿ ರಿಯಾ ತಿರುಪತಿ ಅವರಿಗೆ ಕರೆ ಮಾಡಿ ತಾನು ತನ್ನ ಮಗನನ್ನು ಒಮ್ಮೆ ನೋಡಬೇಕೆಂದು ಕೇಳಿಕೊಂಡಿದ್ದಳು. ರಿಯಾಳನ್ನು ಭೇಟಿಯಾಗಲು ತನ್ನ ಮಗನೊಂದಿಗೆ ಮುಂಬೈಗೆ ಹೋದಾಗ ರಿಯಾಳ ಪತಿ ಮತ್ತು ಇತರರು ತಿರುಪತಿಯ ಮೇಲೆ ಹಲ್ಲೆ ಮಾಡಿದ್ದರು. ನಂತರ ಆಕೆ ತನ್ನ ಐದು ವರ್ಷದ ಮಗನೊಂದಿಗೆ ನಾಪತ್ತೆಯಾಗಿದ್ದಳು. ಪೊಲೀಸರಿಗೆ ಈ ಬಗ್ಗೆ ದೂರು ನೀಡಿದರೂ ಮಗ ಪತ್ತೆಯಾಗಿರಲಿಲ್ಲ.
ಪರಿಚಿತ ವ್ಯಕ್ತಿಗಳ ವಿಚಾರಣೆ ವೇಳೆ, ರಿಯಾ ಬಾಂಗ್ಲಾದೇಶದ ಜೆಸ್ಸೋರ್‌ನಲ್ಲಿದ್ದಾಳೆ ಮತ್ತು ಅವಳು ತನ್ನ ಮಗನನ್ನು ಅಲ್ಲಿಗೆ ಕರೆದೊಯ್ದಿದ್ದಾಳೆ ಎಂದು ತಿಳಿದುಬಂದಿದೆ. ರಿಯಾಳ ಸಹೋದರಿಯ ಪತಿ ಶಫಿ ಮೂಲಕ ವಿಶಾಲ್ ನನ್ನು ಭಾರತಕ್ಕೆ ಕರೆತರಲು ತಿರುಪತಿ ಯತ್ನಿಸಿದ್ದ. ಇದಕ್ಕಾಗಿ ತಿರುಪತಿಯಿಂದ ಶಫಿ ಹಲವು ಬಾರಿ ಹಣ ಸಂಗ್ರಹಿಸಿದ್ದ. ಇತ್ತೀಚೆಗೆ 1 ಲಕ್ಷ ರೂ. ಪಡೆದಿದ್ದ. ನಂತರ ಇನ್ನೂ 3.5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಶಫಿ, ತನ್ನ ಮಗ ವಿಶಾಲ್‌ನನ್ನು ಒಪ್ಪಿಸಲು ಬಾಂಗ್ಲಾದೇಶದ ಗಡಿಗೆ ಬರುವಂತೆ ತಿರುಪತಿಗೆ ಹೇಳಿದ್ದಾನೆ.
ತಿರುಪತಿ ಅಲ್ಲಿಗೆ ಹೋದಾಗ ಶಫಿ ಮಗನನ್ನು ತೋರಿಸಲಿಲ್ಲ. ಈ ಕುರಿತು ಇತ್ತೀಚೆಗೆ ಕರೀಂನಗರದಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯ್ ಅವರಿಗೆ ಮನವಿ ಮಾಡಿದ್ದರು. ತನ್ನ ಮಗನನ್ನು ಮರಳಿ ಕರೆತರಲು ಸಚಿವರು ಸಹಾಯ ಮಾಡುವುದಾಗಿ ತಿಳಿಸಿದ್ದರು ಎಂದು ಸಂತ್ರಸ್ತ ತಿರುಪತಿ ಹೇಳಿದ್ದಾರೆ.
ಇದನ್ನೂ ಓದಿ: ಮಗನ ಮದುವೆಯ ಮೊದಲ ಲಗ್ನಪತ್ರಿಕೆ ಕಾಶಿ ವಿಶ್ವನಾಥನಿಗೆ ಅರ್ಪಿಸಿದ ನೀತಾ ಅಂಬಾನಿ! - Nita Ambani in Kashi