ಪದೇರು: ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಸರಿಯಾದ ರಸ್ತೆ ಸೌಲಭ್ಯ ಇಲ್ಲದ ಕಾರಣ ಅನಾರೋಗ್ಯದಿಂದ ಮೃತಪಟ್ಟ 2 ವರ್ಷದ ಮಗನ ಶವವನ್ನು ತಂದೆ ಕೈಯಲ್ಲಿ ಹೊತ್ತು 8 ಕಿ.ಮೀ ಸಾಗಿದ್ದಾರೆ.
ಅನಂತಗಿರಿ ಮಂಡಲದ ಚಿಂಕೋಣಂನ ಕೊಟ್ಟಯ್ಯ ಮತ್ತು ಸೀತಾ ದಂಪತಿಗಳು ಕೆಲಸ ಅರಸಿ ಕೊಲ್ಲೂರಿಗೆ ವಲಸೆ ಬಂದಿದ್ದರು. ಈ ವೇಳೆ ಅವರ ಎರಡು ವರ್ಷದ ಮಗ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿತ್ತು. ಬಳಿಕ ಮೃತದೇಹವನ್ನು ಪಡೆದು ಆಂಬ್ಯುಲೆನ್ಸ್ ಮೂಲಕ ತಮ್ಮ ಊರಿಗೆ ಹಿಂತಿರುಗಿದ್ದಾರೆ. ಈ ವೇಳೆ, ಗುಡ್ಡಗಾಡು ಪ್ರದೇಶವಾದ್ದರಿಂದ ಸರಿಯಾದ ರಸ್ತೆ ಸಂಪರ್ಕವಿಲ್ಲದೇ ಆಂಬ್ಯುಲೆನ್ಸ್ ಸಿಬ್ಬಂದಿ ವಿಜಯನಗರ ಜಿಲ್ಲೆಯ ಮೆಂಟಡಾ ಮಂಡಲ ವಣಿಜಾ ಗ್ರಾಮದಲ್ಲಿ ಬಿಟ್ಟು ಹಿಂತಿರುಗಿದ್ದಾರೆ.
ಹೀಗಾಗಿ ತಂದೆಯೇ ಮಗನ ಮೃತದೇಹವನ್ನು ಹೊತ್ತು ಕತ್ತಲಲ್ಲಿ 8 ಕಿಲೋಮೀಟರ್ ನಡೆದುಕೊಂಡು ತಮ್ಮ ಗ್ರಾಮ ಚಿಂಕೋಣಂಗೆ ತಲುಪಿದ್ದಾರೆ. ಸರ್ಕಾರ ಎಷ್ಟೆಲ್ಲ ಆಶ್ವಾಸನೆ ನೀಡುತ್ತಿದ್ದರೂ ಗುಡ್ಡಗಾಡು ಪ್ರದೇಶದ ಗ್ರಾಮಗಳಿಗೆ ಸರಿಯಾದ ರಸ್ತೆ ಸೌಲಭ್ಯ ಕಲ್ಪಿಸದೇ ಇರುವುದು ಇಂತಹ ಪರಿಸ್ಥಿತಿಗಳನ್ನು ಎದುರಿಸುವಂತಾಗಿದೆ ಎಂದು ಕುಟುಂಬಸ್ಥರು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ. ಇನ್ನಾದರೂ ಅಧಿಕಾರಿಗಳು ಸ್ಪಂದಿಸಿ ಕೂಡಲೇ ಇಂತಹ ಗ್ರಾಮಗಳಿಗೆ ರಸ್ತೆ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಸಿಗದ ಆಂಬ್ಯುಲೆನ್ಸ್: ತಾತ್ಕಾಲಿಕ ಸ್ಟ್ರೆಚರ್‌ನಲ್ಲಿ ಬಾಲಕಿ ಶವ ಸಾಗಿಸಿದ ಬುಡಕಟ್ಟು ಕುಟುಂಬ