ಫತೇಪುರ್(ಉತ್ತರ ಪ್ರದೇಶ): ಯುಪಿಯಲ್ಲಿ ಹಲವು ದಿನಗಳಿಂದ ವಿಚಿತ್ರ ಪ್ರಕರಣವೊಂದು ಚರ್ಚೆಯಲ್ಲಿದೆ. ಜಿಲ್ಲೆಯಲ್ಲಿ ವಾಸಿಸುತ್ತಿರುವ ಯುವಕನಿಗೆ ಹಾವೊಂದು ಪದೇ ಪದೇ ಕಚ್ಚುತ್ತಿದೆ. 34 ದಿನಗಳಲ್ಲಿ ಒಂದೇ ಹಾವು ಯುವಕನಿಗೆ ಆರು ಬಾರಿ ಕಚ್ಚಿದೆ. ಇದಾದ ಒಂದು ವಾರದ ನಂತರ ಶುಕ್ರವಾರ ಮತ್ತೊಮ್ಮೆ ಹಾವು ಕಚ್ಚಿದೆ. 7ನೇ ಬಾರಿಗೆ ಹಾವು ಕಚ್ಚಿದ್ದರಿಂದ ಯುವಕನ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಫತೇಪುರ್ ಜಿಲ್ಲೆಯ ಮಾಲ್ವಾನ್ ಪೊಲೀಸ್ ಠಾಣೆ ವ್ಯಾಪ್ತಿಯ ಸೌರಾ ಗ್ರಾಮದ ನಿವಾಸಿ ವಿಕಾಸ್ ದ್ವಿವೇದಿ ಎಂಬ ಯುವಕನಿಗೆ ಹಾವೊಂದು ಪದೇ ಪದೇ ಕಚ್ಚುತ್ತಿದೆ. ಪ್ರತಿ ಬಾರಿ ಹಾವು ಕಚ್ಚಿದಾಗ ವಿಕಾಸ್ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಚೇತರಿಸಿಕೊಂಡು ಮನೆಗೆ ತೆರಳುತ್ತಾರೆ. ವಿಕಾಸ್‌ಗೆ ಆರನೇ ಬಾರಿ ಹಾವು ಕಚ್ಚಿದಾಗ, ಅವರು ತನ್ನ ಕನಸಿನ ಬಗ್ಗೆ ಮಾಹಿತಿ ನೀಡಿದರು. ತನ್ನ ಕನಸಿನಲ್ಲಿ ಅದೇ ಹಾವು ಕಂಡಿದ್ದು, ಆ ಹಾವು 9 ಬಾರಿ ಕಚ್ಚುತ್ತದೆ ಮತ್ತು 9 ನೇ ಬಾರಿ ನನ್ನನ್ನು ಉಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದಾರೆ.
ಇನ್ನು ಆ ಹಾವು ವಿಕಾಸ್‌ಗೆ ಶನಿವಾರ ಅಥವಾ ಭಾನುವಾರದಂದೇ ಕಚ್ಚುವುದು ವಿಶೇಷವಾಗಿತ್ತು. ಆದ್ರೆ ಏಳನೇ ಬಾರಿ ಮಾತ್ರ ಕಚ್ಚಿದ್ದು ಶುಕ್ರವಾರ. ಅಷ್ಟೇ ಅಲ್ಲ ಹಾವು ಕಚ್ಚುವ ಮೊದಲು, ತನಗೆ ಏನಾದರೂ ಸಂಭವಿಸಲಿದೆ ಎಂದು ನನಗೆ ಮುನ್ಸೂಚನೆ ದೊರೆಯುತ್ತದೆ ಎಂದು ವಿಕಾಸ್ ತಮ್ಮ ಅನುಭವ ಹೇಳಿಕೊಂಡಿದ್ದಾರೆ. ಇನ್ನು ಈ ಘಟನೆಯಿಂದ ವಿಕಾಸ್‌ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರೂ ಬೆಚ್ಚಿಬಿದ್ದಿದ್ದಾರೆ. ಮತ್ತೆ ಮತ್ತೆ ಅದೇ ಔಷಧಿ ಕೊಟ್ಟು ಗುಣಪಡಿಸುತ್ತಿದ್ದಾರೆ ಎನ್ನಲಾಗಿದೆ. ಆದರೆ ಪದೇ ಪದೇ ಹಾವು ಕಚ್ಚುತ್ತಿರುವ ಘಟನೆ ನಿಜಕ್ಕೂ ಅಚ್ಚರಿ ಮೂಡಿಸಿದೆ ಎಂದು ವೈದ್ಯರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ವಿಕಾಸ್ ದ್ವಿವೇದಿಗೆ ಚಿಕಿತ್ಸೆ ನೀಡುತ್ತಿರುವ ಡಾ.ಜವಾಹರ್ ಲಾಲ್ ಮಾತನಾಡಿ, "6 ಬಾರಿ ಹಾವು ಕಚ್ಚಿದ ವ್ಯಕ್ತಿ ಇದ್ದಾರೆ. ಅವರಿಗೆ ಆರು ಬಾರಿ ಚಿಕಿತ್ಸೆ ನೀಡಿದ್ದೇನೆ. ನಾನು ಅವರಿಗೆ ಗ್ರಾಮದಿಂದ ಹೊರಗುಳಿಯಲು ಸಲಹೆ ನೀಡಿದ್ದೆ. ನಂತರ ಅವರು ತನ್ನ ಚಿಕ್ಕಮ್ಮನ ಮನೆಯಲ್ಲಿಯೇ ಇದ್ದನು. ಆದರೂ ಹಾವು ಅವನನ್ನು ಕಚ್ಚಿದೆ. ಬಳಿಕ ಚಿಕ್ಕಪ್ಪನ ಮನೆಯಲ್ಲಿ ಇದ್ದನು. ಆದ್ರೂ ಸಹ ಆತನಿಗೆ ಅಲ್ಲಿ ಆರನೇ ಬಾರಿಗೆ ಹಾವು ಕಚ್ಚಿದೆ. ಸದ್ಯ ಚಿಕಿತ್ಸೆ ನೀಡಿದ್ದೇವೆ, ಅವರ ಸ್ಥಿತಿ ಸಾಮಾನ್ಯವಾಗಿದೆ" ಎಂದು ಹೇಳಿದರು.
ಇದೀಗ ತನ್ನ ಕನಸಿನಲ್ಲಿ ಹಾವು ಬಂದು 9 ಬಾರಿ ಕಚ್ಚುತ್ತದೆ ಎಂದು ಹೇಳಿದ್ದು, 9ನೇ ಬಾರಿಗೆ ಚಿಕಿತ್ಸೆಯಾದ್ರೂ ನನ್ನನ್ನು ಯಾರಿಂದಲೂ ರಕ್ಷಿಸಲು ಸಾಧ್ಯವಾಗಿಲ್ಲ ಎಂದು ವಿಕಾಸ್ ದ್ವಿವೇದಿ ಹೇಳಿಕೊಂಡಿದ್ದಾರೆ. ಅಹಿತಕರ ಲಕ್ಷಣಗಳು ಕಂಡುಬರುವ ಮುನ್ನ ನಮಗೆ ನಮ್ಮ ಮಗ ತಿಳಿಸುತ್ತಾನೆ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.