ನವದೆಹಲಿ: ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಕಾನೂನನ್ನು ಸಮಗ್ರವಾಗಿ ಜಾರಿಗೆ ತರಬೇಕು ಎಂದು ಆಗ್ರಹಿಸಿ ಉತ್ತರಪ್ರದೇಶ, ಹರಿಯಾಣ, ಪಂಜಾಬ್ನ ರೈತರು ನಡೆಸುತ್ತಿರುವ ಹೋರಾಟ ದೆಹಲಿಯತ್ತ ಸಾಗಿದ್ದು, ಗಡಿಗಳಲ್ಲಿ ಭಾರೀ ಬಿಗಿ ಭದ್ರತೆ ಒದಗಿಸಲಾಗಿದೆ. ಪ್ರತಿಭಟನಾ ವಾಹನಗಳು ರಾಷ್ಟ್ರ ರಾಜಧಾನಿಗೆ ಪ್ರವೇಶಿಸಿದಂತೆ ಬ್ಯಾರಿಕೇಡ್ಗಳನ್ನು ಹಾಕಲಾಗಿದೆ. ರಸ್ತೆಗಳ ಮೇಲೆ ಮೊಳೆಗಳನ್ನು ಅಳವಡಿಸಲಾಗಿದೆ.
2021 ರಲ್ಲಿ ನಡೆದ ರೈತ ಹೋರಾಟದ ವೇಳೆ ಕೇಂದ್ರ ಸರ್ಕಾರ ನೀಡಿದ ಆಶ್ವಾಸನೆಯಂತೆ ಎಂಎಸ್ಪಿಯನ್ನು ದೇಶಾದ್ಯಂತ ಜಾರಿಗೆ ತರಬೇಕು ಎಂದು ರೈತರು ಎರಡನೇ ಬೃಹತ್ ಹೋರಾಟ ನಡೆಸುತ್ತಿದ್ದಾರೆ. 'ದೆಹಲಿ ಚಲೋ ರ್ಯಾಲಿ'ಯು ಫೆಬ್ರವರಿ 13 ರಂದು ದೆಹಲಿ ನಗರಕ್ಕೆ ಪ್ರವೇಶಿಸಲಿದೆ. ಇದನ್ನು ಗಡಿಭಾಗದಲ್ಲೇ ತಡೆಯಲು ಸೂಚಿಸಲಾಗಿದೆ.
ದೆಹಲಿ ಪೊಲೀಸರು ಸಿಂಘು, ಗಾಜಿಪುರ ಮತ್ತು ಟಿಕ್ರಿ ಗಡಿಗಳಲ್ಲಿ 5,000 ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪ್ರತಿಭಟನಾಕಾರರ ವಾಹನಗಳು ನಗರಕ್ಕೆ ಪ್ರವೇಶಿಸದಂತೆ ಬ್ಯಾರಿಕೇಡ್‌ಗಳ ಜೊತೆಗೆ ರಸ್ತೆಗಳಲ್ಲಿ ಮೊಳೆಗಳನ್ನು ಅಳವಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿ ಪೊಲೀಸ್ ಕಮಿಷನರ್ ಸಂಜಯ್ ಅರೋರಾ ಅವರು ಪೊಲೀಸ್ ಅಧಿಕಾರಿಗಳೊಂದಿಗೆ ಹರಿಯಾಣ-ದೆಹಲಿ ಮತ್ತು ಉತ್ತರ ಪ್ರದೇಶ-ದೆಹಲಿಯ ವಿವಿಧ ಗಡಿಗಳಿಗೆ ಸಂಪರ್ಕಿಸುವ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಬಸ್ಗಳು, ರೈಲುಗಳು, ಮೆಟ್ರೋ, ರಸ್ತೆ ಸೇರಿದಂತೆ ರೈತರು ಬೇರೆ ಯಾವುದೇ ಸಾರಿಗೆ ವಿಧಾನಗಳನ್ನು ಬಳಸಿಕೊಂಡು ನಗರಕ್ಕೆ ಪ್ರವೇಶಿಸದಂತೆ ಕಟ್ಟುನಿಟ್ಟಿನ ನಿಗಾ ಇಡಲು ಹಲವು ಭದ್ರತಾ ತಂಡಗಳನ್ನು ನಿಯೋಜಿಸಲಾಗಿದೆ.
ನಿಷೇಧಾಜ್ಞೆ ಜಾರಿ: ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ದೆಹಲಿಯ ಈಶಾನ್ಯ ಜಿಲ್ಲೆಯಲ್ಲಿ ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಆರ್ಪಿಸಿ) ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಾಜ್ಞೆಯನ್ನು ಹೊರಡಿಸಲಾಗಿದೆ. ರೈತಸಂಘಟನೆಗಳು ಫೆಬ್ರವರಿ 13 ರಂದು ದೆಹಲಿಗೆ ಮೆರವಣಿಗೆ ಮೂಲಕ ಪ್ರವೇಶಿಸುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದರು.
ಸುಮಾರು 200 ರೈತ ಸಂಘಗಳು ಮತ್ತು ಹೆಚ್ಚಿನ ಸಂಖ್ಯೆಯ ರೈತರು ನಡೆಸುತ್ತಿರುವ 'ದೆಹಲಿ ಚಲೋ ರ್ಯಾಲಿ' ಉತ್ತರ ಪ್ರದೇಶ, ಹರಿಯಾಣ ಮತ್ತು ಪಂಜಾಬ್‌ನಿಂದ ರಾಷ್ಟ್ರ ರಾಜಧಾನಿಯನ್ನು ತಲುಪುವ ನಿರೀಕ್ಷೆಯಿದೆ. 2021 ರ ಘಟನಾವಳಿಗಳನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ನಿಗಾ ವಹಿಸಲಾಗಿದೆ. ಪ್ರತಿಭಟನೆಯ ವೇಳೆ ರೈತರು ಟ್ರ್ಯಾಕ್ಟರ್, ಟ್ರಾಲಿಗಳು, ಶಸ್ತ್ರಾಸ್ತ್ರಗಳೊಂದಿಗೆ ದೆಹಲಿಗೆ ಆಗಮಿಸುವ ಸಾಧ್ಯತೆ ಇದೆ. ಹೀಗಾಗಿ ದೆಹಲಿ ಮತ್ತು ಉತ್ತರ ಪ್ರದೇಶದ ನಡುವಿನ ಎಲ್ಲಾ ಗಡಿಗಳಲ್ಲಿ ಜನರು ಒಟ್ಟುಗೂಡಿಸುವುದನ್ನು ನಿಷೇಧಿಸಲಾಗಿದೆ.
ಪ್ರತಿಭಟನಾಕಾರರು ಬಂದೂಕುಗಳು, ಕತ್ತಿಗಳು, ತ್ರಿಶೂಲ, ಈಟಿಗಳು, ಲಾಠಿ, ರಾಡ್‌ಗಳು ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಹೊಂದಲು ಅನುಮತಿ ಇಲ್ಲ. ಅಂತಹ ವಸ್ತುಗಳನ್ನು ಹೊಂದಿದ ವ್ಯಕ್ತಿಗಳನ್ನು ಸ್ಥಳದಲ್ಲೇ ಬಂಧಿಸಲು ಸೂಚಿಸಲಾಗಿದೆ.
ಇದನ್ನೂ ಓದಿ: ಲೋಕಸಭಾ ಚುನಾವಣೆ: ಪಂಜಾಬ್ ಬಳಿಕ ದೆಹಲಿಯಲ್ಲೂ ಆಪ್ ಏಕಾಂಗಿ ಸ್ಪರ್ಧೆ ಘೋಷಣೆ