ಶ್ರೀನಗರ: 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಜಮ್ಮು ಕಾಶ್ಮೀರ ಸನ್ನದ್ಧಗೊಳ್ಳುತ್ತಿದೆ. ಶ್ರೀನಗರದಲ್ಲಿ ಶುಕ್ರವಾರ ನಡೆಯಲಿರುವ ಯೋಗ ದಿನದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ಧತಾ ಕಾರ್ಯಗಳು ನಡೆದಿವೆ. ಮೂರನೇ ಬಾರಿ ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ಕಣಿವೆ ನಾಡಿಗೆ ಮೋದಿ ಭೇಟಿ ನೀಡಿದ್ದಾರೆ.
ಪ್ರಸಿದ್ಧ ದಾಲ್ ಸರೋವರದ ದಡದಲ್ಲಿರುವ ಶೇರ್-ಎ-ಕಾಶ್ಮೀರ್ ಇಂಟರ್‌ನ್ಯಾಷನಲ್ ಕನ್ವೆನ್ಷನ್ ಸೆಂಟರ್ನಲ್ಲಿ ಸುಮಾರು 7 ಸಾವಿರ ಜನರೊಂದಿಗೆ ಮೋದಿ ಯೋಗಾಭ್ಯಾಸ ಮಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ 1,500 ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಕಾರ್ಯಕ್ರಮವನ್ನು ಅವರು ನೆರವೇರಿಸುವರು ಎಂದು ಪಿಐಬಿ ಪ್ರಕಟಣೆ ತಿಳಿಸಿದೆ.
ಯೋಗದಲ್ಲಿ ಭಾಗಿಯಾಗುತ್ತಿರುವ ಜನರಿಗೆ ಕಳೆದ ಮೂರು ದಿನಗಳಿಂದ ಯೋಗಾಸನ ತರಬೇತಿ ನೀಡಲಾಗಿದೆ. ಕಾಲೇಜುಗಳು, ಸಾರ್ವಜನಿಕ ಉದ್ಯಾನವನಗಳು, ಸ್ಥಳೀಯ ಕ್ರೀಡಾಂಗಣ ಸೇರಿದಂತೆ ಅನೇಕ ಕಡೆಗಳಲ್ಲಿ ಯೋಗ ದಿನಾಚರಣೆಗೆ ಸಿದ್ಧತೆ ನಡೆದಿದೆ. (ಎಎನ್ಐ)
ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆ, ಶ್ರೀನಗರ ಕೆಂಪುವಲಯವಾಗಿ ಘೋಷಣೆ; ಡ್ರೋನ್ ಕೂಡ ಹಾರಿಸುವಂತಿಲ್ಲ