ಮುಂಬೈ (ಮಹಾರಾಷ್ಟ್ರ): ಕಾಂಗ್ರೆಸ್ ಪಕ್ಷಕ್ಕೆ ಸೋಮವಾರ ಏಕಾಏಕಿ ರಾಜೀನಾಮೆ ನೀಡಿದ್ದ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಇಂದು ಆಡಳಿತಾರೂಢ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ದೇಶದ ಅತ್ಯಂತ ಹಳೆ ಪಕ್ಷದೊಂದಿಗೆ ಸುಮಾರು ನಾಲ್ಕು ದಶಕಗಳ ಸಂಬಂಧ ಕಡಿದುಕೊಂಡ ಮರುದಿನವೇ 65 ವರ್ಷದ ಹಿರಿಯ ರಾಜಕಾರಣಿ, ಇದು ತಮ್ಮ ರಾಜಕೀಯ ಜೀವನದ ಹೊಸ ಆರಂಭ ಎಂದು ಹೇಳಿಕೊಂಡಿದ್ದಾರೆ.
ಮುಂಬೈನ ಬಿಜೆಪಿ ಕಚೇರಿಯಲ್ಲಿಂದು ಪಕ್ಷದ ಹಿರಿಯ ನಾಯಕ, ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಚಂದ್ರಶೇಖರ್ ಭವನ್ಕುಲೆ ಸಮ್ಮುಖದಲ್ಲಿ ಅಶೋಕ್ ಚವಾಣ್ ಪಕ್ಷದ ಶಾಲು ಧರಿಸಿ, ಬಾವುಟ ಹಿಡಿದು ಅಧಿಕೃತವಾಗಿ ಕಮಲ ಪಾಳಯಕ್ಕೆ ಸೇರಿದರು. ಈ ವೇಳೆ, ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ''ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬ ಘೋಷಣೆಯೊಂದಿಗೆ ಪ್ರಧಾನಿ ಮೋದಿ ಮಾಡುತ್ತಿರುವ ಕಾರ್ಯವನ್ನು ನೋಡಿ ಪ್ರಭಾವಿತನಾಗಿದ್ದೇನೆ. ಇದು ನನ್ನ ರಾಜಕೀಯ ಜೀವನದ ಹೊಸ ಆರಂಭ. ಮಹಾರಾಷ್ಟ್ರದಲ್ಲಿ ಬಿಜೆಪಿ ಸ್ಥಾನಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಾನು ಮುಂದೆ ಕೆಲಸ ಮಾಡುತ್ತೇನೆ'' ಎಂದು ತಿಳಿಸಿದರು.
ಮುಂಬೈನಲ್ಲಿ ನಡೆದ ಆದರ್ಶ ಹೌಸಿಂಗ್ ಸೊಸೈಟಿಯ ಹಗರಣದಲ್ಲಿ ಚವಾಣ್ ಹೆಸರು ತಳುಕು ಹಾಕಿಕೊಂಡಿದೆ. ಕಳೆದ ವಾರ ಸಂಸತ್ತಿನಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಮಂಡಿಸಿದ ಶ್ವೇತಪತ್ರದಲ್ಲಿ ಈ ಹಗರಣದ ಬಗ್ಗೆ ಉಲ್ಲೇಖಿಸಲಾಗಿದೆ. ಇದರ ಒತ್ತಡದಿಂದ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದೇ ವಿಷಯವಾಗಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ನಾಯಕ ಸಂಜಯ್ ರಾವತ್ ನೀಡಿದ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಚವಾಣ್, ''ಮುಂಬೈ ಹೈಕೋರ್ಟ್ ನನ್ನ ಪರವಾಗಿ ಆದೇಶ ನೀಡಿದೆ. ಕೆಲ ಸಂಸ್ಥೆಗಳು ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿವೆ. ನಾನು ಅದನ್ನು ಎದುರಿಸುತ್ತೇನೆ. ಈ ವಿಷಯ ಕುರಿತು ಯಾವುದೇ ಕಳವಳ ಪಡುವ ಅವಕಶ್ಯತೆ ಇಲ್ಲ ಎಂದು ನಾನು ಭಾವಿಸಿದ್ದೇನೆ'' ಎಂದು ಹೇಳಿದರು.
ಮುಂದುವರೆದು, ''ನಾನು ಇದುವರೆಗೂ ಅಭಿವೃದ್ಧಿ ಪರ ಮತ್ತು ಸಕಾರಾತ್ಮಕ ಮನೋಭಾವದಿಂದ ನನ್ನ ಕೆಲಸ ಮಾಡಿಕೊಂಡು ಬಂದಿದ್ದೇನೆ. ನಾನು ಸಿಎಂ ಆಗಿದ್ದಾಗ ಫಡ್ನವೀಸ್ ಪ್ರತಿಪಕ್ಷದಲ್ಲಿದ್ದರು. ನಾವು ಒಬ್ಬರನ್ನೊಬ್ಬರು ಬೆಂಬಲಿಸುತ್ತಲೇ ಬಂದಿದ್ದೇವೆ. ನಾನು ಪಕ್ಷಕ್ಕಾಗಿ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದೇನೆ. ಮುಂದೆಯೂ ನಾನು ಬಿಜೆಪಿಗೆ ನನ್ನ ಶಕ್ತಿ ಮೀರಿ ಕೊಡುಗೆ ನೀಡುತ್ತೇನೆ'' ಎಂದು ತಿಳಿಸಿದರು.
ಇದೇ ವೇಳೆ, ಕಾಂಗ್ರೆಸ್ನ ಇತರ ನಾಯಕರು ಏನಾದರೂ ಬಿಜೆಪಿಗೆ ಬರುತ್ತಾರಾ ಎಂಬ ಪ್ರಶ್ನೆಗೆ, ''ನಾನು ಕಾಂಗ್ರೆಸ್ನ ಯಾವುದೇ ನಾಯಕರನ್ನು ಕರೆದಿಲ್ಲ. ಫಡ್ನವಿಸ್ ಅವರಂಥ ಬಿಜೆಪಿ ನಾಯಕರು ಇದರ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ. ಇಂದು ನಾನು ಮಾತ್ರ ಸೇರ್ಪಡೆಯಾಗಿದ್ದೇನೆ'' ಎಂದರು.
ಇದನ್ನೂ ಓದಿ: ಮಾಜಿ ಸಿಎಂ ಅಶೋಕ್ ಚವಾಣ್ ಇಂದೇ ಬಿಜೆಪಿ ಸೇರ್ಪಡೆ; ರಾಜ್ಯಸಭೆಗೆ ನಾಮನಿರ್ದೇಶನ ಸಾಧ್ಯತೆ