ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಚುನಾವಣೆಗೆ ಮುನ್ನ ಮಧ್ಯಂತರ ಜಾಮೀನಿನ ಮೇಲೆ ಹೊರ ಬಂದಿದ್ದ ಅವಾಮಿ ಇತ್ತೆಹಾದ್ ಪಕ್ಷದ (ಎಐಪಿ) ಮುಖ್ಯಸ್ಥ ಮತ್ತು ಬಾರಾಮುಲ್ಲಾ ಕ್ಷೇತ್ರದ ಸಂಸದ ಶೇಖ್ ಅಬ್ದುಲ್ ರಶೀದ್ ಅವರ ಜಾಮೀನು ಅವಧಿ ಮುಗಿದಿದ್ದು, ಅವರು ತಿಹಾರ್ ಜೈಲಿಗೆ ಮರಳಿದ್ದಾರೆ.
ಇಂಜಿನಿಯರ್ ರಶೀದ್ ಎಂದೇ ಜನಪ್ರಿಯರಾಗಿರುವ ಶೇಖ್ ಅಬ್ದುಲ್ ರಶೀದ್, 2019ರಿಂದಲೂ ತಿಹಾರ್ ಜೈಲಿನಲ್ಲಿದ್ದಾರೆ. 2017ರಲ್ಲಿ ಭಯೋತ್ಪಾದಕರ ಗುಂಪಿಗೆ ನಿಧಿ ನೀಡಿದ ಆರೋಪದ ಮೇಲೆ ಎನ್‌ಐಎ ಅವರನ್ನು ಬಂಧಿಸಿತ್ತು.
ಜೈಲಿನಲ್ಲಿದ್ದುಕೊಂಡೇ ಲೋಕಸಭಾ ಚುನಾವಣೆಯಲ್ಲಿ ಗೆಲುವು ಕಂಡ ರಶೀದ್ ಅವರಿಗೆ ಸೆಪ್ಟೆಂಬರ್ 7ರಂದು ದೆಹಲಿ ಹೈ ಕೋರ್ಟ್ ಅಕ್ಟೋಬರ್ 3ರವರೆಗೆ ಜಾಮೀನು ನೀಡಿತ್ತು. ಇದಾದ ಬಳಿಕ ಎರಡು ಬಾರಿ ಜಾಮೀನು ಅವಧಿ ವಿಸ್ತರಣೆ ಮಾಡಲಾಗಿತ್ತು. ಮೊದಲ ಅವಧಿಯಲ್ಲಿ ಅಕ್ಟೋಬರ್ 13ರವರೆಗೆ ವಿಸ್ತರಣೆಯಾಗಿದ್ದು, ಬಳಿಕ ಅಕ್ಟೋಬರ್ 28ರವರೆಗೆ ಜಾಮೀನು ನೀಡಿತ್ತು.
ಇಂದು ದೆಹಲಿ ಕೋರ್ಟ್ ರಶೀದ್ ಅವರ ಸಾಮಾನ್ಯ ಜಾಮೀನು ಅರ್ಜಿಯ ಕುರಿತು ಆದೇಶ ಪ್ರಕಟಿಸುವ ಸಾಧ್ಯತೆ ಇದೆ. ಜಮ್ಮು ಮತ್ತು ಕಾಶ್ಮೀರ ಚುನಾವಣೆಗೆ ಪ್ರಚಾರದ ಹಿನ್ನೆಲೆಯಲ್ಲಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಚಂದರ್ ಜಿತ್ ಸಿಂಗ್ ಜಾಮೀನು ಮಂಜೂರು ಮಾಡಿದ್ದರು. ಬಳಿಕ ತಮ್ಮ ತಂದೆಯ ಆರೋಗ್ಯ ಕಾರಣ ನೀಡಿದ ರಶೀದ್ ಅವರಿಗೆ ಅಕ್ಟೋಬರ್ 28ರವರೆಗೆ ಜಾಮೀನು ವಿಸ್ತರಣೆ ಮಾಡಿ ಆದೇಶಿಸಲಾಗಿತ್ತು.
ರಶೀದ್ ಜಾಮೀನು ಕೋರಿ ಸಲ್ಲಿಸಿರುವ ದಾಖಲೆಗಳನ್ನು ಎನ್‌ಐಎ ಪರಿಶೀಲಿಸಿದ್ದು, ಆರೋಪಿಯ ತಂದೆಯ ಆರೋಗ್ಯ ಸ್ಥಿತಿಯ ಕಾರಣದಿಂದ ಜಾಮೀನು ಅರ್ಜಿಯನ್ನು ವಿರೋಧಿಸುತ್ತಿಲ್ಲ ಎಂದು ಹೇಳಿದೆ.
ರಶೀದ್ ಅವರು ಲೋಕಸಭಾ ಚುನಾವಣೆಯಲ್ಲಿ ಜೈಲಿನಿಂದಲೇ ಸ್ಪರ್ಧಿಸಿ, ಬಾರಮುಲ್ಲಾ ಕ್ಷೇತ್ರದಲ್ಲಿ ಒಮರ್ ಅಬ್ದುಲ್ಲಾ ಅವರನ್ನು ಸೋಲಿಸಿ, ಪ್ರಚಂಡ ಗೆಲುವು ಕಂಡಿದ್ದರು.
ಇದನ್ನೂ ಓದಿ: ಇಂಜಿನಿಯರ್ ರಶೀದ್ ಸವಾಲು ಸ್ವೀಕರಿಸಿದ ಮಾಜಿ ಸಿಎಂ ಒಮರ್ ಅಬ್ದುಲ್ಲಾ: ಏನದು ಚಾಲೆಂಜ್?